ಕರೋನಾ ಮಹಾಮಾರಿಗೆ ಸಿಲುಕಿ ಬದುಕು ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿಯೂ ಕೂಡ ಕರೋನಾದಿಂದಾಗಿ ನಮ್ಮ ಮೇಲೆ ಬೀರಿದ ಸಕಾರಾತ್ಮಕ ವಿಷಯಗಳ ಕುರಿತು ನಾವು ಹಲವು ಲೇಖನಗಳಲ್ಲಿ ಓದಿದ್ದೇವೆ. ಹೊಟ್ಟೆಪಾಡಿಗಾಗಿ ನಮ್ಮವರನ್ನೆಲ್ಲಾ ಬಿಟ್ಟು ಎಲ್ಲೆಲ್ಲೋ ದುಡಿಯುತ್ತಿದ್ದವರು ಇಂದು ಕುಟುಂಬದ ಜೊತೆ ಸೇರಿ ಸಂತೋಷದಿಂದಿರಲು ಕರೋನಾ ಲಾಕ್ಡೌನ್ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಮಾತು ಎಷ್ಟರ ಮಟ್ಟಿಗೆ ನಿಜ?
ಎಷ್ಟೇ ಸಮಯವಿದ್ದರೂ, ನಮ್ಮವರೆಲ್ಲಾ ಕಣ್ಣೆದುರಿಗಿದ್ದರು, ಅವರೊಂದಿಗೆ ಮಾತನಾಡದೆ ಮೊಬೈಲ್ ನಲ್ಲಿ ಮುಳುಗಿರುವವರ ಸಂಖ್ಯೆ ಹೆಚ್ಚು. ಈ ಬ್ಯುಸಿ ಪ್ರಪಂಚದಲ್ಲಿ ನಾವು ಅಂಧರು ಹಾಗೂ ಮೂಗರಾಗಿದ್ದೇವೆ. ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎನ್ನುವ ಕಾಲದಿಂದ, ಸಾಲ ಮಾಡಿ ನಾವೇ ಮಕ್ಕಳಿಗೆ ಮೊಬೈಲ್ ಕೊಡಿಸುವ ಕಾಲಕ್ಕೆ ತಲುಪಿದ್ದೇವೆ.

ಶೈಕ್ಷಣಿಕ ಉದ್ದೇಶದ ಹಿನ್ನೆಲೆಯಲ್ಲಿ ನಾವು ಮಕ್ಕಳಿಗೆ ಕೊಡಿಸುವ ಮೊಬೈಲ್ ಇನ್ಯಾವುದೋ ನಕಾರಾತ್ಮಕ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಟ್ಟರೇ?…ಕೋಲು ಕೊಟ್ಟು ಪಟ್ಟುತಿಂದಂತೆ…! ಇದು ಮೊಬೈಲ್ ಯುಗ !ಮೊಬೈಲ್ ಗಿರುವ ಬೆಲೆ ಮನುಷ್ಯನಿಗಿಲ್ಲ. ನಮ್ಮವರ ಜೊತೆ ಬೆರೆತಾಗಲೂ, ಯಾವುದೇ ಕಾರ್ಯಕ್ರಮದಲ್ಲಿದ್ದರೂ, ಸಂತೋಷದ ಕ್ಷಣಗಳನ್ನು ಅನುಭವಿಸದೆ ಮೊಬೈಲ್ ನಲ್ಲಿ ಬ್ಯೂಸಿಯಾಗುತ್ತಿದ್ದೇವೆ. ಅತಿಯಾದ ಮೊಬೈಲ್ ಬಳಕೆಯಿಂದ ನಾವು ನಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆಂದು ನಮಗೆ ಅನಿಸುವುದೇ ಇಲ್ಲ.! ಚಿಕ್ಕಮಕ್ಕಳಿಗಂತೂ ಮೊಬೈಲ್ ಫೋನ್ ಆಟಿಕೆಯ ವಸ್ತುವಾಗಿ ಬಿಟ್ಟಿದೆ.
ನಮ್ಮವರೊಡನೆ ನಾವು ಬೆರೆಯದೆ, ಸುತ್ತಮುತ್ತಲಿನ ವಾತಾವರಣ ಅರಿಯದೆ, ಮೊಬೈಲ್ ನಲ್ಲಿ ಬಂಧಿಯಾಗಿ, ಒಂದು ಕ್ಷಣ ಕೂಡ ಮೊಬೈಲ್ ಇಲ್ಲದೇ ಬದುಕಲಾರದ ಸ್ಥಿತಿಗೆ ನಾವು ತಲುಪಿದ್ದೇವೆ. ಮೊಬೈಲ್ ಬಳಕೆ ತಪ್ಪಲ್ಲ ಆದರೆ ಅದಕ್ಕೂ ಮಿತಿಯಿದೆ. ಅತಿಯಾದರೆ ಅಮ್ರತವೂ ವಿಷ ಎನ್ನುವ ಮಾತಿದೆ.ನಿಮ್ಮ ಬದುಕಿನ ಪಯಣದಲ್ಲಿ ನಿಮ್ಮೊಡನೆ ಹೆಜ್ಜೆ ಹಾಕುವುದು ನಿಮ್ಮ ಕುಟುಂಬವೇ ಹೊರತು, ನಿಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಫೊಲೋವರ್ಸಗಳಲ್ಲ!
ನಮ್ಮ ಸಾಧನೆಯ ಹಾದಿಯಲ್ಲಿ ಮೊಬೈಲ್ ನ್ನು ಒಂದು ಸಾಧನವಾಗಿ ಬಳಸಬೇಕು. ಆದರೆ ಅತಿಯಾದ ಮೊಬೈಲ್ ಬಳಕೆಯೇ ನಮ್ಮ ಸಾಧನೆಯಾಗಬಾರದು. ಮೊಬೈಲ್ ನಲ್ಲಿ ವಿನಾಃ ಕಾರಣ ಕಾಲಹರಣ ಮಾಡಿದ ನಾವು ಇಂದು ಕೌಟುಂಬಿಕ ಸಂಭಂಧಗಳಿಂದ ವಿಮುಖರಾಗುತ್ತಿದ್ದೇವೆ .ಇನ್ನಾದರೂ ನಾವು ಯಂತ್ರಗಳಾಗದೆ, ಮನುಷ್ಯರಾಗಿ ಬದುಕಿನ ಪ್ರತಿಯೊಂದು ಕ್ಷಣಗಳನ್ನು ಅನುಭವಿಸುತ್ತಾ, ನಮ್ಮವರೊಡನೆ ಬೆರೆತು ಸಾರ್ಥಕತೆಯ ಬದುಕನ್ನು ಸಾಗಿಸೋಣ…. ಮೊಬೈಲ್ ಬಳಕೆಗೆ ಮಿತಿಯಿರಲಿ…

🖋ಸುಮಂಗಲಾ ದೇವಾಡಿಗ ಉಪ್ಪುಂದ










