ಮೂಡುಬಿದಿರೆ(ಅ,10):ಬಿಲ್ಲವ ಯುವ ವಾಹಿನಿ ಮತ್ತು ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು-ಮಹಾತ್ಮಾ ಗಾಂಧಿ ಸಮನ್ವಯತೆಯ ಕುರಿತಾದ ವಿಚಾರ ಗೋಷ್ಠಿ ಅಕ್ಟೋಬರ್ ,10ರಂದು ಜರುಗಿತು. ಈ ವಿಚಾರಗೋಷ್ಠಿಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಾಹುಬಲಿ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.
ವಿಚಾರ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿಂತಕ ಶ್ರೀ ಅರವಿಂದ ಚೋಕ್ಕಾಡಿ ಮಹಾತ್ಮಾ ಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭೇಟಿಯಾದ ಕ್ಷಣದ ಸ್ವಾರಸ್ಯಕರ ಘಟನೆಗಳನ್ನು ತಿಳಿಸಿದರು.ಮಾರ್ಚ್,12 1925 ರಂದು ಮಧ್ಯಾಹ್ನ 3 ಘಂಟೆಗೆ ಮಹಾತ್ಮಾ ಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭೇಟಿಯಾಗುತ್ತಾರೆ.
ಅವರ ಮಾತುಕತೆ ಸಣ್ಣ ಹಾಸ್ಯದಿಂದ ಪ್ರಾರಂಭ ಆಗುತ್ತದೆ. ಇಬ್ಬರೂ ದೊಡ್ಡ ಮನುಷ್ಯರು. ಅವರ ಹಾಸ್ಯವೂ ದೊಡ್ಡ ರೀತಿಯಲ್ಲೆ ಇರುತ್ತದೆ. ಗಾಂಧೀಜಿ ಹಾಸ್ಯವನ್ನು ಸೃಷ್ಟಿಸುವುದರಲ್ಲಿ ನಿಪುಣರಾಗಿದ್ದರು. ನಾರಾಯಣ ಗುರುಗಳನ್ನು ಕಂಡಾಗ ಗಾಂಧಿ ಗುರುಗಳ ಕಾಲೆಳೆಯಲು,” ಗುರುಗಳಿಗೆ ಇಂಗ್ಲಿಷ್ ಗೊತ್ತಿಲ್ಲವಂತೆ. ಹೌದೆ?” ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ನಾರಾಯಣ ಗುರುಗಳು,” ಆ ವಿಷಯ ಹೌದು. ಆದರೆ ಮಹಾತ್ಮರಿಗೆ ಸಂಸ್ಕೃತ ಬರುವುದಿಲ್ಲವಂತೆ. ಹೌದೇ?” ಎಂದು ಕೇಳಿದರು. ನಂತರ ಇಬ್ಬರೂ ನಕ್ಕರು. ಆ ಸಂದರ್ಭದಲ್ಲಿ ಅದು ಹಾಸ್ಯವನ್ನು ಸೃಷ್ಟಿಸುತ್ತದೆ.
ಈ ಭೇಟಿಯಲ್ಲಿ ಗಾಂಧಿ ಮತ್ತು ನಾರಾಯಣ ಗುರುಗಳು ತುಂಬ ವಿಷಯವನ್ನು ಮಾತನಾಡುತ್ತಾರೆ. ಆ ಮಾತುಕತೆಯಲ್ಲಿ ಗಾಂಧೀಜಿ ಸಮಸ್ಯೆಗೆ ಗುರುಗಳ ಬಳಿ ಪರಿಹಾರವನ್ನು ಕೇಳುವವರಾಗಿ, ನಾರಾಯಣ ಗುರುಗಳು ಸಮಸ್ಯೆಯನ್ನು ಪರಿಹರಿಸುವವರಾಗಿ ಕಾಣಿಸುತ್ತಾರೆ. ಒಂದು ರೀತಿ ಗುರು-ಶಿಷ್ಯರು ಮಾತನಾಡಿದ ಹಾಗೆ ಆ ಸಂವಾದವಿದೆ. ಈ ಸಂವಾದಕ್ಕೆ ಮಹತ್ವ ಇರುವುದು ಗಾಂಧೀಜಿಯಲ್ಲಿದ್ದ ಧಾರ್ಮಿಕ ನಿಲುವುಗಳಿಂದಾಗಿ. ಧಾರ್ಮಿಕ ನಿಲುವುಗಳು ಮೂರು ರೀತಿಯಲ್ಲಿ ಬರುತ್ತದೆ. ಸಾಮಾನ್ಯವಾಗಿ ಧರ್ಮ ಎನ್ನುವುದು ರೂಢಿಗತ ಆಚರಣೆಗಳು, ಭಾವನೆಗಳು, ನಿಷ್ಠೆ, ಸ್ಥಾಪಿತ ಸಂಪ್ರದಾಯಗಳ ಪಾಲನೆಯ ರೂಪದಲ್ಲಿ ಬರುತ್ತದೆ.
ಎರಡನೆಯದು ತನ್ನದಲ್ಲದ ಧರ್ಮೀಯರನ್ನು ನಿರಾಕರಿಸುವ ಅಸಹನೆಯ ರೂಪದಲ್ಲಿ. ಜನರಲ್ಲಿ ಈ ಭಾವನೆ ಇದ್ದಾಗ ಅದು ಮೂಲಭೂತವಾದವಾಗಿ ಬರುತ್ತದೆ. ಈ ಮೂಲಭೂತವಾದಿ ಮನಸ್ಥಿತಿಗೆ ರಾಜಕೀಯವು ಪ್ರವೇಶಿಸಿದಾಗ ಕೋಮುವಾದ; ಕೋಮುವಾದವೇ ಬೆಳೆದು ಮತೀಯ ಭಯೋತ್ಪಾದನೆಯಾಗಿ ಕಾಣಿಸುತ್ತದೆ. ಇನ್ನೊಂದು ಧರ್ಮದ ವೈಚಾರಿಕ ರೂಪದಲ್ಲಿ. ಋಗ್ವೇದದ ನಾಸದೀಯ ಸೂಕ್ತದಲ್ಲಿ ಹೀಗೆ ಬರುತ್ತದೆ:
ಸೃಷ್ಟಿ ಯಾವಾಗ ಆಯಿತೆಂದು ಹೇಳುವವರಾರು? ದೇವರುಗಳೂ ಸೃಷ್ಟಿಯ ನಂತರದವರು. ಅವರಿಗೂ ಸೃಷ್ಟಿ ಹೇಗಾಯಿತೆಂದು ತಿಳಿಯದು ಎಂದು ಪ್ರಜಾಪಿತ ಪರಮೇಷ್ಠಿ ಋಷಿ ಹೇಳುವ ಮಾತು. ಇದು ಧರ್ಮದ ವೈಚಾರಿಕ ಪರಂಪರೆ. ಇದರ ಮೂಲಕವೇ ಧರ್ಮದ ತತ್ವಜ್ಞಾನ ಬೆಳೆದಿದೆ. ನಾರಾಯಣ ಗುರು ಮತ್ತು ಗಾಂಧಿ ಇಬ್ಬರೂ ಕೂಡ ಈ ಅರ್ಥದಲ್ಲಿ ಧರ್ಮವನ್ನು ಸ್ವೀಕರಿಸಿದವರು. ಆದರೆ ಇಬ್ಬರೂ ಧಾರ್ಮಿಕರೇ. ಗಾಂಧೀಜಿ ಸ್ವಲ್ಪ ರೂಢಿತ ಸಂಪ್ರದಾಯಗಳಿಗೆ ನಿಷ್ಠರಿದ್ದರು ಎನ್ನುವಾಗಲೂ ಅವರ ಮೂಲ ಆಸಕ್ತಿ ಧರ್ಮದ ವೈಚಾರಿಕ ಪರಂಪರೆಯೇ.
ನಾರಾಯಣ ಗುರುಗಳು ಬ್ರಹ್ಮಶ್ರೀ. ಈ ಬ್ರಹ್ಮಶ್ರೀ ಯಾಕೆ ಎಂಬ ಪ್ರಶ್ನೆ ಹಲವರಲ್ಲಿದೆ. ನೋಡಿ, ಸನಾತನ ಧರ್ಮ ಮೂಲತಃ ಬ್ರಹ್ಮನ ಉಪಾಸನೆಗೆ ನಿಷ್ಠವಾದದ್ದು. ಬ್ರಹ್ಮ ಎಂದರೆ ಬ್ರಹ್ಮ, ವಿಷ್ಣು, ಶಿವ ಎಂಬ ತ್ರಿಮೂರ್ತಿಗಳಲ್ಲಿ ಬರುವ ಬ್ರಹ್ಮ ಅಲ್ಲ. ಹುಟ್ಟು ಸಾವುಗಳಿಲ್ಲದ ನಿರಾಕಾರ ಪರಬ್ರಹ್ಮ. ಛಾಂದೋಗ್ಯ ಉಪನಿಷತ್ ನಲ್ಲಿ ಬರುವ ‘ಅತ್ತಿಯ ಬೀಜವನ್ನು ಒಡೆದಾಗ ಏನೂ ಕಾಣದಿರುವಲ್ಲಿರುವ ಸೂಕ್ಷ್ಮವೇ ಬ್ರಹ್ಮ’ ಎನ್ನುವುದು ಮತ್ತು ಬೃಹದಾರಣ್ಯಕ ಉಪನಿಷತ್ನಲ್ಲಿ ಬರುವ,” ಈ ಅನಂತ ಅಂತರಿಕ್ಷವೇ ಬ್ರಹ್ಮ” ಎಂಬ ಭೌಮ ಪರಿಕಲ್ಪನೆಯ ಬ್ರಹ್ಮ. ಅದ್ವೈತ ತತ್ವವಿದು. ಶ್ರೀ ಶಂಕರ ಭಗವತ್ಪಾದರ,” ಅಹಂ ಬ್ರಹ್ಮಾಸ್ಮಿ” ಎನ್ನುವ ಚಿಂತನೆಯೂ ಇದೆ. ನಾರಾಯಣ ಗುರುಗಳು ಶಿಷ್ಯರಿಗೆ ಶಂಕರಾಚಾರ್ಯರನ್ನು ಓದಿ ಎಂದಾಗ ಅವರ ಬರಹಗಳು ಕಠಿಣ ಎಂದು ಶಿಷ್ಯರು ಹೇಳಿದ್ದರಿಂದ ‘ ದರ್ಶನ ಮಾಲಾ” ಎಂಬ ಉಪನಿಷತ್ತನ್ನು ಬರೆದರು.
ವೇದವನ್ನು ಅರ್ಥ ಮಾಡಿಕೊಳ್ಳುವ ಸೂತ್ರವನ್ನೂ ನಾರಾಯಣ ಗುರುಗಳು ಬರೆದಿದ್ದಾರೆ. “ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನುಪಶ್ಯತಿಃ” ಅಂದರೆ ಎಲ್ಲ ಜೀವಿಗಳಲ್ಲಿ ನಿನ್ನ ಆತ್ಮವನ್ನೆ ಕಾಣು” ಎನ್ನುವ ತತ್ವದ ಬ್ರಹ್ಮದ ಉಪಾಸಕರಾದ್ದರಿಂದ ಅವರು,’ ಬ್ರಹ್ಮಶ್ರೀ’.
ಗಾಂಧೀಜಿ ವೈಷ್ಣವರು. ಆದರೆ ಯಾವ ವೈಷ್ಣವ ಎಂದು ನನಗೆ ಸ್ಪಷ್ಟವಿಲ್ಲ. ಮಾಧ್ವ ಪಂಥದ ವೈಷ್ಣವ ದ್ವೈತ ತತ್ವದ್ದು. ತಾತಾಚಾರ್ಯರ ಪಂಥದ ವೈಷ್ಣವ ಅದ್ವೈತ ತತ್ವದ್ದು. ಗಾಂಧಿ ವೈಷ್ಣವರೇ ಇದ್ದಾಗಲೂ ಅವರು ಇಡೀ ಹಿಂದೂ ಧರ್ಮದ ಸರ್ವಸ್ವವೂ ಈಶಾವಾಸ್ಯ ಉಪನಿಷತ್ತಿನ ಮೊದಲನೆಯ ಮಂತ್ರವಾದ,”ಓಂ ಈಶಾವಾಸಮಿದಂ ಶರೀರಂ ಯತ್ಕಿಂಚ ಜಗತ್ಯಾಂ ಜಗತ್” ಎನ್ನುವುದರಲ್ಲಿದೆ ಎಂದು ಗಾಂಧೀಜಿ ಹೇಳಿದ್ದರು. ಈಶಾವಾಸ್ಯ ಉಪನಿಷತ್ ಅದ್ವೈತವನ್ನು ಪ್ರತಿಪಾದಿಸುತ್ತದೆ. ಆದರೆ ಗಾಂಧೀಜಿ ತನ್ನನ್ನು ತಾನು ಸನಾತನಿ ಹಿಂದೂ ಎಂದೇ ಹೇಳಿಕೊಂಡಿದ್ದರೂ ಜೈನ ಧರ್ಮದ ದಟ್ಟ ಪ್ರಭಾವಕ್ಕೆ ಒಳಗಾದವರು.
ಗಾಂಧೀಜಿಯ ಅಹಿಂಸೆಯ ತತ್ವ ಜೈನ ಧರ್ಮದ್ದು;ಹಿಂದೂ ಧರ್ಮದ್ದಲ್ಲ. ಆಶ್ರಮದ ಯುವತಿ ಕುಡಿಯಲು ಕೊಟ್ಟ ಬಿಸಿ ನೀರಿಗೆ ಮುಚ್ಚದೆ ಹೋದಾಗ ಗಾಂಧಿ ಬಿಸಿ ನೀರಿನ ಆವಿಗೆ ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸಾಯುತ್ತವೆ;ಅವುಗಳನ್ನು ಕೊಲ್ಲುವ ಹಕ್ಕು ನಮಗಿಲ್ಲ ಎನ್ನುವಲ್ಲಿ ಕಾಣಿಸುವುದು ಜೈನ ಧರ್ಮದ ಅಹಿಂಸೆಯ ನಿಷ್ಠೆ. ಹಿಂದೂ ಧರ್ಮ ಅಹಿಂಸೆಯನ್ನು ಜೈನ ಧರ್ಮದಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸುವುದಿಲ್ಲ. ಗಾಂಧೀಜಿ ಮತ್ತು ನಾರಾಯಣ ಗುರುಗಳಿಬ್ಬರೂ ಧರ್ಮವನ್ನು ಬಹಳ ವಿಶಾಲವಾದ ಅರ್ಥದಲ್ಲಿ ತೆಗೆದುಕೊಂಡಿದ್ದವರಾಗಿದ್ದರು.
ಗಾಂಧೀಜಿ ನಾರಾಯಣ ಗುರುಗಳನ್ನು ಭೇಟಿಯಾದಾಗ ನಡೆಸಿದ ಜಿಜ್ಞಾಸೆಯ ಮುಖ್ಯ ವಿಷಯಗಳನ್ನು ಹೇಳಲು ಪ್ರಯತ್ನಿಸುತ್ತೇನೆ. ಹಿಂದೂ ಧಾರ್ಮಿಕ ರಚನೆಗಳಲ್ಲಿ ಅಸ್ಪೃಶ್ಯತೆಗೆ ಸಮರ್ಥನೆ ಇದೆಯೆ ಸ್ವಾಮೀಜಿ? ಎಂದು ಗಾಂಧಿ ಕೇಳುತ್ತಾರೆ.
ನಾರಾಯಣ ಗುರುಗಳು”ಇಲ್ಲ” ಎಂದು ಉತ್ತರಿಸುತ್ತಾರೆ. ಅಸ್ಪೃಶ್ಯತೆಯ ನಿವಾರಣೆಗಾಗಿ ನಡೆಯುತ್ತಿರುವ ವೈಕಂ ಸತ್ಯಾಗ್ರಹದ ಬಗ್ಗೆ ತನ್ನ ಭಿನ್ನಾಭಿಪ್ರಾಯ ಇಲ್ಲ ಎಂದೇ ನಾರಾಯಣ ಗುರುಗಳು ಉತ್ತರಿಸುತ್ತಾರೆ. ಗುರುಗಳು ವೈಕಂ ಸತ್ಯಾಗ್ರಹದಲ್ಲಿ ನೇರವಾಗಿ ಭಾಗವಹಿಸಿರಲಿಲ್ಲ. ಆದರೆ ಸತ್ಯಾಗ್ರಹಕ್ಕೆ ಒಂದು ಸಾವಿರ ರೂಪಾಯಿಯೇನೊ ಕೊಟ್ಟಿದ್ದರು. ಸತ್ಯಾಗ್ರಹಿಗಳಿಗೆ ಆಶ್ರಯವನ್ನು ನೀಡಿದ್ದರು.
ಗಾಂಧೀಜಿಯವರು, “ಅಸ್ಪೃಶ್ಯರಷ್ಟೇ ಅಲ್ಲದೆ,ಹಿಂದುಳಿದ ವರ್ಗಗಳಿಗೆ ಏನೇನು ಅಗತ್ಯವಿದೆ ಎಂದು ಸ್ವಾಮೀಜಿ ಭಾವಿಸುವಿರಿ?” ಎಂದು ಕೇಳುತ್ತಾರೆ. ಅದಕ್ಕೆ ನಾರಾಯಣ ಗುರುಗಳು,
” ಅವರು ಒಳ್ಳೆಯ ಶಿಕ್ಷಣ ಮತ್ತು ಸಂಪತ್ತನ್ನು ಹೊಂದಬೇಕು.ಸಹಭೋಜನ ಮತ್ತು ಅಂತರ್ಜಾತೀಯ ವಿವಾಹ ತಕ್ಷಣವೇ ಆಗಬೇಕೆಂದು ನಾನು ಭಾವಿಸುವುದಿಲ್ಲ. ಇತರರೊಂದಿಗೆ ಅಭಿವೃದ್ಧಿ ಹೊಂದಲು ಹಿಂದುಳಿದವರಿಗೂ ಅವಕಾಶ ಸಿಗಬೇಕು” ಎಂದು ಉತ್ತರಿಸುತ್ತಾರೆ.
ಗಾಂಧೀಜಿ,”ಕೆಲವರು ಅಹಿಂಸಾತ್ಮಕ ಸತ್ಯಾಗ್ರಹ ನಿರರ್ಥಕ. ನಮ್ಮ ಹಕ್ಕುಗಳ ಸ್ಥಾಪನೆಗೆ ಬಲಪ್ರಯೋಗವನ್ನೆ ಮಾಡಬೇಕು ಎನ್ನುತ್ತಾರೆ.ಸ್ವಾಮೀಜಿಯ ಅಭಿಪ್ರಾಯವೇನು?” ಎಂದು ಕೇಳುತ್ತಾರೆ. ನಾರಾಯಣ ಗುರುಗಳು,”ಬಲಪ್ರಯೋಗವು ಒಳ್ಳೆಯದೆಂದು ನಾನು ಭಾವಿಸುವುದಿಲ್ಲ” ಎಂದು ಉತ್ತರಿಸಿ ಗಾಂಧೀಜಿಯವರ ಸತ್ಯಾಗ್ರಹವನ್ನು ಸಮರ್ಥಿಸುತ್ತಾರೆ. ಗಾಂಧೀಜಿ,” ಹಿಂದೂ ಧರ್ಮದ ರಚನೆಗಳು ಬಲಪ್ರಯೋಗ ಒಳ್ಳೆಯದೆಂದು ಪ್ರತಿಪಾದಿಸುತ್ತವೆಯೇ?” ಎಂದು ಕೇಳುತ್ತಾರೆ.
ನಾರಾಯಣ ಗುರುಗಳು,” ಪುರಾಣಗಳು ರಾಜನು ಬಲಪ್ರಯೋಗಿಸಬೇಕಾದ ಅಗತ್ಯವನ್ನು ಹೇಳುತ್ತವೆ. ಆದರೆ ಸಾಮಾನ್ಯ ಜನರ ವಿಚಾರದಲ್ಲಿ ಇದನ್ನು ಸಮರ್ಥಿಸುವುದಿಲ್ಲ” ಎಂದು ಉತ್ತರಿಸುತ್ತಾರೆ. ಗಾಂಧಿ ರಾಜನಾಗಿರಲಿಲ್ಲ. ಆದ್ದರಿಂದ ಗಾಂಧೀಜಿ ಹಿಂಸಾತ್ಮಕ ಹೋರಾಟಕ್ಕೆ ಇಳಿಯುವುದು ಧರ್ಮ ಸಮ್ಮತ ಆಗಿರಲಿಲ್ಲ ಎನ್ನುವುದು ಇಲ್ಲಿರುವ ವಿಚಾರವಾಗಿದೆ. ಗಾಂಧೀಜಿ,” ಕೆಲವರು ಮತಾಂತರದಿಂದ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.ಸ್ವಾಮೀಜಿ ಮತಾಂತರವನ್ನು ಅನುಮತಿಸುತ್ತೀರಾ?” ಎಂದು ಕೇಳುತ್ತಾರೆ.
ನಾರಾಯಣ ಗುರುಗಳು,” ಮತಾಂತರದಿಂದ ಒಳ್ಳೆಯದಾದ ನಿದರ್ಶನಗಳಿವೆ. ಆದ್ದರಿಂದ ಮತಾಂತರ ಒಳ್ಳೆಯದು ಎನ್ನುವವರನ್ನು ಖಂಡಿಸಲು ಬರುವುದಿಲ್ಲ” ಎಂದು ಉತ್ತರಿಸುತ್ತಾರೆ. ಗಾಂಧೀಜಿ ಮತಾಂತರಕ್ಕೆ ವಿರುದ್ಧವಾಗಿದ್ದವರು. ನಾರಾಯಣ ಗುರುಗಳು ಮತಾಂತರವನ್ನು ನಿರಾಕರಿಸಿದವರಲ್ಲ. ಆದರೆ ನಾರಾಯಣ ಗುರುಗಳು ಬಾರದಿದ್ದರೆ ಕೇರಳದಲ್ಲಿ ದೊಡ್ಡ ಪ್ರಮಾಣದ ಮತಾಂತರವಾಗುತ್ತಿತ್ತು. ಆದರೆ ಗಾಂಧೀಜಿಯ ಪ್ರಶ್ನೆಗೆ ಉತ್ತರಿಸುತ್ತಾ ನಾರಾಯಣ ಗುರುಗಳು ಆಧ್ಯಾತ್ಮಿಕ ಸ್ವಾತಂತ್ರ್ಯಕ್ಕೆ ಮತಾಂತರ ಅಗತ್ಯವಿಲ್ಲ ಎಂದೇ ತಿಳಿಸುತ್ತಾರೆ.
ಈ ಸಂದರ್ಭದಲ್ಲಿ ನಾರಾಯಣ ಗುರುಗಳ,” ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಪರಿಕಲ್ಪನೆಯ ಬಗ್ಗೆ ಗಾಂಧೀಜಿ ಎತ್ತಿದ ಪ್ರಶ್ನೆಗೆ ನಾರಾಯಣ ಗುರುಗಳು ಅಲ್ಲಿದ್ದ ಮಾವಿನ ಮರದ ಎಲೆಗಳನ್ನು ತೋರಿಸುತ್ತಾ ಎಲೆಗಳು ಪ್ರತ್ಯೇಕ ಆಕಾರ, ಗಾತ್ರದ್ದಾಗಿದ್ದರೂ ಅವುಗಳ ರಸಾಸ್ವಾದನೆಯು ಒಂದೇ ಆಗಿರುತ್ತದೆ ಎಂದು ವಿವರಿಸುತ್ತಾರೆ. ಅಂದು ಸಂಜೆ ಶಿವಗಿರಿಯ ಶಾರದಾ ಮಠದ ಪೂಜೆಯಲ್ಲಿ ಗಾಂಧೀಜಿ ಭಾಗವಹಿಸುತ್ತಾರೆ. ನಾರಾಯಣ ಗುರುಗಳ ‘ ದೈವ ಶತಕಂ’ ಅನ್ನು ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳು ಪಾರಾಯಣ ಮಾಡುವುದನ್ನು ಕಂಡು ಸಂತೋಷಗೊಂಡರು.
ಮರು ದಿನ ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿ ಮತ್ತು ಗುರುಗಳು ಒಟ್ಟಾಗಿ ಭಾಗವಹಿಸಿದ್ದರು. ಗಾಂಧೀಜಿ ಚರಕದಿಂದ ನೂಲುವುದನ್ನು ಜನರಿಗೆ ತೋರಿಸಿದರು. ನಾರಾಯಣ ಗುರುಗಳು ಗಾಂಧೀಜಿಯ ವಿಚಾರಗಳನ್ನು ಅನುಷ್ಠಾನ ಮಾಡುವಂತೆ ಜನರಿಗೆ ಸಲಹೆ ನೀಡಿದರು. ಗುರುಗಳ ಶಿಷ್ಯರನೇಕರು ಸಣ್ಣ ಕೈಗಾರಿಕೆಗಳನ್ನೆಲ್ಲ ಮಾಡಿದ್ದಾರೆ. ಚಂದ್ರಿಕಾ ಸೋಪು ಅಂತಾದ್ದರಲ್ಲಿ ಒಂದು. ನಂತರ ನಾರಾಯಣ ಗುರುಗಳು ಸಮಾಧಿಸ್ಥರಾದ ಮೇಲೆ ಎರಡು ಬಾರಿ ಗಾಂಧೀಜಿ ಶಿವಗಿರಿಗೆ ಹೋಗಿದ್ದರು.
ಸಮಾಜ ಸುಧಾರಣೆಯ ವಿಚಾರದಲ್ಲಿ ಗಾಂಧೀಜಿ ಮತ್ತು ನಾರಾಯಣ ಗುರುಗಳಿಬ್ಬರ ನಡುವೆ ಬಹಳ ಸಮನ್ವಯತೆ ಇದೆ. ಇಬ್ಬರೂ ಅಂತರ್ಜಾತೀಯ ವಿವಾಹದ ಪರವಾಗಿದ್ದವರು. ಆದರೆ ಅಂತರ್ಜಾತೀಯ ವಿವಾಹ ಅನಿವಾರ್ಯ ಎಂದು ಇಬ್ಬರೂ ಹೇಳಲಿಲ್ಲ. ಸಿ. ಕೆ. ಕರುಣಾಕರನ್ ಎಂಬವರು ಜರ್ಮನಿಗೆ ಹೋಗಿದ್ದಾಗ ಅವರನ್ನು ಇಷ್ಟಪಟ್ಟು ಬಂದ ಕ್ರೈಸ್ತ ಹುಡುಗಿಯನ್ನು ಕ್ರೈಸ್ತ ಸಂಪ್ರದಾಯದ ಪ್ರಕಾರವೆ ನಾರಾಯಣ ಗುರುಗಳು ಕರುಣಾಕರನ್ ಗೆ ಮದುವೆ ಮಾಡಿಸಿದ್ದರು.
ಗುರುಗಳ ಶಿಷ್ಯ ಅಯ್ಯಪ್ಪನ್ ಎಂಬವರು ‘ಸಹೋದರ ಸಂಘ’ ವನ್ನು ಸ್ಥಾಪಿಸಿದ್ದರು. ಅವರು ಒಮ್ಮೆ ಪುಲಯ್ಯರು ಮತ್ತು ಈಳವರ ನಡುವೆ ಸಹಪಂಕ್ತಿ ಭೋಜನವನ್ನು ಏರ್ಪಡಿಸಿದ್ದರು. ಈಳವರು ಎಂದರೆ ನಮ್ಮ ಇಲ್ಲಿನ ಬಿಲ್ಲವರು. ಪುಲಯ್ಯರು ಎಂದರೆ ಪರಿಶಿಷ್ಠ ಜಾತಿಯವರು. ಈ ಸಹಪಂಕ್ತಿ ಭೋಜನಕ್ಕೆ ಈಳವರಿಂದ ಬಹಳ ವಿರೋಧ ಬಂತು. ಅಯ್ಯಪ್ಪ ಅವರಿಗೆ ಹೊಡೆದೂ ಆಯಿತು. ಕೊನೆಗೆ ಅಯ್ಯಪ್ಪ ನಾರಾಯಣ ಗುರುಗಳ ವಿರೋಧಿ ಎಂದು ಪ್ರಚಾರವನ್ನು ಮಾಡಲಾಯಿತು. ತಾನು ಗುರು ವಿರೋಧಿ ಎಂದುದನ್ನು ಸಹಿಸಲಾಗದೆ ಅಯ್ಯಪ್ಪ ನಾರಾಯಣ ಗುರುಗಳ ಬಳಿಗೆ ಹೋದರು. ಆಗ ನಾರಾಯಣ ಗುರುಗಳು,”ಅಯ್ಯಪ್ಪ ಮಾಡಿದ್ದರಲ್ಲಿ ತಪ್ಪೇನಿಲ್ಲ. ಪರಸ್ಪರ ಭಿನ್ನ ಜಾತಿಯವರು ಒಟ್ಟಿಗೆ ಊಟ ಮಾಡುವುದು, ಪರಸ್ಪರ ಮದುವೆಯಾಗುವುದು ತಪ್ಪಲ್ಲ” ಎಂದು ಪತ್ರ ಬರೆದು ಕೊಟ್ಟರು.
ಗಾಂಧೀಜಿಯವರು ನಾರಾಯಣ ಗುರುಗಳ ಆಶ್ರಮದಲ್ಲಿ ಪರಿಶಿಷ್ಠ ಜಾತಿಯವರು ಅಡುಗೆ ಮಾಡುವುದನ್ನು ನೋಡಿದರು. ನಂತರ ಅವರೂ ಸಾಬರ್ಮತಿ ಆಶ್ರಮದಲ್ಲಿ ಪರಿಶಿಷ್ಠ ಜಾತಿಯವರನ್ನು ಅಡುಗೆಗೆ ನೇಮಿಸಿದರು. ನಾರಾಯಣ ಗುರುಗಳು ಮತ್ತು ಗಾಂಧೀಜಿ ಇಬ್ಬರೂ ಬಾಲ್ಯ ವಿವಾಹಕ್ಕೆ ವಿರೋಧವೆ ಇದ್ದವರಾಗಿದ್ದರು. ಇಬ್ಬರೂ ಮದ್ಯ ಮುಕ್ತ ಸಮಾಜದ ಕನಸು ಕಂಡವರು. ಹೆಂಡ ಇಳಿಸುವುದು, ಹೆಂಡ ಕುಡಿಯುವುದು ಎರಡನ್ನೂ ನಾರಾಯಣ ಗುರುಗಳು ವಿರೋಧಿಸಿದ್ದರು. ಗಾಂಧೀಜಿ ಮದ್ಯ ಪಾನ ವಿರೋಧಿ ಚಳವಳಿಯನ್ನು ಸಂಘಟಿಸಿದವರು.
ನಾರಾಯಣ ಗುರುಗಳು ಮತ್ತು ಗಾಂಧೀಜಿ ಇಬ್ಬರೂ ಜೀವ ದಯೆಯ ಪ್ರತಿಪಾದಕರು. ಇಬ್ಬರೂ ಸಸ್ಯಾಹಾರದ ಪ್ರತಿಪಾದಕರಾಗಿದ್ದರು. ನಾರಾಯಣ ಗುರುಗಳು ಮಲೆಯಾಳಂನಲ್ಲಿ ಬರೆದ ಒಂದು ಕವಿತೆಯ ಕನ್ನಡ ಅನುವಾದವನ್ನು ಬಾಬು ಶಿವ ಪೂಜಾರಿಯವರು ತಮ್ಮ ‘ ಶ್ರೀ ನಾರಾಯಣ ಗುರು ವಿಜಯ ದರ್ಶನ’ ದಲ್ಲಿ ಹೀಗೆ ಕೊಟ್ಟಿದ್ದಾರೆ:
” ಕೊಲ್ಲದಿರುವ ಪ್ರತಿಜ್ಞೆ ಒಳ್ಳೆಯದು.
ಮಾಂಸ ತಿನ್ನದಿರುವ ಪ್ರತಿಜ್ಞೆ ಮತ್ತಷ್ಟು ಒಳ್ಳೆಯದು.
ಓ ಜನರೇ ಹೇಳಿರಿ, ಇದಲ್ಲವೆ ಎಲ್ಲ ಧರ್ಮಗಳ ಮೂಲ ತತ್ವ?”
ಸಸ್ಯಾಹಾರದ ಪ್ರತಿಪಾದನೆಯ ಬಗ್ಗೆ ಸಸ್ಯಗಳಿಗೆ ಜೀವವಿಲ್ಲವೆ? ಎಂಬ ಒಂದು ಪ್ರಶ್ನೆ ಬರುತ್ತದೆ. ಇದಕ್ಕೆ ಜೈನ ತತ್ವಜ್ಞಾನದಲ್ಲಿ ಸತಾರ್ಕಿಕ ಉತ್ತರವೂ ಇದೆ. ಸಸ್ಯಗಳಿಗೆ ಜೀವವಿದೆ. ಆದರೆ ಸಸ್ಯಗಳಿಗೆ ಕತ್ತರಿಸಿದ ಭಾಗದಿಂದಲೆ ಚಿಗುರುವ ಶಕ್ತಿ ಇದೆ. ಆದ್ದರಿಂದ ಸಸ್ಯಾಹಾರವು ಸಸ್ಯದ ಕೊಲೆ ಆಗುವುದಿಲ್ಲ” ಎನ್ನುವುದು ಅಲ್ಲಿರುವ ಉತ್ತರವಾಗಿದೆ.
ನಾರಾಯಣ ಗುರುಗಳ ಅಭಿವೃದ್ಧಿಯ ಪರಿಕಲ್ಪನೆಯು ಧಾರ್ಮಿಕ ಕ್ಷೇತ್ರವನ್ನು ಕೇಂದ್ರವಾಗಿರಿಸಿಕೊಂಡು ಅದರ ಸುತ್ತ ಶಿಕ್ಷಣ, ಶಿಕ್ಷಣದ ಮುಖಾಂತರ ಆರ್ಥಿಕ ಘಟಕಗಳ ರಚನೆಯ ಮಾದರಿಯದ್ದಾಗಿದೆ. ಅರವಿಪ್ಪುರಂ ಶಿವಾಲಯದ ಸಮೀಪ ನಾರಾಯಣ ಗುರುಗಳು ಕೈಮಗ್ಗದ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದರು. ವಸತಿ ಶಾಲೆಗಳನ್ನು ನಡೆಸುತ್ತಿದ್ದರು. ವಸತಿ ಶಾಲೆಗಳಲ್ಲಿ ಶಿಕ್ಚಣ ದೊರೆಯುವುದರೊಂದಿಗೆ ಜಾತೀಯ ತಾರತಮ್ಯಗಳ ನಿವಾರಣೆಯಾಗುತ್ತದೆ ಎನ್ನುವುದು ಗುರುಗಳ ಕಲ್ಪನೆಯಾಗಿತ್ತು. ಸಂಸ್ಕೃತ, ಮೆಲೆಯಾಳಂ, ಇಂಗ್ಲಿಷ್- ಈ ತ್ರಿಭಾಷಾ ಸೂತ್ರವನ್ನು ಗುರುಗಳು ಮಂಡಿಸಿದ್ದರು. ಎಳೆಯ ಮಕ್ಕಳ ಬೆಳವಣಿಗೆಯನ್ನು ಹೇಗೆ ಮಾಡಬೇಕು, ಅವರ ಕಲಿಕೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆಯೆಲ್ಲ ಗುರುಗಳು ತಮ್ಮ ಶಿಕ್ಷಣ ಚಿಂತನೆಯನ್ನು ಬಿಟ್ಟು ಹೋಗಿದ್ದಾರೆ.
ಮಹಾತ್ಮಾ ಗಾಂಧಿಯವರು ಮೂಲ ಶಿಕ್ಷಣ ಪರಿಕಲ್ಪನೆಯ ಪ್ರತಿಪಾದಕರಾಗಿದ್ದು ಗಾಂಧೀಜಿಯವರ ಪರಿಕಲ್ಪನೆಯಲ್ಲಿ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯು ಧಾರ್ಮಿಕ ಕ್ಷೇತ್ರವನ್ನು ಕೇಂದ್ರೀಕರಿಸಿ ವಿಕಾಸಗೊಳ್ಳುವ ಮಾದರಿಯದ್ದಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ನಾರಾಯಣ ಗುರುಗಳ ಶೈಕ್ಷಣಿಕ ಚಿಂತನೆಗಳೊಂದಿಗೆ ಸಮನ್ವಯತೆ ಇದೆ. ಕೈಕಸುಬುಗಾರಿಕೆ ಇಬ್ಬರಿಗೂ ಮಹತ್ವದ್ದೇ ಆಗಿದೆ.
ಒಟ್ಟು ಚಿಂತನಾ ಕ್ರಮದ ಸ್ವರೂಪದ ದೃಷ್ಟಿಯಿಂದ ನಾರಾಯಣ ಗುರುಗಳು ಮತ್ತು ಗಾಂಧೀಜಿಯ ನಡುವಿನ ಸಮನ್ವಯತೆ ಇಂದು ಬಹಳ ಅಗತ್ಯದ್ದಾಗಿದೆ. ನಾರಾಯಣ ಗುರುಗಳು ಮೊದಲ ಶಿವಾಲಯವನ್ನು ಸ್ಥಾಪಿಸುವಾಗ ನಂಬೂದರಿ ಬ್ರಾಹ್ಮಣರು ಆಕ್ಷೇಪಿಸಿದ್ದರು. ಹಾಗೆಂದು ಅವರು ದೇವಾಲಯವನ್ನು ಸ್ಥಾಪಿಸದೆ ಬಿಡಲಿಲ್ಲ. ಆದರೆ ಸರ್ವ ಹಿತದ ಗುರುಗಳ ಚಿಂತನೆಯಿಂದ ಪ್ರೇರಣೆಗೊಂಡು ನಂಬೂದರಿ ಬ್ರಾಹ್ಮಣರು ಸಂಘಟನೆ ಮಾಡಿ ಸಮುದಾಯ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಮಾಡಿದರು, ನಾರಾಯಣ ಗುರುಗಳ ಮೆರವಣಿಗೆ ಮಾಡಿದರು, ಅವರ ಕೈಯಲ್ಲೆ ತಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿಸಿದರು.
ಗಾಂಧೀಜಿಯ ಯಾವುದೆ ಅಸ್ತಿತ್ವವನ್ನು ತಾನು ಸಂಪೂರ್ಣ ನಾಶಪಡಿಸುವುದಾಗಿ ಘೋಷಿಸಿದ್ದ ವಿನ್ಸ್ಟನ್ ಚರ್ಚಿಲ್ ಗಾಂಧಿ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದ ಹಾಗೆ ಅಸಹನೆಯಿಂದ ತನ್ನ ಕೈಲಿದ್ದ ವಿಸ್ಕಿ ಗ್ಲಾಸ್ ಅನ್ನು ಎಸೆದು,” ನಾವು 28 ವರ್ಷ ಉಳಿಸಿಕೊಂಡ ಗಾಂಧಿಯನ್ನು ಭಾರತೀಯರಿಗೆ 28 ತಿಂಗಳೂ ಉಳಿಸಿಕೊಳ್ಳಲು ಆಗಲಿಲ್ಲ” ಎಂದು ಕನಲಿದರು. ಇವತ್ತು ಬ್ರಿಟನ್ನಿನ ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿ ಚರ್ಚಿಲ್ ಮತ್ತು ಗಾಂಧೀಜಿಯ ಪ್ರತಿಮೆಗಳು ಅಕ್ಕಪಕ್ಕದಲ್ಲೆ ಇವೆ. ವಿರೋಧಿಸಿದವರನ್ನೂ ಗೆಲ್ಲುವ ಈ ಶಕ್ತಿ ಗಾಂಧೀಜಿ ಮತ್ತು ನಾರಾಯಣ ಗುರು ಇಬ್ಬರಲ್ಲೂ ಇವೆ. ಕೆಳ ವರ್ಗದಿಂದ ಬಂದು ಮೇಲು ವರ್ಗದ ವರೆಗೂ ತಲುಪಿದವರು ವಿರಳ. ನಾರಾಯಣ ಗುರುಗಳು ಕೆಳ ವರ್ಗದಿಂದ ಬಂದು ಮೇಲು ವರ್ಗದ ವರೆಗೂ ತಲುಪಿದವರು. ಗಾಂಧೀಜಿ ಮೇಲು ವರ್ಗದಿಂದ ಬಂದು ಕೆಳ ವರ್ಗದ ವರೆಗೂ ತಲುಪಿದವರು. ಇವರಿಬ್ಬರೂ ಸಂಧಿಸುವ ಬಿಂದು ಪ್ರೇಮ ತತ್ವ. ನಾರಾಯಣ ಗುರುಗಳು ಮದುವೆಯಾಗಿ ಹೆಂಡತಿಗೆ ವೀಳ್ಯದೆಲೆ ತೋಟ ಮಾಡಿ ಕೊಟ್ಟು ಸಂಸಾರ ತ್ಯಜಿಸಿದವರು. ಗಾಂಧೀಜಿ ಮಕ್ಕಳಾದ ಮೇಲೆ ಹೆಂಡತಿಯೊಂದಿಗಿದ್ದೇ ಬ್ರಹ್ಮಚರ್ಯಕ್ಕೆ ನಿಷ್ಠರಾಗಿ ವಿಶ್ವ ಸಂಸಾರಿಯಾದವರು. “ನನಗೆ ನಾಲ್ಕು ಮಕ್ಕಳು. ನನ್ನ ಗಂಡನಿಗೆ ನಲವತ್ತ ನಾಲ್ಕು ಕೋಟಿ” ಎಂದು ಕಸ್ತೂರ್ಬಾ ಗಾಂಧಿ ಹೇಳಿದ್ದಾರೆ ಕೂಡ. ಈ ತ್ಯಜಿಸುವಿಕೆಯು ಪ್ರೇಮ ತತ್ವವನ್ನೆ ಆಧರಿಸಿವೆ. ಆದ್ದರಿಂದಲೇ ವರ್ತಮಾನದ ಭಾರತಕ್ಕೆ ಇವರಿಬ್ಬರ ಸಮನ್ವಯತೆ ಬಲು ಮಹತ್ವದ್ದು. ಅದರಲ್ಲೂ ತುಳುನಾಡಿಗೆ ತುರ್ತು ಅಗತ್ಯದ್ದಾಗಿದೆ ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಾಹಿನಿ ಮುಡುಬಿದಿರೆ ಘಟಕದ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ .ಪಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರು ಮತ್ತು ಗಾಂಧಿ ವಿಚಾರ ವೇದಿಕೆಯ ಮಾರ್ಗದರ್ಶಿಗಳಾದ ಶ್ರೀ ಬಾಹುಬಲಿ ಪ್ರಸಾದ್, ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ , ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ ಇದರ ಅಧ್ಯಕ್ಷರಾದ , ನಾರಾಯಣಗುರು ತತ್ವ ಪ್ರಚಾರ, ಯುವವಾಹಿನಿ (ರಿ.), ಕೇಂದ್ರ ಸಮಿತಿ, ಮಂಗಳೂರು ಇದರ ನಿರ್ದೇಶಕರಾದ ಶ್ರೀ ಜಗದೀಶ್ಚಂದ್ರ ಡಿ.ಕೆ.,ನಾರಾಯಣಗುರು ತತ್ವ ಪ್ರಚಾರ ಯುವವಾಹಿನಿ (ರಿ.), ಮೂಡುಬಿದಿರೆ ಘಟಕದ ನಿರ್ದೇಶಕರಾದ ಕು. ಸೌಮ್ಯ ಉಪಸ್ಥಿತರಿದ್ದರು.