ಸೊ೦ಟಕ್ಕೆ ಸೆರಗು ಸಿಕ್ಕಿಸಿಕೊಂಡು, ಅತ್ತಿತ್ತ ಗಡಿಬಿಡಿ ಮಾಡಿಕೊಂಡು ಓಡಾಡುತ್ತಿದ್ದ ಆಕೆ ಇತ್ತ ಮನೆಯವರ ಮಾತಿಗೆ ಹೂ ಗುಡುತ್ತಾ, ಮಕ್ಕಳಿಗೆ ಹಾಗೆ ಮಾಡು,ಹೀಗೆ ಮಾಡು ಎಂದು ಮಾರ್ಗಸೂಚಿ ನೀಡುತ್ತಾ ,ಅಡುಗೆ ಕೋಣೆಯಲ್ಲೇ ಇದ್ದು ಮನೆಯವರ ಬೇಕು ಬೇಡಗಳ ದಿನಚರಿಯನ್ನ ಅವಳೇ ಸರಿದೂಗಿಸಿಕೊಂಡು ತನ್ನ ಕೆಲಸ ಮುಂದುವರೆಸುತ್ತಿದ್ದಳು.
“ನೀರಿನಲ್ಲಿರೋ ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ,ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ”ಎನ್ನೋ ಮಾತಿನ ಅರ್ಥ ತಿಳಿದದ್ದು ಸಂಸಾರಸ್ಥರಾದಾಗಲೇ ..!?
ಅವಳೆಂದರೆ,ಮಾಟಗಾತಿಯೋ ! ಜಾದುಗಾರ್ತಿಯೋ ನಾ ಕಾಣೆ, ಇನ್ನೂ ನಾ ಕಂಡುಕೊಂಡಂತೆ ಅವಳಿಗೆ
‘ಅಸಾಧ್ಯ’ ಎನ್ನುವ ವಿಷಯವೇ ಇದ್ದಿರಲಿಲ್ಲ.
ಸ್ನೇಹಿತೆಯಿಂದ,ಪ್ರೇಯಸಿಯಾಗಿ,ಮಡದಿಯಾಗಿ , ಇನ್ನೂ ಆಕೆ ತಾಯಿಯಾಗಿ ಬದಲಾದ ರೂಪಾಂತರ ಇಗಲೂ ವಿಚಿತ್ರವೇ! ಹೆಣ್ಣನ್ನು ಮಾಯೆಗೆ ಹೋಲಿಸಿದ ಕಾರಣ ಇದೆ ಎನೋ..ಆಕೆ ಇಗಲೂ ಅದ್ಭುತ ಸೃಷ್ಟಿಯೇ ಅನ್ನಿಸುವುದುಂಟು. ಪ್ರತಿಯೊಂದು ವಿಷಯಕ್ಕೂ ಆಕೆ ಮಾಡುತ್ತಿದ್ದ ಹಟ,ತಾನು ಹೇಳಿದ್ದೆ ನೆಡೆಯಬೇಕೆಂದು ಪಟ್ಟು ಹಿಡಿದು ಕೂರುವ ರೀತಿ,ಇನ್ನೂ ಎಲ್ಲಾ ಕೆಲಸಗಳಿಗೂ ಸೋಮಾರಿಯಾಗಿದ್ದ ಆಕೆಯನ್ನು ಮದುವೆಯಾದ ನಂತರ ಅವಳನ್ನು ನಾ ಕಂಡ ರೀತಿನೇ ವಿರುದ್ದವಾಗಿತ್ತು. ಜಗತ್ತಿನ ಎಲ್ಲಾ ಜವಾಬ್ದಾರಿಗಳು ತನ್ನ ತಲೆಯ ಮೇಲೆ ಇರುವಂತೆ ನೆಡೆದುಕೊಳ್ಳುತ್ತಿದ್ದಳು.
ಅವಳ ಪ್ರಪಂಚವೇ ಬದಲಾಗಿತ್ತು.ಹೊಸ ಜೀವನವನ್ನು ಬಹುಬೇಗನೆ ಅವಳ ಪ್ರಪಂಚವನ್ನಾಗಿಯೇ ಮಾಡಿಕೊಂಡುಬಿಟ್ಟಿದ್ದಳು.ಮನೆಯವರನ್ನು ಹೊಂದಿಕೊಳ್ಳೊ ಆಸಕ್ತಿಯಲ್ಲಿ ಅವಳೇ ನಮ್ಮೆಲ್ಲರ ದಿನಚರಿಯಲ್ಲಿ ತುಂಬಿಹೋಗಿದ್ದಳು.ಬೇಕು ಎನ್ನುವ ಮೊದಲೇ ತಯಾರಿ ಮಾಡಿಬಿಡುವಳು.ಇಗೆಲ್ಲಾ ಆಕೆ ಚೂರು ಇಲ್ಲವಾದರೂ ಕೈ ಕಾಲೇ ಆಡುವುದಿಲ್ಲ. ನನ್ನ ತುಸು ಕೋಪಕೆ ತಂಪಾಗಿ ಬಿಡುವಳು.ನನ್ನ ಮಂಕಾದ ಮೌನಕೆ ಕೆಂಪಾಗುವಳು ಅವಳೇ..
ಪ್ರತಿಯೊಂದು ಹೆಣ್ಣು ತಾಯಿಯಾದಾಗ,ಆಕೆ ಜಗತ್ತಿನ ಪ್ರತಿ ಜೀವಿಗೂ ತಾಯಿಯಾಗುತ್ತಾಳಂತೆ!.
ಇನ್ನೂ ಆಕೆಯಂತೂ ನೀರ್ಜೀವ ವಸ್ತುವಿಗೂ ಜೀವ ಇರುವಂತೆ ಕಾಳಜಿ ವಹಿಸುತ್ತಿದ್ದಳು.
ಹಟಮಾರಿ ಹೆಣ್ಣನ್ನು ಶಾಂತ ಸ್ವರೂಪಿಯಾಗಿ ನೋಡಿದ್ದೆ.ಈ ಎಲ್ಲಾ ಬದಲಾವಣೆಗಳು ಅದ್ಭುತವೇ ಆಗಿತ್ತು. ಒಂದೊಂದು ಕಡೆ,ಇನ್ನೊಂದರಂತೆ ಓಡುತಿರೋ ಚಂಚಲ ಮನಸು ಅವಳದು.ಅದೇಷ್ಟೋ ಬಾರಿ ಆಕೆ ಸ್ಥಿಮಿತತೆ ಕಳೆದುಕೊಂಡಿದ್ದರೂ ಇನ್ನೊಬ್ಬರಿಗೆ ತನ್ನ ಮನಸ್ಥಿತಿ ತಿಳಿಯದಂತೆ ಅಲ್ಲಲ್ಲಿ ಸರಿದೂಗಿಸಿಕೊಂಡು ಮುಂದುವರೆಯುವಳು.
ಇಗಲೂ “ಅವಳ” ನ್ನು ವರ್ಣಿಸಲು ಹೋದರೆ ಕವಿಯಾಗುವೆನೆಂಬ ಭಯ…
यत्र नार्यस्तु पूज्यन्ते रमन्ते तत्र देवता:।
यत्रैतास्तु न पूज्यन्ते सर्वास्तत्राफला: क्रिया:।
–ಎಲ್ಲಿ ನಾರಿಯನ್ನು ಪೂಜಿಸುತ್ತಾರೆ/ ಗೌರವಿಸುತ್ತಾರೆ, ಅಲ್ಲಿ ದೇವತೆಗಳು ನೆಲಸುತ್ತಾರೆ.
ಲೇಖನ -ಅರ್ಚನಾ.ಆರ್
ಕುಂದಾಪುರ.