ಉಡುಪಿ (ಏ, 15): ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಕೋವಿಡ್ ಲಸಿಕಾ ಮಾಹಿತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಂಸ್ಥೆಯ ವಿದ್ಯಾರ್ಥಿಗಳು ಬಂಟಿಕಲ್ ಕಾಲೇಜಿನ ಆಸುಪಾಸು, ಹಾಗೂ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ 45ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ವಿವರಿಸಿ, ಅವರುಗಳಲ್ಲಿ ಜಾಗೃತಿಯನ್ನು ಮೂಡಿಸಿ, ಲಸಿಕೆ ಪಡೆಯಲು ಜನರಲ್ಲಿ ಇರುವ ಹಿಂಜರಿಕೆ ದೂರ ಮಾಡಿವುದರ ಜೊತೆಗೆ ಹೆಚ್ಚು ಮಂದಿ ಲಸಿಕೆ ಪಡೆಯುವಂತೆ ಉತ್ತೇಜಿಸಿದರು.
ಎಪ್ರಿಲ್ 11 ಜ್ಯೋತಿಭಾ ಫುಲೆ ಅವರ ಜನ್ಮದಿನದಂದು ಮಹಿಳೆಯರಿಗೆ ಲಸಿಕೆ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳು ಪ್ರೇರೆಪಿಸಿದರು. ಹಾಗೆಯೇ ಏಪ್ರಿಲ್ 14ರಂದು ಡಾ.ಅಂಬೇಡ್ಕರ್ ಜಯಂತಿಯಂದು ಯುವಜನತೆ, ಶೋಷಿತ ವರ್ಗಗಳು ಹಾಗೂ ಕಾನೂನು ವಲಯದ ವೃತ್ತಿಪರರಿಗೆ ಲಸಿಕೆ ತೆಗೆದುಕೊಳ್ಳುವಂತೆ ಉತ್ತೇಜಿಸಿ ಮಹಾತ್ಮರ ಜನ್ಮದಿನಾಚರಣೆಗಳನ್ನು ಅರ್ಥಪೂರ್ಣವಾಗುವ ರೀತಿಯಲ್ಲಿ ಅಭಿಯಾನವನ್ನು ನಡೆಸಿದರು. ಕೇಂದ್ರ, ರಾಜ್ಯ ಸರಕಾರ ಹಾಗೂ ವಿಶ್ವವಿದ್ಯಾನಿಲಯದ ಮಾರ್ಗದರ್ಶನದಂತೆ ಈ ಅಭಿಯಾನವನ್ನು ಜ್ಯೋತಿಭಾ ಪುಲೆ ಅವರ ಜನ್ಮದಿನವಾದ ಏಪ್ರಿಲ್ 11ರಂದು ಪ್ರಾರಂಭಿಸಿ, ಡಾ. ಬಿ.ಆರ್ . ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14ರ ವರೆಗೆ ಈ ಮಾಹಿತಿ ಅಭಿಯಾನವನ್ನು ಕೈಗೊಂಡರು.
ರಾಷ್ಟ್ರೀಯ ಸೇವಾ ಘಟಕದ ಯೋಜನಾಧಿಕಾರಿ ನಾಗರಾಜ್ ರಾವ್ರವರು ಅಭಿಯಾನವನ್ನು ಆಯೋಜಿಸಿದ್ದರು. ಕಾಲೇಜಿನ ಪ್ರಾಧ್ಯಾಪಕರುಗಳಾದ ಶ್ರೀ ಗಣೇಶ್ ಶೆಟ್ಟಿ, ರಮ್ಯಶ್ರೀ, ಮಧುಕರ್ ನಾಯಕ್, ನಿಶಾ, ರೀನಾ ನಜರತ್ ಹಾಗೂ ಮಧುಸೂನ ರಾವ್ರವರು ಈ ಅಭಿಯಾನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.