ಕುಂದಾಪುರ, (ಅಕ್ಟೋಬರ್ 23): ‘ನಹೀ ಜ್ಞಾನೇನ ಸದೃಶಂ’ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಹಾಗೂ ವಿದ್ಯಾರ್ಥಿಗಳು ಸೋತಾಗ ಹೆದರದೆ ನಾವೆಲ್ಲಿ ಎಡವಿದ್ದೇವೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳುವುದರ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಬೇಕು ಎಂದು ವಿವೇಕ ಪದವಿ ಪೂರ್ವ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ಸಂತೋಷ್ ನೀಲಾವರ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ವಿಜ್ಞಾನ ವಿಭಾಗ ಆಯೋಜಿಸಿದ ‘ಟೆಕ್ಮಂಥನ್ 4.0’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇನ್ನೋರ್ವ ಅತಿಥಿಗಳಾದ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಶ್ರೀರಾಮ್ ನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಬಹಳ ಸಮರ್ಪಕವಾಗಿ ಬಳಸಿಕೊಂಡು ಹೊಸ ಹೊಸ ಸಂಶೋಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಕ್ತನ ವಿದ್ಯಾರ್ಥಿ ದೇವಿಪ್ರಸಾದ್ ಶೆಟ್ಟಿ ‘ಮೌಲ್ಯ’ಎನ್ನುವ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿಯುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾದ ಕಾರಣ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಟೆಕ್ಮಂಥನ್ ಕಾರ್ಯಕ್ರಮ ವಿಶೇಷವಾಗಿ ಮೂಡಿಬಂದಿದೆ. ಭವಿಷ್ಯದಲ್ಲಿ ಇನ್ನೂ ಇಂಥ ವಿಭಿನ್ನ ಕಾರ್ಯಕ್ರಮ ರೂಪಿಸುವಂತಾಗಲಿ ಎಂದು ಅಭಿನಂದಿಸಿದರು.
ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಶುಭಹಾರೈಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀ ಪ್ರಣಮ್ ಆರ್. ಹಾಗೂ ರಶ್ಮಿ ಗಾವಡಿ ಉಪಸ್ಥಿತರಿದ್ದರು. ವಿಭಿನ್ನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.
ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಜಯಲಕ್ಷ್ಮಿ ಸ್ವಾಗತಿಸಿ, ರಶ್ಮಿ ಗಾವಡಿ ಮತ್ತು ಶ್ರೀಮತಿ ವಿಲ್ಮಾ ಅತಿಥಿಗಳನ್ನು ಪರಿಚಯಿಸಿ, ಶ್ರೀ ಗಿರಿರಾಜ್ ಭಟ್ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ಶ್ರೀ ಪ್ರಣಮ್ ಆರ್. ವಂದಿಸಿದರು. ಗಣಿತಶಾಸ್ತç ವಿಭಾಗದ ಪ್ರಾಧ್ಯಾಪಕರಾದ ನಿರ್ಮಲ ಕಾರ್ಯಕ್ರಮವನ್ನು ನಿರೂಪಿಸಿದರು.