ಗುರು ಎನ್ನುವ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಏಕೆಂದರೆ ಒರ್ವ ಗುರು ತಂದೆ-ತಾಯಿಯ ಎರಡು ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನಾಗಿದ್ದು, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಭಾವಿಸುವ ,ಪ್ರೀತಿಸುವ ಹಾಗೂ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವ ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಹಾಕಲು ಶಿಕ್ಷಕರು ಮಾರ್ಗದರ್ಶಕರಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವು ಅಜ್ಞಾನವನ್ನು ಓಡಿಸುವುದೇ ಆಗಿದೆ. ಪ್ರತಿಯೊಬ್ಬರ ಜೀವನದ ಏಳು- ಬೀಳುಗಳಿಗೆ ಗುರು ಪ್ರತ್ಯಕ್ಷ -ಪರೋಕ್ಷವಾಗಿ ಕಾರಣವಾಗುತ್ತಾನೆ.
ಸಪ್ಟೆಂಬರ್, 05 ನಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶದ ಮೊದಲ ಉಪರಾಷ್ಟ್ರಪತಿ, ಶಿಕ್ಷಣತಜ್ಞ, ತತ್ವಜ್ಞಾನಿ ಸರ್ವೆಪಳ್ಳಿ ರಾಧಾಕೃಷ್ಣನ್ ರವರ ಜನ್ಮದಿನ. ಇವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ನಾವೆಲ್ಲರೂ ಆಚರಿಸುತ್ತೇವೆ.
ಶಿಕ್ಷಕರ ಕುರಿತಾದ ಪೂಜ್ಯ ಭಾವನೆಯನ್ನು ಯುವ ಮನಸ್ಸುಗಳಲ್ಲಿ ತುಂಬುವ ಈ ಸುದಿನದಲ್ಲಿ, ವಿದ್ಯಾರ್ಥಿಗಳ ಮನದಲ್ಲಿ ತಮ್ಮ ಬಾಲ್ಯದ ದಿನಗಳ ಶಾಲೆಯ ಟೀಚರ್ ನೆನಪು ಒಮ್ಮೆ ಕಣ್ಣು ಮುಂದೆ ಹಾದುಹೋಗದೆ ಇರದು. ಏನೂ ತಿಳಿಯದ ಮಕ್ಕಳು ಕ್ರಮೇಣ ಏನೇನು ಆಗಿ ಬೆಳೆದು ನಿಲ್ಲುತ್ತಾರೆ.ಆದರೆ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಒಬ್ಬ ಶಿಕ್ಷಕರು ಮಾತ್ರ ಶಿಕ್ಷಕರಾಗಿ ಉಳಿಯುತ್ತಾರೆ. ಮಾತ್ರವಲ್ಲ ವರ್ಷಾನುಗಟ್ಟಲೆ ವಿದ್ಯಾರ್ಥಿಗಳಿಗೆ ಬೋಧಿಸಿ ಅವರ ವ್ಯಕ್ತಿತ್ವವನ್ನು ತಿದ್ದಿ ತೀಡುವ ಗುರುಗಳಿಗೂ ಒಂದು ತೆರನಾದ ಆಶಾಭಾವನೆ ಗಳಿರುತ್ತದೆ.
ತುಂಬಾ ಚೆನ್ನಾಗಿ ಓದುತ್ತಿದ್ದ . ಭವಿಷ್ಯದಲ್ಲಿ ಆತ ಒಳ್ಳೆ ಹೆಸರು ಮಾಡುತ್ತಾನೆ, ಮೇರು ವ್ಯಕ್ತಿಯಾಗುತ್ತಾನೆ ಎಂಬ ವಿಶ್ವಾಸವಿರುತ್ತದೆ. ಅನೇಕ ಬಾರಿ ಅದು ನಿಜವಾದರೂ ಕೆಲವೊಮ್ಮೆ ಅವರ ನಿರೀಕ್ಷೆಗಳು ಹುಸಿಯಾದ ಪ್ರಸಂಗಗಳು ನಡೆಯುತ್ತದೆ.
ಈ ಶುಭದಿನದಂದು ನನಗೆ ಕನ್ನಡ ಅಕ್ಷರ ಕಲಿಸಿದ ನನ್ನ ಪ್ರೀತಿಯ ಟೀಚರ್ ಕುರಿತು ನಿಮಗೆ ಪರಿಚಯಿಸಲಿಚ್ಚಿಸುತ್ತೇನೆ.ನಾವುಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 30 ವರ್ಷದ ಹಿಂದೆ ಓದಿದ್ದ ಪ್ರತಿಯೊಬ್ಬರಿಗೂ ಒಂದನೇ ತರಗತಿಯಲ್ಲಿ ಕನ್ನಡ ಅಕ್ಷರ ಕಲಿಸಿದ “ಸಿಂಗಾರಿಅಮ್ಮ” ಟೀಚರ್ ಗೊತ್ತಿರಲೇ ಬೇಕು. ಸಿಂಗಾರಿ ಟೀಚರ್ ಅಂದಿನ ನನ್ನ ಸಹಪಾಠಿ ಯೋಗಿತಾ ಬಾಲಿಗೆ ಹೆತ್ತಮ್ಮ. ನಮ್ಮಂತಹ ಹಲವಾರು ವಿದ್ಯಾರ್ಥಿಗಳಿಗೆ ಅವರು ಸಿಂಗಾರಿಮ್ಮ! ಕಾರಣವೇನೆಂದು ಕೇಳುತ್ತೀರಾ? ಏಕೆಂದರೆ ಕೆಲವು ವಿದ್ಯಾರ್ಥಿಗಳ “ಅಮ್ಮ”ನ ಮತ್ತು ನನ್ನ “ಹೆತ್ತಮ್ಮನ” ಗೆಳತಿ ಆಗಿದ್ದರು ಸಿಂಗಾರಿ ಅಮ್ಮ. ಹಾಗಾಗಿ ಅವರ ಮನೆ ಹತ್ತಿರದ ವಿದ್ಯಾರ್ಥಿಗಳಾದ ನಾವು ಅವರನ್ನು “ಸಿಂಗಾರಿ ಅಮ್ಮ” ಎಂದು ಪ್ರೀತಿಯಿಂದ ಕರೆಯುತ್ತಿದ್ದೆವು.
ನೆನಪು ಮಾಸಿಲ್ಲ. ನಾನು ಸತ್ಯವಾಗಿ ಹೇಳುತ್ತೇನೆ. ನಾನು ಜಾಣ ಮತ್ತು ಸಭ್ಯ ವಿದ್ಯಾರ್ಥಿ. ಆದರೆ ಕಲಿಕೆಯಲ್ಲಿ ಕೆಲವು ವಿಷಯಗಳಲ್ಲಿ 35 ಗಿಂತ ಹೆಚ್ಚು ಮಾರ್ಕ್ ತೆಗೆದುಕೊಂಡವನೇ ಅಲ್ಲ. ಮನೆಯಲ್ಲಿ ಪುಸ್ತಕವನ್ನು ಮುಟ್ಟುತ್ತಲೇ ಇರಲಿಲ್ಲ. ಇವತ್ತು ಸಿಂಗಾರಿಗೆ ಹೇಳ್ತೆ ,ನೀನು ಮನೆಯಲ್ಲಿ ಓದದಿರುವ ವಿಷಯ ಅಂತ ಅಮ್ಮ ಅಂದು ಹೇಳಿದ ಮಾತು ನಿನ್ನೆಯೂ ಮೊನ್ನೆಯೂ ಹೇಳಿದಂತೆ ಭಾಸವಾಗುತ್ತಿದೆ. ಅಮ್ಮನಿಗೆ ಸಿಂಗಾರಿ ಅಮ್ಮ ಸಿಕ್ಕಾಗ ಅಥವಾ ಮನೆಗೆ ಹೋದಾಗ ನನ್ನ ಬಗ್ಗೆ ಕಂಪ್ಲೀಟ್ ನಡೆಯುತ್ತಲೇ ಇತ್ತು. ಆದರೆ ನಮ್ಮ ಸಿಂಗಾರಿಅಮ್ಮ ಟೀಚರ್ ನನ್ನ ಮೇಲಿದ್ದ ಮಮತೆಯಿಂದ ಗಂಡ್ ಓದುಗರಲ್ಲಿ ಅಡ್ಡಿಲ್ಲ ಅಂತ ಹೇಳಿದ ಆ ಮಾತು ಕಿವಿಗೆ ವರ್ಷದ ಹಿಂದೆ ಹೇಳಿದ ಮಾತಿನಂತಿದೆ. ಒಂದನೇ ತರಗತಿಯಲ್ಲಿ ಇವರು ಕಲಿಸಿದ ಕನ್ನಡ ಅಕ್ಷರ ದಲ್ಲಿ ಇಂದು ಅವರಿಗೆ ಅಕ್ಷರದ ಉಡುಗೊರೆ ಕೊಡಲು ಹೆಮ್ಮೆಪಡುತ್ತೇನೆ.
ಅವರು ಈಗ ನಿವೃತ್ತರಾಗಿ, ಅವರು ದುಡಿದ ನಾವುಂದ ಶಾಲೆಯ ಕೂಗಳತೆ ದೂರದಲ್ಲಿಯೇ ವಾಸವಾಗಿದ್ದು, ಪತಿ ಮತ್ತು ಅವರ ಮೂರು ಮಕ್ಕಳ ಮತ್ತು ಮೊಮ್ಮಕ್ಕಳ ಜೊತೆ ಶಾಲೆಗೆ ಹತ್ತಿರವೇ ವಾಸವಾಗಿದ್ದಾರೆ. ಇವರ ಮೂರು ಜನ ಹೆಣ್ಣು ಮಕ್ಕಳಲ್ಲಿ ಹಿರಿಯವಳು ಮತ್ತು ನಮ್ಮ ಸಹಪಾಠಿ ಯೋಗಿತಾ ಬಾಲಿ ಬೆಂಗಳೂರಿನಲ್ಲಿ ಒಂದು ರಾಷ್ಟ್ರೀಕತ ಬ್ಯಾಂಕಿನಲ್ಲಿ ಒಂದು ಉನ್ನತ ಹುದ್ದೆಯಲ್ಲಿದ್ದು, ಅಮ್ಮನ ನಿವೃತ್ತ ಜೀವನವನ್ನು ಮೂರು ಜನ ಹೆಣ್ಣು ಮಕ್ಕಳು ಪ್ರೀತಿಯಿಂದ ನೋಡಿಕೊಂಡಿರುವುದು ನಮ್ಮ “ಸಿಂಗಾರಿಅಮ್ಮ” ಟೀಚರ್ ಲವಲವಿಕೆಯಲ್ಲಿ ಇರುವುದೇ ಇದಕ್ಕೆ ಸಾಕ್ಷಿ. ಇಂದು ಕರೆ ಮಾಡಿ ನನ್ನ ಜೊತೆ ಕೂಡ ಮಮತೆಯಿಂದ ಪ್ರೀತಿಯಿಂದ ಉತ್ಸಾಹದಿಂದ ಮಾತನಾಡಿದರು.
ಶಿಕ್ಷಕರಿಗೆ ತಮ್ಮ ನೆಚ್ಚಿನ ಹಾಗೂ ಅವರ ಮೆಚ್ಚಿನ ವಿದ್ಯಾರ್ಥಿಗಳ ಬಗ್ಗೆ ಕುತೂಹಲವಿದ್ದೇ ಇರುತ್ತದೆ. ಅವನು ಅಥವಾ ಅವಳು ನನ್ನ ವಿದ್ಯಾರ್ಥಿ ಎಂದು ಹೇಳಿಕೊಳ್ಳುವಾಗ ಶಿಕ್ಷಕರ ಮುಖದಲ್ಲಿ ಕಾಣುವ ಸಂತಸ ಸಂಭ್ರಮಗಳು ಇರುತ್ತಲ್ಲಾ… ಅದನ್ನು ವಿವರಿಸಲು ಅಸಾಧ್ಯ.
ನನ್ನ ಶಾಲಾ ದಿನಗಳು ಇಂದಿಗೂ ನನ್ನ ಮನಸಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ನಾನು ಆರನೇ ತರಗತಿಯ ತನಕ ಓದಿದ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವುಂದ. ಅಲ್ಲಿ ಕನ್ನಡ ಅಕ್ಷರ ಕಲಿಸುವ ಸಿಂಗಾರಿ ಟೀಚರ್ ನನಗೆ ಬಲು ಇಷ್ಟವಾದ ಟೀಚರ್. ಇಂದಿಗೂ ಅವರು ಕಲಿಸಿದ ಕನ್ನಡ ಅಕ್ಷರಗಳಿಂದ ಹಲವಾರು ಮಂದಿಗಳ ಪರಿಚಯ ಲೇಖನ ಬರೆಯುತ್ತಾ ಅಕ್ಷರ ನಮನ ಸಲ್ಲಿಸಿದ ಆತ್ಮತೃಪ್ತಿ ಇದೆ. ಅದಕ್ಕೆಲ್ಲ ಕಾರಣ ನಮ್ಮ ಸಿಂಗಾರಿ ಅಮ್ಮ ಕಲಿಸಿದ ಕನ್ನಡ ಅಕ್ಷರದ ಮಹಿಮೆ. ನನ್ನ ಸಹಪಾಠಿ ಯೋಗಿತ ಬಾಲಿ ನನಗೆ ಗುರುಮಾತೆಯ ಮಗಳು.
ಇಂದಿನ ಮಕ್ಕಳು ರಾಂಕ್ ಪಡೆಯುವ ಹಂಬಲಕ್ಕೆ ಒತ್ತಡಕ್ಕೆ ಬಿದ್ದು ಶಿಕ್ಷಕರೊಂದಿಗೆ ಬೆಳೆಸಿಕೊಳ್ಳಬೇಕಾದ ಭಾವನಾತ್ಮಕ ಸಂಬಂಧವನ್ನು ಕಳೆದು ಕೊಳ್ಳುತ್ತಿದ್ದಾರೆ.
ಇಂದು ಮಕ್ಕಳಿಗೆ ಆಸಕ್ತಿದಾಯಕವಾಗಿ ಬೋಧಿಸುವ ವಿಧಾನ ಹೆಚ್ಚಾಗಿ ಜಾರಿಗೆ ಬಂದಿಲ್ಲ. ಇತ್ತೀಚೆಗೆ ಮಕ್ಕಳು ಶಿಕ್ಷಕರೊಂದಿಗೆ ಒಂದು ರೀತಿ ಯಾಂತ್ರಿಕ ಸಂಬಂಧವನ್ನು ಹೊಂದಿರುವುದು ವಿಪರ್ಯಾಸ. ಬೇಕಾದರೆ ನೀವು ಕೂಲಿ ಕೆಲಸ ಮಾಡಿಕೊಂಡು ಇರಿ ಆದರೆ ತಂದೆ-ತಾಯಿ ಮತ್ತು ಗುರು-ಹಿರಿಯರನ್ನು ಗೌರವದಿಂದ ನೋಡಿ .ಗುರುಗಳನ್ನು ಗೌರವಿಸಲು ಪ್ರತಿನಿತ್ಯ ಆಗದಿದ್ದರೂ ವರ್ಷಕ್ಕೆ ಒಮ್ಮೆಯಾದರೂ ನಿಮಗೆ ಬೋಧನೆ ಮಾಡಿದ ಗುರುಗಳನ್ನು ನೆನೆಸಿಕೊಂಡು ಒಂದು ಕರೆ ಮಾಡಿ ಮಾತನಾಡಿ. ಆ ಒಂದು ಕರೆ ನಿವೃತ್ತ ಜೀವನದಲ್ಲಿರುವ ಆ ಗುರುಗಳಿಗೆ ಆ ಜೀವಕ್ಕೆ ಸಂಜೀವಿನಿ ಆಗಬಹುದು. ಹಾಗಾಗಿ ನಮ್ಮ ನಾವುಂದ ಶಾಲೆಯಲ್ಲಿ ಓದಿದ ಸಿಂಗಾರಿ ಅಮ್ಮ ರವರ ಹಳೆ ವಿದ್ಯಾರ್ಥಿಗಳಿಗೆ ಕರೆ ಮಾಡಿ ಮಾತನಾಡಲು ಅನುಕೂಲವಾಗಲೆಂದು ಈ ಲೇಖನದ ಜೊತೆಗೆ ನಮ್ಮ ಪ್ರೀತಿಯ “ಸಿಂಗಾರಿ ಅಮ್ಮ” ಟೀಚರ್ ಅವರ ಫೋನ್ ನಂಬರ್ ಕೂಡ ಪ್ರಕಟಿಸುತ್ತಿದ್ದೇವೆ. ( 9481751582 ).
ಈಶ್ವರ್ ಸಿ. ನಾವುಂದ
ಚಿಂತಕರು ಹಾಗೂ ಬರಹಗಾರರು