ವಂದೇ ಮಾತರಂ,ಜನಗನಮನ,ಮಾ ತುಜೆ ಸಲಾಮ್ ,ಯೇ ಮೆರೆ ವತನ್ ಕೆ ಲೋಗೊ,ಸಂದೇಸೆ ಆತೆ ಹೆ ಹಮೆ ತಡಪಾತೆ ಹೆ….ಈ ಹಾಡುಗಳನ್ನು ನಾವೆಲ್ಲರೂ ಒಮ್ಮೆಯಾದರೂ ಹಾಡಿದ್ದೆವೆ.ಜೊತೆಗೆ ಸಂದರ್ಭಕ್ಕೆ ಅನುಗುಣವಾಗಿ ಒಂದೆರಡು ಕಂಬನಿ ಕಣ್ಣಂಚಲಿ ಸುರಿಸಿದ್ದೆವೆ. ಈ ಹಾಡುಗಳನ್ನು ಕೇಳುವಾಗ ಅಥವಾ ಹಾಡುವಾಗ ಮೈ ಮನಗಳಲ್ಲಿ ರೋಮಾಂಚನ ಹಾಗೂ ರಾಷ್ಟ್ರಭಕ್ತಿ ಉದ್ದೀಪನಗೊಂಡ ಅನುಭವ ಪ್ರತಿಯೊಬ್ಬ ಭಾರತೀಯನಿಗೂ ಆಗಿರುತ್ತದೆ ಎನ್ನುವುದು ನನ್ನ ಅನಿಸಿಕೆ .ಯಾಕೆಂದರೆ ಈ ಹಾಡುಗಳಲ್ಲಿ ಸ್ವಾತಂತ್ರ್ಯ ಹೋರಾಟದ ಅದೆಷ್ಟೋ ಸಂಗತಿಗಳು ಅಡಗಿದೆ.
ಇಷ್ಟುದ್ದದ ಪೀಠಿಕೆ ಹಾಕಿ ವಿಚಾರ ಪ್ರಾರಂಭಿಸುತ್ತಿರುವುದಕ್ಕೆ ಕಾರಣ ಇತ್ತೀಚೆಗೆ ನಮ್ಮ ದೇಶದಲ್ಲಿ ಭುಗಿಲೆದ್ದಿರುವ ಭಾಷಾ ಸಂಘರ್ಷ ಅರ್ಥಾತ್ ಹಿಂದಿ ಭಾಷೆ ಹೇರಿಕೆಯ ನೆಪದಲ್ಲಿ ನಡೆಯುತ್ತಿರುವ ಭಾಷಾ ರಾಜಕೀಯ.ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ ,ಇದರಿಂದಾಗಿ ಪ್ರಾದೇಶಿಕ ಭಾಷೆಗಳ ಅಸ್ಮೀತೆಗೆ ದೊಡ್ಡ ಹೊಡೆತ ಬಿದ್ದಿದೆ ಎನ್ನುವ ಗುಮಾನಿ ರಾಜ್ಯಗಳ ಜನರಲ್ಲಿ ಒಂದಿಷ್ಟು ಪ್ರಶ್ನೆ ಮೂಡಿಸಿರುವುದು ಸಹಜವೇ. ಆದರೆ ಈ ಬೆಳವಣಿಗೆಯನ್ನು ಗಮನಿಸಿದ ಕೆಲವು ವಿಲಕ್ಷಣ ಮನಸ್ಸುಗಳು ರಾಷ್ಟ್ರೀಯತೆಯ ಕೊಂಡಿಯಾಗಿರುವ ಹಿಂದಿ ಭಾಷೆಯ ಮೇಲೆ ಒಮ್ಮೆಲೆ ಮುಗಿಬಿದ್ದು ತಮ್ಮ ವಿರೋಧ ವ್ಯಕ್ತಪಡಿಸಿರುವುದು ಇಡೀ ನಮ್ಮ ರಾಷ್ಟ್ರೀಯತೆಯ ಭಾವನೆಗಳ ಮೇಲೆ ಗಧಾ ಪ್ರಹಾರ ಮಾಡಿದಂತೆ ಅನಿಸಿತು.
ಯಾವುದೇ ಒಂದು ಭಾಷೆಯನ್ನು ಒಂದು ಪ್ರದೇಶದ ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರುವುದನ್ನು ವಿರೋಧಿಸ ಬೇಕಾಗಿರುವುದು ಸರಿಯೇ. ಸರ್ಕಾರಿ ಉದ್ಯೋಗ , ಸ್ಪರ್ಧಾತ್ಮಕ ಪರೀಕ್ಷೆ ,ನಾಗರಿಕ ಸೇವಾ ನೇಮಕಾತಿಗಳು ಪ್ರಾದೇಶಿಕ ಭಾಷೆಗಳಲ್ಲೂ ನಡೆಸ ಬೇಕೆನ್ನುವುದು ಒಪ್ಪಿಕೊಳ್ಳಬೇಕಾದ ಸಂಗತಿ.
ಪ್ರಾದೇಶಿಕ ಭಾಷೆ ಆ ಭಾಗದ ಜನರ ಮಾತ್ರಭಾಷೆಯಾಗಿ, ಸಾಂಸ್ಕೃತಿಕ ಬದುಕಿನ ಭಾವನಾಡಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಆ ಭಾಗದ ಜನರ ದಿನನಿತ್ಯ ಬದುಕಿನ ಅತ್ಯವಶ್ಯಕ ಸಂಗತಿಯಾಗಿ ಗುರುತಿಸಿಕೊಳ್ಳುತ್ತದೆ ಹಾಗೂ ಗುರುತಿಸಿಕೊಳ್ಳ ತಕ್ಕದ್ದೂ ಕೂಡ. ಆದರೆ ರಾಜಕೀಯದ ಕುಂಟು ನೆಪವೊಡ್ಡಿ ಇಡೀ ಹಿಂದಿ ಭಾಷೆಯ ಅಸ್ಮೀತೆಯನ್ನು ಪ್ರಶ್ನಿಸುವುದು ಹಾಗೂ ದ್ವೇಷಿಸುವುದು ಎಷ್ಟು ಸರಿ?
ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಿಂದಿ ಭಾಷೆಯ ಕೊಡುಗೆ ಮರೆಯಲಸಾಧ್ಯ. ಪ್ರಾದೇಶಿಕ ಭಾಷೆಗಳ ಸತ್ವವನ್ನು ತನ್ನಲ್ಲಿ ಸೇರಿಸಿಕೊಂಡು ಇಡೀ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ವಿಜಯದ ದಿಕ್ಕಿನತ್ತ ಕೊಂಡೊಯ್ದ ಹಿರಿಮೆ- ಗರಿಮೆ ಹಿಂದಿ ಭಾಷೆಗೆ ಸಲ್ಲುತ್ತದೆ. ರಾಷ್ಟ್ರೀಯತೆಯ ಕಲ್ಪನೆಯಡಿ ಯೋಚಿಸುವುದಾದರೆ ಒಂದು ರಾಷ್ಟ್ರಕ್ಕೆ ಅಧಿಕೃತವಾದ ರಾಷ್ಟ್ರ ಭಾಷೆ ಅತ್ಯವಶ್ಯಕ.
ವಿಭಿನ್ನ ಸಾಂಸ್ಕೃತಿಕ ,ಜನಾಂಗೀಯ, ಜೀವನ ಪದ್ದತಿ ಹೊಂದಿರುವ ದೇಶದಲ್ಲಿ ಜನರ ರಾಷ್ಟ್ರೀಯತೆಯ ಭಾವನೆಗಳನ್ನು ಒಗ್ಗೂಡಿಸುವುದು ಅಷ್ಟು ಸುಲಭವಲ್ಲ. ಆ ನಿಟ್ಟಿನಲ್ಲಿ ಜನರು ಒಂದು ನಿರ್ದಿಷ್ಟ ಭಾಷೆಯನ್ನು ಭಾವನಾತ್ಮಕವಾಗಿ ಅಪ್ಪಿಕೊಳ್ಳಲಾಗದಿದ್ದರೂ ,ಪ್ರೀತಿಯಿಂದ ಒಪ್ಪಿಕೊಳ್ಳ ಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ರಾಷ್ಟ್ರೀಯತೆಯ ಅಡಿಪಾಯ ಭದ್ರಗೊಳ್ಳುತ್ತದೆ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಪ್ರಾದೇಶಿಕತೆ ಜನರಲ್ಲಿ ಆಳವಾಗಿ ಬೇರೂರಿ ರಾಷ್ಟ್ರೀಯತೆಗೆ ಸವಾಲಾಗಿ ನಿಂತರೆ ಮುಂದಾಗುವ ಅನಾಹುತವೇ ಬೇರೆ!
ರಾಜ್ಯಶಾಸ್ತ್ರದ ಪರಿಕಲ್ಪನೆಯ ಅಥವಾ ಐರೋಪ್ಯ ಮಾದರಿಯ ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ಕಲ್ಷನೆ ನಿಜಕ್ಕೂ ಭಾರತದಂಹ ರಾಷ್ಟ್ರಕ್ಕೆ ಅನ್ವಯಿಸುವಂತದಲ್ಲ ಮತ್ತು ಅಪ್ರಸ್ತುತ ಕೂಡ. ನಮ್ಮ ದೇಶದಲ್ಲಿನ ಸ್ವಾತಂತ್ರ್ಯ ಹೋರಾಟದ ಇತಿಹಾಸ ,ರೋಚಕತೆ, ರಾಷ್ಟ್ರೀಯತೆ ಹಾಗೂ ನಮ್ಮಲ್ಲಿನ ವಿವಿಧತೆಯಲ್ಲಿನ ಐಕ್ಯತೆ ನಿಜಕ್ಕೂ ರೋಮಾಂಚನ ,ಅವರ್ಣನೀಯ ಹಾಗೂ ಅವಿಸ್ಮರಣೀಯ. ಜಗತ್ತಿನ ಯಾವ ದೇಶವೂ ಹೊಂದಿರದ ವೈಶಿಷ್ಟ್ಯಗಳನ್ನು ಭಾರತ ಹೊಂದಿದೆ ಆದರೆ ಸಮಕಾಲೀನ ಕೆಲವು ಸಂಕುಚಿತ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬೆಳವಣಿಗೆಗಳು ನಮ್ಮ ಐಕ್ಯತೆಗೆ ಸವಾಲೆಸಗುತ್ತಿದೆ.ಅದರಲ್ಲಿ ಭಾಷಾ ವೈಷಮ್ಯವೂ ಕೂಡ ಒಂದು.
ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಒಳಪಡುತ್ತಿರುವ ಜನರು ತಮ್ಮ ಮಕ್ಕಳಲ್ಲಿ ಬ್ರಿಟಿಷ್ರ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಪರಿ, ಇದರಿಂದ ಪ್ರಾದೇಶಿಕ ಭಾಷೆಯ ಅಸ್ತಿತ್ವಕ್ಕೆ ಕೊಡಲಿ ಏಟು ಬಿದ್ದಿರುವ ಸಂಗತಿ ತಿಳಿದಿದ್ದೂ ಜಾಣ ಪೆದ್ದರ ಹಾಗೆ ವರ್ತಿಸುತ್ತಿರುವುದು ಜೊತೆಗೆ ಹಿಂದಿ ಭಾಷೆಯನ್ನು ದ್ವೇಷಿಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.ನೆನಪಿರಲಿ ….ನಮ್ಮ ದೇಶದ ಸೈನಿಕರು ಅತಿ ಹೆಚ್ಚು ಬಳಸುವ ಭಾಷೆ ಹಿಂದಿ. ಸೈನಿಕರು ಬೇರೆ ಬೇರೆ ರಾಜ್ಯ ಹಾಗೂ ಪ್ರಾದೇಶಿಕ ಹಿನ್ನೆಲೆಯಿಂದ ಬಂದವರಾದರೂ ಹಿಂದಿ ಭಾಷೆಯನ್ನು ಅಪ್ಪಿಕೊಂಡು,ಒಪ್ಪಿಕೊಂಡು ಗೌರವಿಸುತ್ತಾರೆ …
ಅದೆಷ್ಟೋ ವಿದೇಶಿ ಭಾಷೆಗಳನ್ನು ಮಾತ್ರ ಭಾಷೆಯೊಂದಿಗೆ ಸೇರಿಸಿಕೊಂಡು ಮಾತನಾಡುವ ಹಾಗೂ ಪ್ರಾದೇಶಿಕ ಭಾಷೆಯ ರಕ್ಷಣೆಯ ನೆಪವೊಡ್ಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ವಿಚಿತ್ರ ಮನಸ್ಥಿತಿಯ ಸಂಘಟನೆಗಳು ಪ್ರಾದೇಶಿಕತೆಗೆ ಧಕ್ಕೆ ಬಾರದ ಹಾಗೆ ಹಿಂದಿ ಭಾಷೆಯನ್ನು ಹೇಗೆ ಗೌರವಿಸಬೇಕು ಎನ್ನುವುದರ ಕುರಿತು ಮನವರಿಕೆಯಾಗಬೇಕಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಾತ್ರಭಾಷೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ರಾಷ್ಟ್ರೀಯತೆಯ ಕೊಂಡಿಯಾಗಿರುವ ಹಿಂದಿ ಭಾಷೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸಬೇಕು ಹೊರತು ಒತ್ತಾಯ, ಹೇರಿಕೆಯ ಕುಂಟು ನೆಪದಿಂದಲ್ಲಾ…
ಲೇಖನ : ಪ್ರವೀಣ್ ಗಂಗೊಳ್ಳಿ