ಪ್ರವೀಣ ರಾಘವನನ್ನ ಕಂಡವನೆ ‘ನಿಂಗ್ ಮರ್ಯಾದಿ ಇಲ್ಲ್ಯನ, ನಿಮ್ಮಂತರೆಲ್ಲ ನಮ್ಮನಿಗ್ ಬಪ್ಕಾಗ ಅಂದೇಳಿ ಗುತ್ತಿಲ್ಲ್ಯ. ಅಪ್ಪಯ್ಯ ನಿನ್ನೆಯೇ ಹೇಳಿರ್. ನೀನ್ ಒಳಗ್ ಬಂದ್ರ್ ನಾನ್ ಅಪ್ಪಯ್ಯ ನ್ ಕರೀತೆ ಅಷ್ಟೆ’ ಎಂದ. ರಾಘವನಲ್ಲಿ ಕಣ್ಣೀರೊಂದನ್ನು ಬಿಟ್ಟು ಬೇರೇನು ಉಳಿದಿರಲಿಲ್ಲ.
ಅಂದು ಇಡೀ ಶಾಲೆಗೆ ಶಾಲೆಯೇ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿತ್ತು. ಶಾಲೆಯ ಸೂರಿನ ಮೇಲೆ, ಊರಿಗೆ ಮುಖಮಾಡಿ ಕಟ್ಟಿರುವ, ಉದ್ದ ಮೂತಿಯ ಧ್ವನಿವರ್ಧಕಗಳು , ಒಮ್ಮೊಮ್ಮೆ ಇಂಪಾದ ಹಾಡುಗಳನ್ನು ಸೂಸಿದರೆ, ಮತ್ತೊಮ್ಮೆ ಯಾವುದೊ ಕೆಲಗಳಿಗಾಗಿ, ಶಾಲೆಯ ಗೃಹ ಮಂತ್ರಿಯನ್ನೋ, ಮುಖ್ಯ ಮಂತ್ರಿಯನ್ನೋ ಕರೆಯುತ್ತಿದ್ದವು. ಹಾಡು, ರಂಗೋಲಿ, ಆಸನದ ವ್ಯವಸ್ಥೆ, ಸ್ವಚ್ಚತೆ, ಮುಂತಾದ ಕೆಲಸಗಳಲ್ಲಿ ತೊಡಗಿರುವ ಮಕ್ಕಳ ದಂಡು ಒಂದೆಡೆಯಾದರೆ, ಅತಿಥಿ ಗಳ ಸ್ವಾಗತ, ವೇದಿಕೆ ಮೇಲಿನ ಸಭಾ ಕಾರ್ಯಕ್ರಮದ ಸಿದ್ಧತೆ ಯಲ್ಲಿ ತೊಡಗಿರುವ ಅಧ್ಯಾಪಕರ ದಂಡು ಮತ್ತೊಂದೆಡೆ. ಎಲ್ಲರೂ ಅವರವರಿಗೆ ವಹಿಸಿರುವ ಜವಾಬ್ದಾರಿಯಲ್ಲಿ ಸಾಕಷ್ಟು ತಲ್ಲೀನರಾಗಿದ್ದರು. ಆದರೆ, ಶಾಲೆಯ ಮುಖ್ಯೋಪಾಧ್ಯಾಯರಾದ ಅನಂತ ಮೇಸ್ಟ್ರು ಮಾತ್ರ, ಅದ್ಯಾರಿಗೋ ಫೋನು ಹಚ್ಚಿ, ನೆಟ್ವರ್ಕ್ ಸಿಗದಾಗಿ, ಅತ್ತಿಂದಿತ್ತ ಓಡಾಡುತ್ತ, ಕೊಂಚವೇ ಗಲಿಬಿಲಿಗೊಂಡಂತೆ ಕಾಣುತ್ತಿದ್ದರು. ಊರ ದಾರಿಯ ಬಳಸಿ ಬಂದ ಬಿಳಿ ಬಣ್ಣದ ಕಾರು, ಶಾಲೆಯ ಗೇಟನ್ನು ದಾಟಿ ಬಾವಿಕಟ್ಟೆಯ ಸಮೀಪ ಬಂದು ನಿಂತಿತು. ಅನಂತ ಮೇಸ್ಟ್ರು ಫೋನನ್ನು ಪ್ಯಾಂಟಿನ ಕಿಸೆಯಲ್ಲಿ ತುರುಕಿಸಿ, ಮುಂದೆ ಹೋಗುವಾಗಲೇ, ಕಾರಿನ ಬಾಗಿಲಿಗೆ ಅಲ್ಲ್ಯಾರೊ ಕೈ ಹಾಕಿ ಬಾಗಿಲು ತೆಗೆದು ಬಿಟ್ಟಿದ್ದರು.
ಮನೆಯ ಬಾಗಿಲು ತೆರೆದು ಹೊರಬಂದ ಗಿರಿಜಮ್ಮ, ಚಟ್ಟಿಯ ಮೇಲೆ ಆಗಷ್ಟೇ ತೊಳೆದು ಇಟ್ಟಿದ್ದ ಹಾಲಿನ ಪಾತ್ರೆಯನ್ನು ಹಿಡಿದು ನೇರವಾಗಿ ಹಟ್ಟಿಗೆ ಸಾಗಿದರು, ಕೆಚ್ಚಲಿಗೆ ನೀರು ಚಿಮುಕಿಸಿ, ಅಲ್ಲಿಯೆ ತಟ್ಟೆಯಲ್ಲಿದ್ದ ತೆಂಗಿನೆಣ್ಣೆಯನ್ನು ಬೆರಳ ತುದಿಗೆ ಸೋಕಿಸಿ, ಹಾಲು ಕರೆಯಲು,ಕೆಚ್ಚಲಿಗೆ ಕೈ ಹಾಕಿದರು. ಅಂಗಣದಲ್ಲಿ ಆಟವಾಡುತ್ತಿದ್ದ ನಾಯಿಯ ಕಿವಿಗೆ ಮುಂಜಾನೆಯ ಗಾಳಿ ಬಡಿದು, ಕಾಳು ಹೆಕ್ಕುತ್ತಿದ್ದ ಕೋಳಿಗಳೊಡನೆ ಪುಂಡಾಟ ಶುರು ಹಚ್ಚಿ, ಕೋಳಿ ಗ್ಯಾಂಗಿನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಚಿಲಿಪಿಲಿ ಗುಟ್ಟುವ ಹಕ್ಕಿಗಳು ಒಂದೆಡೆಯಾದರೆ, ಕುತ್ತಿಗೆಯ ಬಳ್ಳಿ ಬಿಗಿದು, ಕೆಚ್ಚಲಿಗೆ ಬಾಯಿ ಹಾಕಲು ಚಡಪಡಿಸುತ್ತಿದ್ದ ಕರುವಿನ ಕೂಗು ನಿಶ್ಶಬ್ದ ಮುಂಜಾನೆಯಲ್ಲೊಂದು, ಸುಶ್ರಾವ್ಯ ಸಂಗೀತವನ್ನೆ ಸುರಿಸಿತ್ತು. ಹಾಲು, ಬಿಂದಿಗೆಯ ಬಾಯಿಯನ್ನು ಮೀರಿ, ನೊರೆ ಹೊರಬರುವಾಗಲೆ ಗಿರಿಜಮ್ಮ ರಾಘವನನ್ನು ಕೂಗಿದ್ದು.
ರಾತ್ರಿ ಪಾಳಿಯಲ್ಲಿ ಬೆಂದು, ತನ್ನೆಲ್ಲ ಶಕ್ತಿಗುಂದಿ, ಕೊನೆಯ ಕ್ಷಣದಲ್ಲೂ ಚಿಕ್ಕದಾಗಿ ಉರಿಯುತ್ತಿರುವ ಚಿಮುಣಿ ದೀಪ, ಎಣ್ಣೆಯ ಪಾಕದಲ್ಲೆ ಮಿಂದು, ಅಕ್ಷರಗಳೆಲ್ಲ ಮಾಸಿ ಹೋಗಿ, ಒಂದರ ಮೇಲೊಂದರಂತೆ ಇಟ್ಟಿರುವ ತಿಂಡಿ ಕಟ್ಟಿ ಕೊಟ್ಟಿರೋ ನ್ಯೂಸ್ ಪೇಪರ್ ಗಳು, ಹಾಸಿಗೆಯ ಹಂಗಿಲ್ಲದೆ, ಹರಿದ ಚಾಪೆಯ ಮೇಲೆ ತಲೆಯಡಿ ಕೈಯಿಟ್ಟು ಮಲಗಿರುವ ರಾಘವನ ಕಿವಿಗೆ ಗಿರಿಜಮ್ಮನ ಕೂಗು ಬಡಿದಾಗಲೆ ಎಚ್ಚರಗೊಂಡಿದ್ದು. ತಂದೆ ಸಾಯುವಾಗ ರಾಘವನಿನ್ನು ಅಂಗೈ ಕೂಸು. ತಾಯಿಯೋ ಅವರಿವರ ಮನೆಯನ್ನು ಗುಡಿಸಿ, ಸಾರಿಸಿ, ಅರ್ಧವೊ, ಒಂದೊ ಲೀಟರ್ ಹಾಲು ಡೈರಿಗೆ ಹಾಕಿ ಒಂದ್ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಿ ಕೊಳ್ಳುತ್ತ ಇವನನ್ನು ಬೆಳೆಸಿದ್ದರು. ಮನೆಯ ಬಡತನ ಇವನಿಗೆ ಶಾಲೆಯ ದಾರಿಯಿಂದ ದೂರವಿಟ್ಟಿತ್ತು. ಎಲ್ಲರಂತೆ ಶಾಲೆಗೆ ಹೋಗಿದ್ದರೆ, ರಾಘವ ಇನ್ನೆನು, ಒಂಬತ್ತು ಮುಗಿಸಿ, ಹತ್ತಕ್ಕೆ ಅಡಿಯಿಡುತ್ತಿದ್ದ.
ರಾತ್ರಿಯ ತಂಗಳು ಹೊಟ್ಟೆಗಿಳಿಸಿದರೆ ಬೆಳಗ್ಗಿನ ಉಪಹಾರ ಮುಗಿದಂತೆ. ಮಣ್ಣು ಹಿಡಿದು ಬಣ್ಣ ಮಾಸಿದ ಹಳೆಯ ಟೀ ಶರ್ಟು ತೊಟ್ಟು, ಮುಂಗಾಲು ಹರಿದ ಪ್ಯಾಂಟ್ ಕೊಳಸಿಕೊಂಡು ರಾಘವ,ಗೋಪಾಲಣ್ಣ ಕೆಲಸಕ್ಕೆ ತೆರಳಲೆಂದು ಕೊಟ್ಟಿದ್ದ ಹಳೆಯ ಹರ್ಕ್ಯುಲಸ್ ಸೈಕಲ್ ಏರುತ್ತಿದ್ದ. ಮನೆಯ ಓಣಿ ಮುಗಿಸಿ ರಸ್ತೆ ಸಮೀಪಿಸಿದರೆ ಊರ ಶಾಲೆ. ಬಣ್ಣ ಬಣ್ಣದ ಚೀಲ ಹೆಗಲೇರಿಸಿ, ಕೈ ಕೈ ಹಿಡಿದು ಶಾಲೆಯೆಡೆಗೆ ಸಾಗುವ ಮಕ್ಕಳ ದಂಡನ್ನು ನೋಡುತ್ತಲೆ ರಾಘವನ ಕಣ್ಣು ಹನಿಯುತ್ತಿತ್ತು. ಎಲ್ಲವೂ ಸರಿಯಾಗಿದ್ದರೆ ತಾನು ಸಿಮೆಂಟು ಕಲಿಸಿ, ಮೇಸ್ತ್ರಿ ಯ ಕೈಗಿಡುವ ಬದಲು, ಬರೆದ ಪುಸ್ತಕವನ್ನು ಅಧ್ಯಾಪಕರ ಕೈಗಿಡಬೇಕಿತ್ತು. ಎಲ್ಲರಂತೆ ತಲೆ ಬಾಚಿ, ಹಣೆಗೆ ಕುಂಕುಮವತ್ತಿ, ಅಮ್ಮನಿಗೆ ಕೈ ಬೀಸಿ ಶಾಲೆಗೆ ಧಾವಿಸಬಹುದಿತ್ತು.
ಊರಿನ ಪ್ರಮುಖ ಕಾಂಟ್ರ್ಯಾಕ್ಟರ್ ಮಹಾಬಲ ಮೇಸ್ತ್ತಿಯ ಬಳಿ ಕೆಲಸ. ಕೊಡುವ 40ರೂಪಾಯಿ ಸಂಬಳಕ್ಕೆ ಮೈಯೆಲ್ಲಾ ದುಡಿಸುತ್ತಿದ್ದ. ಮುಂಜಾನೆ 8ಕ್ಕೆಲ್ಲ ಕೆಲಸಕ್ಕೆ ಹಾಜರಿರಲೇ ಬೇಕಿತ್ತು. ಹೊಯಿಗೆ ಗಾಳಿಸಿ, ಸಿಮೆಂಟಿನೊಂದಿಗೆ ಹದವಾಗಿ ಕಲಿಸಿ, ಮೇಸ್ತ್ರಿ ಯ ಕೈಗಿಡ ಬೇಕಿತ್ತು. ಹದ ತಪ್ಪಿ ಸಿಮೆಂಟು ಜಾರಿದರೆ, ಮಹಾಬಲ ಬೋಳಿಗೆರಡು ಬಾರಿಸಿ, 40ರ ಸಂಬಳವನ್ನು 20ಕ್ಕೂ ಇಳಿಸುತ್ತಿದ್ದ. ಕೆಲವೊಮ್ಮೆ ಜ್ವರ ನೆತ್ತಿಗೇರಿ, ಬಿಸಿಲಿಗೆ ಬಾಯಿ ಒಣಗಿ ಬಸವಳಿದರೂ ಮಹಾಬಲನ ಕರಳು ಕಿಂಚಿತ್ತೂ ಕರಗುತ್ತಿರಲಿಲ್ಲ. ಹಿಂದೊಮ್ಮೆ ಕಟ್ಟಡ ಏರಿ ಇಟ್ಟಿಗೆ ಕಟ್ಟುವಾಗಲಂತೂ ಕಾಲು ಜಾರಿ ದೊಪ್ಪನೆ ಬಿದ್ದಿದ್ದ. ಕಾಲಿನ ಮೂಳೆ ಹೊರಬಂದಾಗಲೂ, ಕೇಳುವವರಿರಲಿಲ್ಲ. ಕಾರಣ ತಾಯಿಯ ಆಸ್ಪತ್ರೆಯ ಖರ್ಚಿಗೆಂದು ಪಡೆದಿದ್ದ 26000 ದ ಸಾಲ ಇನ್ನು ಕಾಲಂಷವೂ ಮುಗಿದಿರಲಿಲ್ಲ.
ಹಿಂದಿನ ಮನೆಯ ಪ್ರವೀಣ ರಾಘುವನ ಪ್ರಾಯದ ಹುಡುಗನೆ. ಇದೀಗ ಒಂಬತ್ತು ಮುಗಿಸಿ ಹತ್ತನೆ ಕ್ಲಾಸು. ಬಿಳಿ ಬಣ್ಣದ ಅಂಗಿಯ ಮೇಲೊಂದು ನೀಲಿಯ ಟೈ, ನೀಲಿಯ ಪ್ಯಾಂಟು. ಕಾಲನ್ನು ಮುಚ್ಚಿರುವ ಕರಿ ಬೂಟು. ಅವನನ್ನು ನೋಡಿದಾಗಲೆಲ್ಲ ರಾಘವನ ಕಣ್ಣು ತುಂಬಿ ಬರುತ್ತಿತ್ತು. ತಾನೂ ಶಾಲೆ ಕಲಿತು ನೌಕರಿ ಹಿಡಿಯ ಬೇಕು, ಕಾರಿನ ಸೀಟಿನ ಮೇಲೆ ಅಮ್ಮನ ಕೂರಿಸಿ ಊರೆಲ್ಲ ಮೆರವಣಿಗೆ ಹೊರಡಬೇಕು. ಇಂಗ್ಲೀಷಿನ ಮಾತಿಗೆ ಕ್ಷಣವೂ ಕಾಯದೆ ಪಕ್ಕನೆ ಉತ್ತರಿಸಬೇಕು. ಕಲಿತ ಎರಡನೇ ಕ್ಲಾಸಿಗೇ ಕೊಡಿಸಿ ಓದುವುದನ್ನ ಕಲಿತಿದ್ದ. ಬೆಳಿಗ್ಗೆ ಹತ್ತಕ್ಕೆ, ಮಹಾಬಲ ತಿಂದು ಎಸೆಯುತ್ತಿದ್ದ, ಗೋಲಿ ಬಜೆ ಕಟ್ಟಿ ಕೊಟ್ಟಿದ ಪೇಪರ್ ಗಳನ್ನು ಆಯುತ್ತಿದ್ದ. ಎಣ್ಣೆಯಲ್ಲಿ ಮಿಂದೆದ್ದ ಅವುಗಳನ್ನು ಮಧ್ಯಾಹ್ನದ ಊಟದ ಬಿಡುವಿನಲ್ಲೋ, ಸಂಜೆ ಮನೆ ಸೇರಿದ ಮೇಲೋ ಚಿಮುಣಿ ದೀಪದ ಬೆಳಕಿಗೆ ಓದುತ್ತಿದ್ದ. ಬಸ್ಸ್ ಸ್ಟ್ಯಾಂಡಿನ ಗೊಡೆಯನ್ನಂಟಿದ್ದ ಯಕ್ಷಗಾನದ ಪೋಸ್ಟರ್ ಗಳು, ಊರ ಪಂಚಾಯಿತಿ ಕಟ್ಟಡದ ಮೇಲಿನ ಬರಹಗಳು, ಗೂಡ್ಸ್ ರಿಕ್ಷಾದ ಮೇಲಿನ ‘ಶ್ರೀ ಮಂಜುನಾಥ ಸ್ವಾಮಿ’ ಎಂಬ ಫಲಕಗಳೆ ಇವನ ಓದಿನ ಸಾಧನಗಳು. ಶಾಲೆಯಲ್ಲೇ ಓದಬೇಕೆಂಬ ಆಸೆಗೆ ತಾಯಿ ಅಸಹಾಯಕಳಾದರೆ, ಬಡತನ ಮಹಾಮಾರಿ ಯಾಗಿ ಅಡ್ಡಗಾಲು ಚಾಚಿತ್ತು.
ಹಸ್ತಗಳೆರಡನ್ನು ಬಲವಾಗಿ ಉಜ್ಜಿದವನೆ, ಕಣ್ಣುಗಳನ್ನು ಒತ್ತಿ, ದೀಪ ನಿಂಗಿಸಿ, ತಲೆಯ ಮೇಲೆ ನೇತು ಬಿದ್ದಿದ್ದ ಗಣಪತಿ ಚಿತ್ರಕ್ಕೆ ಕೈ ಮುಗಿದು, ಮುಖ ತೊಳೆಯಲು ಬಚ್ಚಲಿಗೆ ತೆರಳಿದ. “ತಡಿ ಕರುವೇ, ಅಷ್ಟ್ ಅವ್ಸರ್ವ ಹಂಗಾರೆ, ಬಳ್ಳಿ ಬಿಡ್ಸವಷ್ಟ್ ಪುರ್ಸೊತ್ತಿಲ್ಯ,” ಎನ್ನುತ್ತಲೆ, ಗಿರಿಜಮ್ಮ ಕರುವಿನ ಹಗ್ಗ ಬಿಚ್ಚಿದಳು, ಚಂಗನೆ ನೆಗೆಯುತ್ತಲೆ ಓಡಿ, ತಾಯಿಯ ಕೆಚ್ಚಲಿಗೆ ಪ್ರೀತಿಯ ಗುದ್ದೆರಡು ನೀಡಿ, ಕರು ಮೊಲೆಯನ್ನು ಸವಿಯಿತು. ಬಿಂದಿಗೆಯಿಂದ, ಕಟ್ಟೆಯ ಮೇಲಿದ್ದ ಡೈರಿಯ ಪಾತ್ರೆಗೆ ಹಾಲನ್ನು ಸುರಿದವರೇ, ಗಿರಿಜಕ್ಕ ಒಳಗೆ ಹೋಗಿ, ಗೊಡೆಯ ಮೇಲಿದ್ದ ಸಣ್ಣನೆಯ ಪುಸ್ತಕವನ್ನು ಪಾತ್ರೆಯ ಪಕ್ಕದಲ್ಲಿ ಇರಿಸಿದರು. ಬಚ್ಚಲಿಂದ ಬಂದ ರಾಘವ, ನ್ಯಾಲೆಯ ಮೇಲೆ ಜೋತು ಬಿದ್ದಿದ್ದ ಟವಲಿನಿಂದ ಮುಖ ಒರೆಸಿಕೊಂಡು, ಟವಲ್ಲನ್ನು ಹೊರಗಿನ ನ್ಯಾಲಿಗೆ ಜೋತು ಹಾಕಿ ಹಾಲಿನ ಕ್ಯಾನ್ ಹಿಡಿದು, ಡೈರಿಯ ಹಾದಿ ಹಿಡಿದ.
ಡೈರಿಗೆ ಹಾಲನ್ನು ನೀಡಿ, ಸೈಕಲ್ಲಿನ ಹ್ಯಾಂಡಲ್ಲಿಗೆ ಹಾಲಿನ ಕ್ಯಾನ್ ಸಿಕ್ಕಿಸಿಕೊಂಡವನೆ, ಸ್ಟ್ಯಾಂಡ್ ತುಳಿದು ಸೈಕಲ್ಲ್ ಏರಿದ. ಕಣ್ಣುಗಳು ಮುಂದಿನ ರಸ್ತೆಯನ್ನು ನೋಡುವ ಬದಲು, ಅದ್ಯಾರನ್ನೋ ಹುಡುಕುವಂತೆ ಕಾಣಿಸಿದವು. ನೋಡನೋಡುತ್ತಿದ್ದಂತೆಯೆ, ಸಣ್ಣನೆಯ ಎಕ್ಸ್ ಎಲ್ ಗಾಡಿಯೊಂದು ಕಣ್ಣೆದುರು ಹಾದು ಸಾಗಿತು. ರಾಘವನಂತೂ ಸೈಕಲ್ ಪೆಡಲ್ಗಳನ್ನು ತನ್ನೆಲ್ಲ ಶಕ್ತಿಹಾಕಿ ತುಳಿಯುತ್ತ, ನಿರಂತರ ಬೆಲ್ಲ್ ಮಾಡುತ್ತ ಆ ಗಾಡಿಯನ್ನು ಹಿಂಬಾಲಿಸಿಕೊಂಡು ಹೋದ. ಸೈಕಲ್ಲ್ ಚಲಿಸುವ ವೇಗಕ್ಕೆ ಚೈನ್ ತುಂಡಾಗಿ, ಸೈಕಲ್ಲ್ ನಿಯಂತ್ರಣ ತಪ್ಪಿತ್ತು. ಗೇರು ಬೀಜ ಕಾರ್ಖಾನೆಗೆ ತೆರಳುವ ಹೆಂಗಸೊಬ್ಬರು ಕೈ ಹಿಡಿದು ಮೇಲೇತ್ತುವ ವರೆಗೂ, ಚರಂಡಿ ಸೇರಿದ್ದ ರಾಘವನ ದೇಹದ ಮೇಲೆ ಸೈಕಲ್ಲ್ ಮಲಗಿತ್ತು.
ಊರು ಕಣ್ಣುಬಿಡುವ ಮುನ್ನವೇ, ಎಕ್ಸ್ ಎಲ್ ಗಾಡಿ ಏರುತ್ತಿದ್ದ ಮಂಜಣ್ಣ, ದೂರದ ಪೇಟೆಗೆ ತೆರಳಿ ಪೇಪರ್ ಗಳನ್ನು ಗುಡ್ಡೆ ಹಾಕಿ ಊರಿಗೆಲ್ಲ ಹಂಚುತ್ತಿದ್ದರು. ನಗರದ ಖ್ಯಾತ ದಿನ ಪತ್ರಿಕೆ ‘ಮುಂಜಾನೆ ಸುದ್ದಿ’ ಯ ಏಜಂಟೂ, ಊರಿನ ಏಕೈಕ ಹೋಟೆಲ್ಲು ಕೋಣೆಯ ಓನರ್ರು ಇವರೆ. ಬೆಳಿಗ್ಗೆ ಹತ್ತಕ್ಕೆ ಮಹಾಬಲ ಮೇಸ್ತ್ರಿಗೆ ಇವರ ಹೋಟೆಲ್ಲಿನದ್ದೆ ಗೋಲಿ ಬಜೆ ಆರ್ಡರ್ರು. ಹಿಂದಿನ ಮನೆಯ ಪ್ರವೀಣ ಹತ್ತನೆ ಕ್ಲಾಸು ಓದುತ್ತಿರುವುದರಿಂದಲೆ ಮಗನಿಗಾಗಿ ಭಾಸ್ಕರಣ್ಣ ಪೇಪರ್ ಕೊಳ್ಳುತ್ತಿದ್ದರು. ಗೇಟಿನಿಂದ ದೂರವೇ ಗಾಡಿ ನಿಲ್ಲಿಸಿ ರಪ್ಪನೆ ಪೇಪರ್ ಎಸೆದು ಮಂಜಣ್ಣ ತೆರಳುತ್ತಿದ್ದರು. ಪ್ರವೀಣನ ಹೆಸರಿಗೆ ಪೇಪರ್ ಕೊಂಡರೂ ಅವನೆಂದು ಪುಟ ತಿರುಗಿಸಿ ಕಂಡವನಲ್ಲ. ಕಸದ ಬುಟ್ಟಿ ಸೇರಬೇಕಿದ್ದ ಪೇಪರ್ ಗಳನ್ನು ಆಯ್ದು ಓದುವ ರಾಘನ ಓದಿನಾಸಕ್ತಿ ಒಂದೆಡೆಯಾದರೆ, ಮನೆಬಾಗಿಲಿಗೇ ಬರುತ್ತಿದ್ದ ಪೇಪರನ್ನು ಎಂದೂ ಕಣ್ಣೆತ್ತಿಯೂ ನೋಡದ ಪ್ರವೀಣ ಮತ್ತೊಂದೆಡೆ.
ಗೇರು ಫ್ಯಾಕ್ಟರಿಯ ಹೆಂಗಸು, ” ಪೆಟ್ಟಾಯ್ತ, ನೀರ್ ಎಂತ ಬೇಕಾ?? ” ಎಂದು ಕೇಳಿದರೂ, ಅದು ಕಿವಿಯ ಸಮೀಪವೂ ಸುಳಿಯಲಿಲ್ಲ. ಹೊಂಡದಿಂದ ಮೇಲೆದ್ದವನೆ ಮೈಕೈ ಯಾರನ್ನೂ ಕೊಡವಿ ಕೊಳ್ಳದೆ, ಗಾಡಿ ಸಾಗಿದ ದಾರಿಯನ್ನೇ ನೋಡ ತೊಡಗಿದ. ಕ್ಷಣವೂ ತಡಮಾಡದೆ ಸೈಕಲ್ ಎತ್ತಿ ಗಾಡಿ ಸಾಗಿದ ದಾರಿಯಲ್ಲೆ ರಾಘವ ಸಾಗಿದ. ಊರಿನ ಶಾಲೆಯ ಮುಂದಿನ ತಿರುವಿನಲ್ಲಿ ಕೂಡುವ ಎರಡು ರಸ್ತೆಗಳು ರಾಘವ ನನ್ನು ಗೊಂದಲಕ್ಕೆ ಕೆಡವಿದವು. ತಲೆ ಕೆರೆಯುತ್ತಲೆ, ಪೆಚ್ಚು ಮೋರೆ ಮಾಡಿ ಬಲಕ್ಕೆ ತಿರುಗಿದ. ಸ್ವಲ್ಪವೇ ದೂರದಲ್ಲಿ ರಾಘವನ ಮನೆ. ಎಕ್ಸ್ ಎಲ್ಲ್ ಗಾಡಿಯನ್ನು ಹಿಂಬಾಲಿಸಿ, ತಡೆಯ ಬೇಕೆಂದಿದ್ದ ಅವನ ಉತ್ಸಾಹಕ್ಕೆ ತಣ್ಣೀರೆರಚಿದ ಸೈಕಲ್ಲಿಗೂ ಅದರ ತುಂಡಾದ ಚೈನಿಗೂ ಶಪಿಸುತ್ತಲೆ ಮನೆ ಸೇರಿದ.
ಮುಂಗೈಯಲ್ಲಿ ಇಳಿಯುತ್ತಿದ್ದ ರಕ್ತ, ಹರಿದ ಪ್ಯಾಂಟಿನ ಮುಂಗಾಲು, ತುಂಡಾದ ಸೈಕಲ್ಲಿನ ಚೈನು ಗಿರಿಜಕ್ಕ ಎದೆಯೊಡೆಯುವಂತೆ ಮಾಡಿದ್ದವು. ಏನೋ ಬಲವಾದ ಅನಾಹುತ ಸಂಭವಿಸಿದೆ ಎಂದು ಭಾವಿಸಿದ ಗಿರಿಜಕ್ಕ, ಓಡಿ ಬಂದು ರಾಘವನ ಕೈ ಹಿಡಿದು ” ಏ ದೇವ್ರೇ… ನೀ ಎಂತ ಮಾಡ್ಕ ಬಂದೆ ಮಾರಾಯ.. ಅಯ್ಯೋ ” ಎನ್ನುತ್ತಲೆ ಗಾಯಕ್ಕೆ ಬಟ್ಟೆ ಕಟ್ಟಲು ಒಳಗೆ ಓಡಿದರು. ಅಂದುಕೊಂಡ ಕೆಲಸ ಸಾಧಿಸಿಲ್ಲವೆಂಬ ಬೇಸರ, ಮುಂಗೈ ಗಾಯದ ನೋವು ರಾಘವ ನನ್ನು ಮಂಕಾಗಿಸಿತ್ತು. ಸೈಕಲ್ಲಿನ ಸ್ಟ್ಯಾಂಡ್ ತುಳಿದವನೆ, ನೇರ ನಿಲ್ಲಿಸಿ, ಚೈನ್ ರಿಪೇರಿಗೆ ಮುಂದಾದ. ಗಿರಿಜಕ್ಕ ಹರಿದ ಸೀರೆಯ ತುಂಡೊಂದಕ್ಕೆ ಅರಿಸಿನ ಲೇಪಿಸಿ ಮುಂಗೈ, ಮುಂಗಾಲು ಗಾಯಕ್ಕೆ ಕಟ್ಟಿದರು.
ಮಾರನೆಯ ದಿನ ಮತ್ತದೇ ರೀಪೀಟ್ ಟೆಲಿಕಾಸ್ಟ್. ಈ ಬಾರಿಯು ರಾಘುವ ಎಕ್ಸ್ ಎಲ್ ಗಾಡಿಯನ್ನು ಮಿಸ್ಸ್ ಮಾಡಿಕೊಂಡಿದ್ದ. ಅದೇ ಪೆಚ್ಚು ಮೊರೆಯೊಂದಿಗೆ, ಖಾಲಿ ಕ್ಯಾನಿನೊಂದಿಗೆ ಮನೆಯನ್ನು ಸೇರಿದ್ದ. ಮನೆಗೆ ಬಂದವನೇ ಎಣ್ಣೆ ಹಿಡಿದ ಪೇಪರ್ ತುಂಡುಗಳನ್ನು ಓದಲಾರಂಭಿಸಿದ. ಗಿರಿಜಮ್ಮ ತಿಂಡಿ ತಂದಿಟ್ಟರು. ಕಣ್ಣು ಅತ್ತ ನೋಡಲೇ ಇಲ್ಲ. ಇದ್ದಕ್ಕಿದ್ದಂತೆ ಗಾಡಿ ಬಂದ ಶಬ್ದ!!! ಕಿರ್ರನೆ ಕೀರುತ್ತ ಹಳೆಯ ಎಕ್ಸ್ ಎಲ್ ಗಾಡಿಯೊಂದು ಮನೆಯ ಹಿಂದೆ ಬಂದು ಗಕ್ಕನೆ ನಿಂತಿದ್ದು ಕೇಳಿಸಿತು. ರಾಘವನ ಇಂದ್ರಿಯಗಳು ಕಿಂಚಿತ್ತು ಕಾಯದೆ ಚುರುಕಾದವು. ಕಿಟಕಿಯ ಕಿಂಡಿಗಳ ಸಂದಿನಲ್ಲಿ ಭಾಸ್ಕರಣ್ಣ!! ಕೈಯಲ್ಲಿ ಪೇಪರ್!!! ಎದುರಿಗೆ ಏಜೆಂಟ್ ಮಂಜಣ್ಣ. ಇಷ್ಟು ದಿನ ಹುಡುಕುತ್ತಿದ್ದ ಮಂಜಣ್ಣ ಕಣ್ಣೆದುರೇ ನಿಂತಿದ್ದಾರೆ. ಹಿಂದಿನ ಮನೆಯ ಭಾಸ್ಕರಣ್ಣ ಪೇಪರ್ ಕೊಂಡಿದ್ದಾರೆ!!! ಖುಷಿಯಲ್ಲಿ ರಾಘವನ ಕಾಲು ಭೂಮಿಯ ಮೇಲೆ ನಿಲ್ಲಲೇ ಇಲ್ಲ.
ರಾಘವ ಭಾಸ್ಕರಣ್ಣನ ಮನೆ ತಲುಪುವಷ್ಟರಲ್ಲಿ ಮಂಜಣ್ಣ ಹಿಂದಿರುಗಲು ಸಿದ್ದರಾಗಿದ್ದರು. ರಾಘವ ನಿಧಾನವಾಗಿ ಗೇಟನ್ನು ತಳ್ಳಿ ಒಳನಡೆದ. ಭಾಸ್ಕರಣ್ಣನ ಕೈಯಲ್ಲಿ ಪೇಪರ್ ಇತ್ತು. ಪ್ರವೀಣ ರೇಡಿಯೋದ ಗೀತೆಯೊಂದಕ್ಕೆ ಕಿವಿಯಾಗಿದ್ದ. ಭಾಸ್ಕರಣ್ಣ ರಾಘವನ ನೋಡುತ್ತಲೆ ‘ ಏ ಎಂತದಾ, ಸೀದ ಒಳ ಬಂದ್ಯಲ’ ಎಂದರು. ರಾಘವ ಕಿರುಧ್ವನಿಯಲ್ಲೆ ‘ …ಪೇಪರ್ ಓದುವ ಅಂದೇಳಿ, ಚೂರ್ ಕೊಡ್ತ್ರ್ಯ?’… ‘ ಹೋ ಸವಾಕರ್ರ್ ಪೇಪರ್ ಓದ್ಕಾ.. ಹಹಹ ಓದುಕ್ ಬತ್ತಾ??, ಪುಕ್ಸಟ್ಟಿ ತಿಂದ್ ತಿಂದ್ ಹಲ್ಲಿಗ್ ಹಿಡ್ದ್ ಹೊಯ್ತಲ’ ರಾಘವ ಮರು ಮಾತಾಡಲಿಲ್ಲ. ಕಣ್ಣೊರೆಸುತ್ತಲೆ ಹಿಂದಡಿಯಿಟ್ಟ. ಪ್ರವೀಣ ಒಮ್ಮೆ ಹೊರಗಿಣುಕಿ, ರಾಘವನ ಕಂಡವನೇ ಪಕ್ಕನೆ ತಲೆ ಒಳಗಾಕಿದ. ಮಂಜಣ್ಣ ಇದೆಲ್ಲವನ್ನೂ ಮರೆಯಲ್ಲೇ ನಿಂತು ಕಂಡರೂ, ಮೌನಿಯಾಗಿದ್ದರು.
ಮಾರನೆ ದಿನ ಡೈರಿಯಿಂದ ಬಂದವನೆ, ಮನೆಯ ಹಿಂದಿನ ಕಿಟಕಿ ಗೆ ಕಾಣ್ಣಾಗಿದ್ದ. ಇಷ್ಟು ದಿನ ಎಲ್ಲೇಲ್ಲೊ ಪೇಪರ್ಗಾಗಿ ಅಲೆಯುತ್ತಿದ್ದು, ಈಗ ಹಿಂದಿನ ಮನೆಗೇ ಪೇಪರ್ ಬರುತ್ತಿದೆ. ಹಾಗಾಗಿ ಕಣ್ಣು ಮಿಟುಕಿಸದೆ ಮಂಜಣ್ಣನಿಗಾಗಿ ಕಾಯುತ್ತಿದ್ದ. ಅವರು ಬಂದರು, ಈ ಬಾರಿ ಪ್ರವೀಣನ ಕೈಗೆ ಪೇಪರಿತ್ತರು. ಮರೆಯಾದರು. ರಾಘವ ಮತ್ತೆ ಗೇಟ್ ಬಳಿ ತೆರಳಿದ. ಪ್ರವೀಣ ರಾಘವನನ್ನ ಕಂಡವನೆ ‘ ನಿಂಗ್ ಮರ್ಯಾದಿ ಇಲ್ಲ್ಯನ, ನಿಮ್ಮಂತರೆಲ್ಲ ನಮ್ಮನಿಗ್ ಬಪ್ಕಾಗ ಅಂದೇಳಿ ಗುತ್ತಿಲ್ಲ್ಯ. ಅಪ್ಪಯ್ಯ ನಿನ್ನೆಯೇ ಹೇಳಿರ್. ನೀನ್ ಒಳಗ್ ಬಂದ್ರ್ ನಾನ್ ಅಪ್ಪಯ್ಯ ನ್ ಕರೀತೆ ಅಷ್ಟೆ’ ಎಂದ. ರಾಘವನಲ್ಲಿ ಕಣ್ಣೀರೊಂದನ್ನು ಬಿಟ್ಟು ಬೇರೇನು ಉಳಿದಿರಲಿಲ್ಲ. ಬಡವನಾಗಿ ಹುಟ್ಟಿದ್ದಕ್ಕೆ ಇನ್ನೂ ಏನೇನು ಕೇಳ ಬೇಕು??? ಓದು ಕೇವಲ ಉಳ್ಳವರಿಗೆ ಮಾತ್ರವೆ??? ಬಡವರು ಕನಸೂ ಕಾಣಬಾರದೆ?? ಎಂಬೆಲ್ಲ ಯೋಚನೆಗಳಿಗೆ ರಾಘವ ಬಲಿಯಾಗುತ್ತಲೆ ತಿರುಗಿದ. ನೋಡಿದರೆ ಕಣ್ಣೆದುರಿಗೆ ಮಂಜಣ್ಣ!!! ಯಾರನ್ನು ಇಷ್ಟು ದಿನ ಹಿಡಿದು ಮಾತನಾಡಿಸಬೇಕೆಂದು ಕಾಯುತ್ತಿದ್ದನೋ ಅದೇ ಪೇಪರ್ ಮಂಜಣ್ಣ!!! ಪೇಪರ್ ಒಂದನ್ನು ರಾಘವನ ಕೈಗಿತ್ತರು. ರಾಘವ ಪಕ್ಕನೆ ಮಂಜಣ್ಣನನ್ನು ಆರಂಭಿಸಿದ. ಇಬ್ಬರು ಕಣ್ಣೀರು ಧರೆಯ ತಲುಪಿತು.
ಕಾರಿನ ಬಾಗಿಲು ತೆಗೆಯುತ್ತಲೆ, ನೇತಾಡುವ ಉದ್ದನೆಯ ಚೀಲ ಹೆಗೆಲೇರಿಸಿಕೊಂಡಿರುವ, ಕನ್ನಡಕಧಾರಿ ವ್ಯಕ್ತಿಯೊಬ್ಬರು ಕೆಳಗಿಳಿದರು. ಅನಂತ ಮೇಸ್ಟ್ರು ಕೈ ಮುಗಿದು, ಹೂಗುಚ್ಛ ಕೈಗಿತ್ತು ಅವರನ್ನು ಬರಮಾಡಿಕೊಂಡರು. ಸುತ್ತುವರೆದ ಜನ ಸಮೂಹ, ವಿದ್ಯಾರ್ಥಿಗಳು ಬಿಡದೆ ಚಪ್ಪಾಳೆ ಗೈಯುತ್ತ ಸ್ವಾಗತಿಸಿದರು. ಮೈಕು ” ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀ ರಾಮಗಿರಿ ನಾಯಕ್ ರವರಿಗೆ, ನಮ್ಮ ಶಾಲೆಗೆ ಸ್ವಾಗತ ” ಎಂದು ಒಂದೇ ಸಮನೆ ಉಯಿಲಿತು. ರಾಮಗಿರಿ ನಾಯಕ್ ಕನ್ನಡ ಸಾಹಿತ್ಯ ಲೋಕದ ತೀರ ಅಪರೂಪದ ಸಾಹಿತಿ ಎನಿಕೊಂಡಿದ್ದರು. ಬಡತನ, ಹಸಿವು, ಜಾತಿ, ಜೀತಸಮಾಜದ ತಾರತಮ್ಯ ಗಳ ಕುರಿತು ಲೇಖನ, ಕಥೆ, ಕಾದಂಬರಿ ಗಳನ್ನು ರಚಿಸಿ, ಸಮಾಜದ ಕಣ್ಣು ತೆರೆಸುವ ಪ್ರಯತ್ನಕ್ಕೆ ಮುಂದಡಿಯಿಟ್ಟಿದ್ದರು. ಕಳೆದ ಬಾರಿಯಷ್ಟೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದರು. ಹಳ್ಳಿಗಾಡಿನ ಅನೇಕ ಶಾಲಾ, ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳನ್ನು ಓದಿಗೆ ಹಚ್ಚುವ ಕೈಂಕರ್ಯದಲ್ಲಿ ತೊಡಗಿದ್ದರು.
ಶಾಲೆಯಲ್ಲಿ ಕಾರ್ಯಕ್ರಮ ಇರುವುದರಿಂದ ಅತಿಥಿಗಳ ತಿಂಡಿಗಾಗಿ ಮಂಜಣ್ಣನಿಗೆ ಆರ್ಡರ್ ನೀಡಲಾಗಿತ್ತು. ಬಿಸಿಯಾದ ಇಡ್ಲಿ, ದ್ರಾಕ್ಷಿ ಗೊಡಂಬಿಗಳಿಂದ ಸಿದ್ದಪಡಿಸಿದ ಕೇಸರಿ ಬಾತು, ಮತ್ತು ಅಂಬೊಡೆ. ಇನ್ನೆನ್ನು ತಿಂಡಿ ತುಂಬಿರುವ ಪಾತ್ರೆಗಳನ್ನು ಗಾಡಿಗೆ ಹತ್ತಿಸಿ ಹೊರಡಬೇಕು ಎನ್ನುವಷ್ಟರಲ್ಲಿ, ” ಮುಂಜಾನೆ ಸುದ್ದಿ” ಪತ್ರಿಕೆ ಕಣ್ಣಿಗೆ ಬಿತ್ತು. “ಖ್ಯಾತ ಸಾಹಿತಿ ರಾಮಗಿರಿ ನಾಯಕ್ ಅವರಿಂದ ಶಾಲಾ ಗ್ರಂಥಾಲಯ ಲೋಕಾರ್ಪಣೆ, ಹುಟ್ಟೂರ ಸನ್ಮಾನ ” ಎಂದು ಹೆಡ್ ಲೈನು ಓದುತ್ತಲೆ, ಮಂಜಣ್ಣನಿಗೆ ಆಶ್ಚರ್ಯ, ತಳಮಳ, ಖುಷಿ ಎಲ್ಲ ಒಟ್ಟಿಗೆ ಸಂಭವಿಸಿ, ಏನು ಮಾಡಬೇಕೆಂದು ತೊಚದೆ, ಕ್ಷಣ ಕಾಲ ಕೂತು ಸಾವರಿಸಿಕೊಂಡರು. ತಲೆಯೊಳಗೆ ಹರಿದ ನೂರಾರು ನೆನಪುಗಳು, ಮಂಜಣ್ಣನ ಕಣ್ಣುಗಳಲ್ಲಿ ಆನಂದ ಬಾಷ್ಪ ಸುರಿಸಿದವು. ಇನ್ನು ಸ್ವಲ್ಪವೂ ಕಾಯದೆ, ಕಣ್ಣು ಒರೆಸುತ್ತಾ ಗಾಡಿ ಹತ್ತಿ ನಡೆದೇ ಬಿಟ್ಟರು.
ರಾಮಗಿರಿ ನಾಯಕ್ ನೂತನ ಗ್ರಂಥಾಲಯ ದ ಎದುರು ನಿಂತು ಕ್ಷಣಕಾಲ ಉಸಿರೆಳೆದುಕೊಂಡರು. ಶಿಕ್ಷಕಿಯೋರ್ವರು ಕತ್ತರಿ ನೀಡುತ್ತಲೆ, ದಾರಂದಗಳಿಗೆ ಕಟ್ಟಿದ್ದ ರಿಬ್ಬನ್ನು ತುಂಡರಿಸಿದರು. ಕರತಾಡನ ಮುಗಿಲು ಮುಟ್ಟಿತ್ತು. ಗ್ರಂಥಾಲಯದ ತುಂಬೆಲ್ಲ ವಿವಿಧ ಸಾಹಿತಿಗಳ ಕೃತಿಗಳು, ಗ್ರಂಥಗಳು, ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳು, ಮಹಾತ್ಮರ ಜೀವನ ಚರಿತ್ರೆಗಳು. ಎಲ್ಲದರ ಮೇಲೆಯೂ ತುಸು ಕಣ್ಹಾಯಿಸುತ್ತಾ ಸಭಾಂಗಣಕ್ಕೆ ನಡೆದರು. ಸಭೆಯನ್ನುದ್ದೇಶಿಸಿ ಇತರ ಅತಿಥಿಗಳ ಮಾತು ಮುಗಿದ ಮೇಲೆ ರಾಮಗಿರಿ ನಾಯಕರಿಗೆ ಊರ ಹಿರಿಯರಿಂದ ಸನ್ಮಾನ ನಡೆಯಿತು. ದೂರದಲ್ಲೇ ನಿಂತು ಸನ್ಮಾನ ನನ್ನು ನೋಡಿದ ಮಂಜಣ್ಣನ ಕಣ್ಣುಗಳು ತೇವಗೊಂಡವು. ಸಾರ್ಥಕತೆಯ ಧೀರ್ಘ ಉಸಿರೊಂದನ್ನು ಎಳೆದುಕೊಂಡರು.
ಅಂದು ಎರಡು ರೂಪಾಯಿ ಪೇಪರ್ ಕೊಳ್ಳಲೂ ಸಾಧ್ಯವಾಗದೆ, ಊರವರಿಂದ, ಕೆಲಸದ ಯಜಮಾನನಿಂದ, ಹಿಂದಿನ ಮನೆಯ ಭಾಸ್ಕರಣ್ಣನಿಂದ ಅವಮಾನಿತನಾಗಿ ನೊಂದಿದ್ದ ಹುಡುಗನೊಬ್ಬ ಇಂದು ಊರ ಶಾಲೆಗೆ ಗ್ರಂಥಾಲಯ ವನ್ನೆ ಕಟ್ಟಿಸಿದ್ದಾರೆ. ಮಂಜಣ್ಣ ನೀಡಿದ ಪೇಪರ್ ನಿಂದ ಸ್ಪೂರ್ತಿ ಪಡೆದು ಓದಿ, ಸಾಹಿತಿಯಾಗಿದ್ದಾನೆ. ತಾಯಿಯನ್ನು ತನ್ನ ಕನಸಿನಂತೆ ಕಾರಿನಲ್ಲಿ ಕುಳ್ಳಿರಿಸಿ ಊರು ಸುತ್ತಿಸುತ್ತಿದ್ದಾರೆ, ಯಾವ “ಮುಂಜಾನೆ ಸುದ್ದಿ” ಪತ್ರಿಕೆಯನ್ನು ಕೊಳ್ಳಲೂ ಸಾಧ್ಯವಾಗದೇ ಇದ್ದ ಕಾಲದಿಂದ, ಇಂದು ಅದೇ ಪತ್ರಿಕೆ ತನ್ನ ಮೊದಲ ಪುಟದಲ್ಲೇ ಸಾಧನೆಯನ್ನು ನಮೂದಿಸುವಂತೆ ಮಾಡಿದ್ದಾನೆ. ಯಾರು ಅವಮಾನಿಸಿದ್ದರೊ ಇಂದು ಅವರೆ ಸಭೆಯ ಮಧ್ಯದಲ್ಲೆಲ್ಲೊ ಕೂತು, ಏಳಲಾಗದೆ ಚಪ್ಪಾಳೆ ತಟ್ಟುತ್ತಿದ್ದಾರೆ. ಅದೆಲ್ಲವನ್ನು ಮೀರಿ ರಾಘವ ಇಂದು, “ರಾಘವ ಮಂಜಣ್ಣ ಗಿರಿಜಮ್ಮ – ರಾಮಗಿರಿ ನಾಯಕ” ನಾಗಿದ್ದಾನೆ.
ಶಿವಪ್ರಸಾದ ವಕ್ವಾಡಿ.
ಶಿವಪ್ರಸಾದ ವಕ್ವಾಡಿ.