ಕರಾವಳಿ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲೊಂದಾದ ಉಡುಪಿ ಜಿಲ್ಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಅಸ್ಮೀತೆಯನ್ನು ಕಾಪಾಡಿಕೊಂಡು ಬಂದಿರುವ ಪ್ರದೇಶವೇ ಕುಂದಾಪುರ. ತನ್ನದೇ ಆದ ಕುಂದಗನ್ನಡ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಆರಾಧನೆ, ಕಲೆ, ಶಿಕ್ಷಣ ಹೀಗೆ ಬಹು ಬಗೆಯ ಅನನ್ಯತೆಯನ್ನು ಹೊಂದಿರುವ ಕುಂದಾಪುರ ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಕಡಲತೀರ, ಪಶ್ಚಿಮ ಘಟ್ಟಗಳನ್ನೊಳಗೊಂಡ ಪ್ರಕೃತಿ ಸೌಂದರ್ಯದ ನೆಲೆಬೀಡಾಗಿ, ಧಾರ್ಮಿಕ ಆರಾಧನಾ ಕೇಂದ್ರವಾಗಿ, ಜಗದ್ವಿಖ್ಯಾತಿ ಪಡೆದಿರುವ ಕುಂದಾಪುರ ಪರವೂರ ಜನರನ್ನು ಬಹುಬೇಗನೆ ತನ್ನೆಡೆಗೆ ಆಕರ್ಷಿಸುವ ಕೇಂದ್ರ.
ಕುಂದಾಪುರ ಹಾಗೂ ಬೈಂದೂರು ತಾಲ್ಲೂಕು ಕೇಂದ್ರಗಳನ್ನು ಹೊಂದಿರುವ ಕುಂದಾಪುರ ತನ್ನ ಅಕ್ಕಪಕ್ಕದ ತಾಲೂಕುಗಳಾದ ಬ್ರಹ್ಮಾವರ, ಹೆಬ್ರಿ ಭಾಗಗಳಲ್ಲಿಯೂ ತನ್ನ ಭಾಷಾ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿರುವುದು ವಿಶೇಷ. ಕುಂದಗನ್ನಡ ಭಾಷೆ, ಕೊಲ್ಲೂರು ಮುಕಾಂಬಿಕಾ ದೇಗುಲ, ಮೀನುಗಾರಿಕೆ, ಮೀನಿನ ಖಾದ್ಯಗಳು, ಹೆಂಚು ಮತ್ತು ಗೇರು ಬೀಜ ಉದ್ಯಮ ಹಾಗೂ ಕಡಲ ತೀರಗಳಿಂದಾಗಿ ಬಹಳ ಹಿಂದಿನಿಂದಲೂ ತನ್ನನ್ನು ಜಾಗತೀಕವಾಗಿ ತೆರೆದುಕೊಂಡ ತಾಣ.
ಬಡಗು ತಿಟ್ಟಿನ ಯಕ್ಷಗಾನ ಕಲೆ, ನಾಗಾರಾಧನೆ, ಕುಣಿತ ಭಜನೆ, ಹೌಂದರಾರನ ಒಲಗ, ಹೂವಿನ ಕೋಲು, ಹೋಳಿ ಹಬ್ಬ, ದೈವಾರಾಧನೆ, ಸಾವಿರ ಹಣ್ಣಿನ ವಸಂತ ,ಗ್ರಾಮೀಣ ಕ್ರೀಡೆಯಾದ ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ಕುಂದಾಪುರದ ಪಾತ್ರ ಆಮೂಲಾಗ್ರವಾದುದು.
ಐತಿಹಾಸಿಕವಾಗಿ, ಪಂಚಗಂಗಾವಳಿ ನದಿ ತೀರದಲ್ಲಿ ಕುಂದವರ್ಮನೆಂಬ ರಾಜ ಕಟ್ಟಿಸಿದ ಕುಂದೇಶ್ವರ ದೇವಾಲಯದಿಂದಲೇ ಈ ಭಾಗಕ್ಕೆ ಕುಂದಾಪುರ ಎನ್ನುವ ಹೆಸರು ಬಂದಿದೆ ಎನ್ನುವುದು ಹಲವರ ಅಭಿಪ್ರಾಯ. ಇಡೀ ಕುಂದಾಪುರದ ಅಸ್ತಿತ್ವ ಹಾಗೂ ಇತಿಹಾಸವನ್ನು ಎತ್ತಿಹಿಡಿದಿರುವುದು ಕುಂದಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಕುಂದೇಶ್ವರ ದೇವಸ್ಥಾನ. ಹಾಗೆಯೇ ಈ ಭಾಗದಲ್ಲಿ ಜನತೆ ಮಲ್ಲಿಗೆ (ಕುಂದ) ಹೂವನ್ನು ಬೆಳೆಯುತ್ತಿದ್ದ ಕಾರಣದಿಂದಾಗಿ ಕುಂದಾಪುರ ಎನ್ನುವ ಹೆಸರು ಬಂದಿರಬಹುದು ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ಗ್ರಹ ನಿರ್ಮಾಣದ ಪ್ರಮುಖ ಸಾಮಾಗ್ರಿಗಳಲ್ಲೊಂದಾದ ಕಂಬ (ಕುಂದ) ಎನ್ನುವ ಪದದಿಂದಲೂ ಕುಂದಾಪುರ ಎನ್ನುವ ಹೆಸರು ಬಂದಿರಬಹುದೆಂಬುದು ಇನ್ನೂ ಕೆಲವರು ಅಭಿಪ್ರಾಯ ಪಟ್ಟರೂ, ಕುಂದೇಶ್ವರ ದೇವರು ಈ ಭಾಗದಲ್ಲಿ ಸ್ಥಾಪನೆಗೊಂಡಿರುವುದೇ ಕುಂದಾಪುರ ಹೆಸರಿಗೆ ತಿಲಕ ಪ್ರಾಯವಾಗಿದೆ.
ಐತಿಹಾಸಿಕವಾಗಿ ವೈಭವ ಮೆರೆದ ವಿಜಯ ನಗರ ಸಾಮ್ರಾಜ್ಯದ ಪ್ರಭಾವಕ್ಕೆ ಒಳಪಟ್ಟಿದ್ದ ಈ ಪ್ರದೇಶ ಅದರ ಪತನದ ನಂತರ ಸಮಯದಲ್ಲಿ ಕೆಳದಿ ರಾಜರ ನಿಯಂತ್ರಣಕ್ಕೆ ಒಳಪಟ್ಟಿತ್ತು ಎನ್ನುವುದು ಇತಿಹಾಸ. ಈಗಿನ ಬಸ್ರೂರು ಹಾಗೂ ಗಂಗೊಳ್ಳಿಯು ಹಿಂದೆ ವಾಣಿಜ್ಯ ಬಂದರುಗಳಾಗಿದ್ದು ವಿದೇಶಿ ವ್ಯಾಪಾರದ ಪ್ರಮುಖ ತಾಣಗಳಾಗಿದ್ದವು. ಬಸ್ರೂರು, ಗಂಗೊಳ್ಳಿ ಹಾಗೂ ಬಾರ್ಕೂರು ಕ್ರಿ.ಶ. 16 ನೇ ಶತಮಾನದಲ್ಲಿ ಪೋರ್ಚುಗೀಸರ ಪ್ರಾಬಲ್ಯಕ್ಕೆ ಒಳಪಟ್ಟಿತು ಎನ್ನಲಾಗಿದೆ. ಗಂಗೊಳ್ಳಿಯಲ್ಲಿ ಪೋರ್ಚುಗೀಸರಿಂದ ನಿರ್ಮಿತವಾದ ಚರ್ಚ್ ಇದಕ್ಕೆ ಸಾಕ್ಷಿ ಎನ್ನುವಂತಿದೆ. ಟಿಪ್ಪು ಸುಲ್ತಾನನ ಪ್ರಾಬಲ್ಯಕ್ಕೂ ಒಳಪಟ್ಟಿದ್ದ ಈ ಪ್ರದೇಶ ನಂತರದ ದಿನಗಳಲ್ಲಿ ಬ್ರಿಟಿಷರ ಪ್ರಾಬಲ್ಯಕ್ಕೆ ಒಳಪಟ್ಟಿತ್ತು.
ಕಾರಣೀಕ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಆನೆಗುಡ್ಡೆ ವಿನಾಯಕ -ಹಟ್ಟಿಯಂಗಡಿ ಸಿದ್ದಿವಿನಾಯಕ ಹಾಗೂ ಗುಡ್ಡಟ್ಟು ವಿನಾಯಕ ದೇವಸ್ಥಾನಗಳು, ಮಂದಾರ್ತಿ-ಕಮಲಶಿಲೆ-ಸೌಕೂರು ಶ್ರಿ ದುರ್ಗಾಪರಮೇಶ್ವರಿ ದೇವಸ್ಥಾನಗಳು, ಕೋಟ ಅಮ್ರತೇಶ್ವರಿ ದೇವಸ್ಥಾನ, ಗುಡ್ಡಮ್ಮಾಡಿ- ಕಾಳಾವರ ನಾಗ ದೇವಸ್ಥಾನಗಳು, ಬೊಬ್ಬರ್ಯ ದೈವಸ್ಥಾನಗಳು, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನ, ಸಾಲಿಗ್ರಾಮದ ಶ್ರೀಗುರು ನರಸಿಂಹ ಹಾಗೂ ಆಂಜನೇಯ ದೇವಸ್ಥಾನ, ಕಿರಿಮಂಜೇಶ್ವರದ ಕಿರಿ ಮುನೀಶ್ವರ, ಸೇನೇಶ್ವರ, ಮರವಂತೆ ವರಾಹ ಸ್ವಾಮಿ ದೇವಸ್ಥಾನ, ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಕುಂಭಾಶಿ, ಶಿವಾಲಯಗಳು, ದೇವಿ ದೇವಸ್ಥಾನಗಳು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿರುತ್ತದೆ.
ಇಲ್ಲಿನ ವಿಶ್ವವಿಖ್ಯಾತ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಶಂಕರಾಚಾರ್ಯರು ಪ್ರತಿಷ್ಟಾಪಿಸಿದ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳಿಗರೂ ಸೇರಿದಂತೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿರುವುದು ಕುಂದಾಪುರದ ಖ್ಯಾತಿಯನ್ನು ಜಗದ್ವಿಖ್ಯಾತಿಗೊಳಿಸಿದೆ.
ಗಂಗೊಳ್ಳಿ – ಕುಂದಾಪುರ ಸೇರಿದಂತೆ ಕುಂದಾಪುರದ ವಿವಿಧ ಭಾಗದಲ್ಲಿರುವ ಚರ್ಚ್ ಗಳುಈ ಭಾಗದ ಕ್ರೈಸ್ತ ಸಮುದಾಯದ ಆರಾಧನಾ ಕೇಂದ್ರಗಳಾಗಿದೆ. ಇತ್ತೀಚಿಗೆ ಕುಂದಾಪುರದ ಕೋಡಿಯಲ್ಲಿ ನಿರ್ಮಾಣಗೊಂಡ ಪರಿಸರ ಸ್ನೇಹಿ ಮಸೀದಿ ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದು ಕೊಂಡಿದೆ. ಪಂಚಗಂಗಾವಳಿ ನದಿ ಸಂಗಮ ತೀರ, ಕೋಡಿ- ಗಂಗೋಳ್ಳಿ ಸೀ ವಾಕ್, ಗಂಗೋಳ್ಳಿ-ಮರವಂತೆ – ಕೊಡೇರಿ ಮೀನುಗಾರಿಕಾ ಬಂದರುಗಳು, ಮರವಂತೆ ಬೀಚ್, ಕೋಡಿ ಬೀಚ್, ಕೋಡಿ ದೀಪ ಸ್ತಂಭ, ಬೈಂದೂರಿನ ಸೋಮೇಶ್ವರ ಬೀಚ್, ಒತ್ತಿನೆಣೆ ಕ್ಷೀತಿಜ ನೇಸರಧಾಮ, ಕೊಡಚಾದ್ರಿ ಬೆಟ್ಟ, ಆನೆಜರಿ ನೈಸರ್ಗಿಕ ತಾಣ, ಅಬ್ಬಿ ಫಾಲ್ಸ್ , ಗೋವಿಂದ ತೀರ್ಥ ಬೆಳ್ಕಲ್ ಫಾಲ್ಸ್, ತೂದಳ್ಳಿ – ಕೂಸಳ್ಳಿ ಫಾಲ್ಸ್ , ವಾರಾಹಿ ಭೂಗರ್ಭ ವಿದ್ಯುದಾಗರ ಹೊಸಂಗಡಿ, ಮೆಟ್ಕಲ್ ಗುಡ್ಡ, ಮಾಣಿ ಡ್ಯಾಮ್, ಮೂಡುಗಿಳಿಯಾರು ಸ್ವಾಮಿ ವಿವೇಕಾನಂದ ಪ್ರತಿಮೆ, ಹಂಗಳೂರು ಶ್ರೀ ಆಂಜನೇಯ ಪ್ರತಿಮೆ, ಕಾರಂತ ಥೀಮ್ ಪಾರ್ಕ್ ಕೋಟ ಇತ್ಯಾದಿ ಈ ಭಾಗದ ಪ್ರಮುಖ ಪ್ರೇಕ್ಷಣೀಯ ಹಾಗೂ ಆಕರ್ಷಣಿಯ ತಾಣಗಳಾಗಿದೆ.
ಕನ್ನಡದ ಖ್ಯಾತ ಸಾಹಿತಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತ, ಗುಲ್ವಾಡಿ ವೆಂಕಟರಾಯರು, ಮೊಗೇರಿ ಗೋಪಾಲಕೃಷ್ಣ ಅಡಿಗರು, ವೈದೇಹಿ, ದುಂಡಿರಾಜ್, ಮಿತ್ರ ವೆಂಕಟರಾಜ್, ಯಾಕೂಬ್ ಖಾದರ್ ಗುಲ್ವಾಡಿ, ಸತೀಶ ಚಪ್ಪರಿಕೆ ಈ ಭಾಗದವರೇ ಆಗಿದ್ದಾರೆ. ಕನ್ನಡ ಹಾಗೂ ಭಾರತೀಯ ಚಿತ್ರರಂಗದ ಸಿನೆಮಾ ನಿರ್ದೇಶಕ ಗುರುದತ್, ನಟ ಕಾಶಿನಾಥ್, ಸುನೀಲ್, ಉಪೇಂದ್ರ, ರಮೇಶ್ ಭಟ್, ನಟಿ ದೀಪಿಕಾ ಪಡುಕೋಣೆ, ರಕ್ಷಿತಾ, ಸಂಗೀತ ನಿರ್ದೇಶಕ ಯೋಗರಾಜ್ ಭಟ್, ರವಿ ಬಸ್ರೂರು, ನಟ ರಕ್ಷಿತ್ ಶೆಟ್ಟಿ , ನಿರ್ದೇಶಕ ರಿಶಬ್ ಶೆಟ್ಟಿ , ಕ್ರೀಡಾ ತಾರೆಗಳಾದ ಪ್ರಕಾಶ್ ಪಡುಕೋಣೆ, ವಿಶ್ವನಾಥ ಗಾಣಿಗ ಬಾಳಿಕೆರೆ, ಗುರುರಾಜ ಪೂಜಾರಿ, ಅಶ್ವಿನಿ ಅಕ್ಕುಂಜೆ ಕುಂದಾಪುರದವರೇ ಆಗಿದ್ದಾರೆ.
ಬೆಂಗಳೂರು, ಮುಂಬಯಿ ಸೇರಿದಂತೆ ಜಗತ್ತಿನಲ್ಲಿ ಬೇರೆ ಬೇರೆ ಭಾಗಗಳಲ್ಲಿ ಹೋಟೆಲ್ ಉದ್ಯಮ, ಬ್ಯಾಂಕಿಂಗ್ ಕ್ಷೇತ್ರ, ವೈದ್ಯಕೀಯ, ವಿಜ್ಞಾನ, ರಾಜಕೀಯ, ಸಮಾಜ ಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕುಂದಾಪುರದವರು ಈ ಭಾಗದ ಸಂಸ್ಕೃತಿಯನ್ನು ಜಗತ್ತಿನ ಮೂಲೆ ಮೂಲೆಗಳಲ್ಲಿ ಪಸರಿಸುತ್ತಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ಉದ್ಯಮ ಹಾಗೂ ಉದ್ಯೋಗವನ್ನು ಸೃಷ್ಟಿಸಿಕೊಂಡವರಿದ್ದಾರೆ.
ರಾಜಕೀಯವಾಗಿ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಉಡುಪಿ-ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಈ ಭಾಗದಲ್ಲಿ ತನ್ನ ರಾಜಕೀಯ ವ್ಯಾಪ್ತಿಯನ್ನು ಹೊಂದಿದೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕುಂದಾಪುರ ತನ್ನನ್ನು ಅನನ್ಯವಾಗಿ ಗುರುತಿಸಿಕೊಂಡಿರುತ್ತದೆ.