ಗಂಗೊಳ್ಳಿ (ಜು, 29) : ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ವೈವಿಧ್ಯಮಯ ಬರಹಗಳ ಮೂಲಕ ಪರಿಚಿತರಾಗಿರುವ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅವರ ಚೊಚ್ಚಲ ಕೃತಿ ‘ಹೇಳದೆ ಹೋದ ಮಗಳಿಗೆ’ ಪುಸ್ತಕಕ್ಕೆ ತುಮಕೂರಿನ ಪ್ರತಿಷ್ಠಿತ ಸಂಸ್ಥೆ ಗುರುಕುಲ ಕಲಾ ಪ್ರತಿಷ್ಠಾನ(ರಿ)ದ ವತಿಯಿಂದ ಕೊಡಮಾಡುವ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಲಭಿಸಿದೆ. ವೈವಿಧ್ಯಮಯವಾದ ಪ್ರೇರಣಾತ್ಮಕ ಅಂಕಣ ಬರಹಗಳನ್ನು ಒಳಗೊಂಡಿರುವ ಈ ಕೃತಿ ಓದುಗ ವಲಯದಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದೆ.
ತುಮಕೂರಿನಲ್ಲಿ ನಡೆಯಲಿರುವ ಪ್ರಥಮ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ರಾಜ್ಯಾಧ್ಯಕ್ಷರಾದ ಹುಲಿಯೂರು ದುರ್ಗ ಲಕ್ಷ್ಮೀನಾರಾಯಣ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಶಿವರಾಜ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.