ಕುಂದಾಪುರ (ಆಗಸ್ಟ್ 16): ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ನಿರಂತರ ತರಬೇತಿ ನೀಡುವ ಹಾಗೂ ಪದವಿಪೂರ್ವ ಶಿಕ್ಷಣ ಅರ್ಹತೆಯ ಮೇರೆಗೆ ರಾಜ್ಯ ಸರ್ಕಾರ ಆಯೋಜಿಸುವ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜಿನ ಆವರಣದಲ್ಲಿಯೇ ತರಬೇತಿ ನೀಡುವ ದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷ 2025-26 ರಿಂದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹೊಸ ಕೋರ್ಸ್ B.Com (SSC)ಯನ್ನು ಆರಂಭಿಸಿದ್ದು, ಆಗಸ್ಟ್ 16 ರಂದು ವಿಧ್ಯುಕ್ತ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಕ್ತನ ವಿದ್ಯಾರ್ಥಿನಿ, SSC-GD-2025 ಅರ್ಹತಾ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದ ಕುಮಾರಿ ವಿನುಷ ಇವರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅರಿವು ಮತ್ತು ತಯಾರಿಯ ಕುರಿತು ಮಾಹಿತಿ ನೀಡಿದರು. ಜೊತೆಗೆ ಸರ್ಕಾರಿ ನೌಕರಿಯ ಕನಸನ್ನು ಪದವಿ ಹಂತದಲ್ಲಿಯೇ ಹೊಂದುವAತಾದಲ್ಲಿ ವಿದ್ಯಾರ್ಥಿ ತನ್ನ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹೆಚ್ಚಿನ ಸಹಾಯವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಇವರು ಮಾತನಾಡಿ, ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಮತ್ತು ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕಾಗಿ ಅವಶ್ಯಕತೆಗಳನ್ನು ಪೂರೈಸುವುದು ಕಾಲೇಜಿನ ಮಹೋದ್ದೇಶ, ಈ ಕುರಿತು ಬಿ.ಕಾಂ. ಪದವಿ ಶಿಕ್ಷಣದೊಂದಿಗೆ ಸಿಬ್ಬಂದಿ ಆಯ್ಕೆ ನಿಯೋಗ (B.Com with SSC)ವನ್ನು ವಾಣಿಜ್ಯ ವಿಭಾಗ ಪರಿಚಯಿಸುತ್ತಿರುವುದು ಸ್ವಾಗತಾರ್ಹ ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ವಾಸುದೇವ್ ಭಟ್ ಪ್ರಾಸ್ತಾವಿಸಿ, ಕಾರ್ಯಕ್ರಮದ ಸಂಯೋಜಕರು ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶರತ್ ಕುಮಾರ್ ಸ್ವಾಗತಿಸಿ, ಶ್ವೇತಾ ಬಿ. ಅತಿಥಿಗಳನ್ನು ಪರಿಚಯಿಸಿ, ಕಿಶೋರ್ ಕುಮಾರ್ ವಂದಿಸಿ, ಪೂಜಾ ಕುಂದರ್ ನಿರೂಪಿಸಿದರು. ವಿದ್ಯಾರ್ಥಿನಿ ಮನಿಷಾ ಪ್ರಾರ್ಥಿಸಿದರು. ಇದೇ ಸಂದರ್ಭ ಸರ್ಕಾರಿ ಉದ್ಯೋಗದ ಮಹತ್ವದ ಕುರಿತು ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರು ನಾಟಕ ಎಲ್ಲರ ಗಮನ ಸೆಳೆಯಿತು.











