ರಾಷ್ಟ್ರೀಯ ಮತದಾರರ ದಿನ (NVD-National Voters Day) : ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಅದರಲ್ಲೂ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರ ಭಾರತ. ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ತರವಾಗಿದೆ. ಈ ವ್ಯವಸ್ಥೆಯಲ್ಲಿ ಮತದಾರರು ಪಡೆದಿರುವ ಪವಿತ್ರ ಹಕ್ಕಾದ ಮತದಾನದ ಹಕ್ಕು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ನಮ್ಮ ಭಾರತೀಯ ಸಂವಿಧಾನವು ಜನತೆಗೆ ನೀಡಿರುವ ಒಂದು ಬಲವಾದ ಅಸ್ತ್ರವಾಗಿದೆ. ಆ ಹಿನ್ನೆಲೆಯಲ್ಲಿಯೇ ಪ್ರಸಿದ್ದ ರಾಜಕೀಯ ಚಿಂತಕ ರೂಸೋ ಜನತಾ ವಾಣಿಯೇ ದೈವವಾಣಿ (voice of the people is voice of the God) ಎಂದು ಹೇಳಿದ್ದು, ಅಬ್ರಹಾಂ ಲಿಂಕನ್ರವರು ಮತಪತ್ರವು ಬಂದೂಕಿನ ಬುಲೆಟ್ಟಿಗಿಂತ ಹೆಚ್ಚು ಶಕ್ತಿಶಾಲಿಯಾದುದು”(Ballot is mightier than bullets) ಎಂದು ಹೇಳಿರುವುದು. ಪ್ರಜೆಗಳಿಗೆ ಸರ್ಕಾರವನ್ನು ಸ್ಥಾಪಿಸುವ ಹಾಗೂ ಅಧಿಕಾರದಿಂದ ಕೆಳಗಿಳಿಸುವ ಶಕ್ತಿ ಮತದಾರರಿಗಿದೆ. ಹಾಗಾಗಿ ಮತದಾರರ ಪ್ರಾಮುಖ್ಯತೆ ಹಾಗೂ ಅವರ ಮೇಲಿರುವ ಜವಾಬ್ದಾರಿಯನ್ನು ಕುರಿತು ಅವರಲ್ಲಿ ಜಾಗೃತಿ ಮೂಡಿಸಿ, ಪ್ರಾಮಾಣಿಕ ಮತದಾನದಿಂದ ಮಾತ್ರ ದೇಶದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂಬ ಅರಿವನ್ನು ಮೂಡಿಸುವುದಕ್ಕಾಗಿ ಪ್ರತೀ ವರ್ಷಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ವನ್ನಾಗಿ ಆಚರಿಸಲಾಗುತ್ತದೆ.
ಯಾಕ ಈ ದಿನ ಆಚರಣೆ?
1950 ಜನವರಿ 25ರಂದು ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯುತ ಸ್ವಾಯತ್ತ ಸಂವಿಧಾನಿಕ ಸಂಸ್ಥೆಯಾದ ಭಾರತ ಚುನಾವಣಾ ಆಯೋಗವು(ECI) ಸಂವಿಧಾನದ 324ನೇ ವಿಧಿ ಅನ್ವಯ ಸ್ಥಾಪನೆಯಾಯಿತು. ಈ ಸ್ಥಾಪನೆಯ ಸವಿನೆನಪಿಗಾಗಿ 2011 ರಲ್ಲಿ ಡಾ. ಮನಮೋಹನ್ಸಿಂಗ್ ನಾಯಕತ್ವದ ಕಾಂಗ್ರೆಸ್ ಸರ್ಕಾರದ ನಿರ್ಧಾರದಂತೆ ಜನವರಿ 25 ನ್ನು ರಾಷ್ಟ್ರೀಯ ಮತದಾರರ ದಿನ (NVD-National Voters Day) ವನ್ನಾಗಿ ಘೋಷಿಸಲಾಯಿತು. ಹಾಗಾಗಿ 2011 ರಲ್ಲಿ ಈ ಆಚರಣೆ ವಿದ್ಯುಕ್ತವಾಗಿ ಆರಂಭವಾಗಿ, ಈ ವರ್ಷ 11ನೇ ಆಚರಣೆಯನ್ನು ಗಣರಾಜ್ಯೋತ್ಸವದ ಹಿಂದಿನ ದಿನದಂದು ಆಚರಿಸುತ್ತಿದ್ದೇವೆ.
ಈ ಆಚರಣೆಯ ಉದ್ದೇಶ:-
ಮತದಾನದ ಪಾವಿತ್ರತೆ ಮತ್ತು ಕಡ್ಡಾಯ ಮತದಾನದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವುದರ ಮೂಲಕ 18 ವರ್ಷ ವಯಸ್ಸನ್ನು ತಲುಪಿದ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಕೇಳಿ ಪಡೆಯುವಂತೆ ಹಾಗೂ ಆ ಹಕ್ಕನ್ನು ಸ್ವಯಂಪ್ರೇರಿತರಾಗಿ ಚಲಾಯಿಸುವಂತೆ ಮಾಡಿ ಮತದಾರರ ಸಂಖ್ಯೆ ಮತ್ತು ಮತದಾನದ ಶೇಕಡವಾರು ಪ್ರಮಾಣವನ್ನು ಹೆಚ್ಚಿಸುವುದೇ ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಭಾವಿ ಮತದಾರರು, ನವ ಮತದಾರರು ಮತ್ತು ನೋಂದಣಿ ರಹಿತ ಯುವ ಮತದಾರರನ್ನು ಪ್ರಮುಖ ಗುರಿಯನ್ನಾಗಿಸಿಕೊಂಡು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ ಮತ್ತು ಮತಗಟ್ಟೆಗಳಲ್ಲಿ ಮತದಾರರ ಸಾಕ್ಷರತಾ ಸಂಘ’ (ELC-Electroal Literacy Club), ಚುನಾವಣಾ ಜಾಗೃತಿ ಸಂಘ (CJC-Chunavana Jagruthi Club), ಹಾಗೂ ‘ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ’ (SVEEP – Systematic Voters Education and Electoral Participation) ಮುಂತಾದ ವೇದಿಕೆಗಳನ್ನು ಸ್ಥಾಪಿಸಿ ಇವುಗಳ ಮೂಲಕ ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ (ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ), ಪೋಸ್ಟರ್ ಮತ್ತು ಕೊಲಾಜ್ ಮೇಕಿಂಗ್ ಸ್ಪರ್ಧೆ ಮುಂತಾದ ಆಕರ್ಷಕವಾಗಿರುವ ಚಟುವಟಿಕೆಗಳ ಮೂಲಕ ಚುನಾವಣಾ ಪ್ರಕ್ರಿಯೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಮತದಾರರು ಯಾರು?
18 ವರ್ಷ ಪೂರೈಸಿ ಮತದಾನದ ಹಕ್ಕನ್ನು ಪಡೆದಿರುವ ಜನಸಮುದಾಯವೇ “ಮತದಾರ ವರ್ಗ’. ದೇಶದ ಭವಿಷ್ಯ ಅಡಗಿರುವುದು ಈ ಮತದಾರರಲ್ಲಿ. ಅದರಲ್ಲೂಯುವಶಕ್ತಿಯಲ್ಲಿ ಅಡಗಿದೆ. ಹಾಗಾಗಿ ದೇಶ ಕಟ್ಟುವ ಮತ್ತು ಮುಂದಿನ ಪೀಳಿಗೆಗೆ ಕನಸುಗಳನ್ನು ಸಕಾರಗೊಳಿಸುವ ದೂರದೃಷ್ಟಿಯ ಹಿನ್ನೆಲೆಯಿಂದ ಯುವ ಮತದಾರರನ್ನು ರಾಜಕೀಯ ಪ್ರಕ್ರಿಯೆಗೆ ಸೆಳೆಯಲು 1988ರಲ್ಲಿ ಅಂದಿನ ಪ್ರಧಾನ ಮಂತ್ರಿ ದಿ.ರಾಜೀವ್ಗಾಂಧಿರವರು ಸಂವಿಧಾನದ 326ನೇ ವಿಧಿಗೆ 61ನೇ ತಿದ್ದುಪಡಿ ತರುವುದರ ಮೂಲಕ ಮೊದಲಿದ್ದ ಮತದಾನದ ವಯಸ್ಸಾದ 21 ವರ್ಷದಿಂದ 18 ವರ್ಷಕ್ಕೆ ಇಳಿಸಲಾಯಿತು. ಆದರೆ ದುರದೃಷ್ಟವಶಾತ್ ಮತದಾನ ಪ್ರಕ್ರಿಯೆಯಲ್ಲಿ ಈ ಯುವ ಮತದಾರರ ಸಹಭಾಗಿತ್ವವು ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ
ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚಾಗಿ ಮತದಾನವನ್ನು ನಿರ್ಲಕ್ಷಿಸುತ್ತಿರುವುದು ಪ್ರಜಾಪ್ರಭುತ್ವವು ತನ್ನ ನೈಜ ಚೈತನ್ಯವನ್ನು ತೋರಿಸದಂತೆ ತಡೆಯುತ್ತಿದೆ. ಇದು ನಮ್ಮ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ (1951-52) ಹಿಡಿದು ಈಗಾಗಲೇ ಮುಗಿದಿರುವ 17ನೇ ಸಾರ್ವತ್ರಿಕ ಚುನಾವಣೆಯವರೆಗೂ ಸಾಬೀತಾಗಿದೆ. ಮತದಾರರು ಜವಾಬ್ದಾರಿಯುತವಾಗಿ, ವಿವೇಚನೆಯಿಂದ, ಜಾಗೃತಿಯಿಂದ ಪ್ರಾಮಾಣಿಕವಾಗಿ ಮತಚಲಾಯಿಸಿದರೆ, ಆಗ ಉತ್ತಮ ಸರ್ಕಾರದ ರಚನೆಯೊಂದಿಗೆ ಪ್ರಜಾಪ್ರಭುತ್ವದ ಬಲವರ್ಧನೆ ಹಾಗೂ ರಾಷ್ಟ್ರದ ಪ್ರಗತಿ ಸಾಧ್ಯ.
ಘೋಷಣಾವಾಕ್ಕ;-
ರಾಷ್ಟ್ರೀಯ ಮತದಾರರ ದಿನವನ್ನು ಪ್ರತೀ ವರ್ಷವೂ ಒಂದು ಥೀಮ್ನೊಂದಗೆ (ವಿಷಯದೊಂದಿಗೆ) ಆಚರಿಸಲಾಗುತ್ತದೆ. ಹಾಗಾಗಿ 2015ರಲ್ಲಿ “ಸುಲಭ ನೋಂದಣಿ, ಸುಲಭ ತಿದ್ದುಪಡಿ” (Easy Registration, Easy Correction), 2016ರಲ್ಲಿ ಅಂತರ್ಗತ ಮತ್ತು ಗುಣಾತ್ಮಕ ಭಾಗವಹಿಸುವಿಕೆ”(Inclusive and Qualitative Participation),2017ರಲ್ಲಿ ‘ಯುವ ಮತ್ತು ಭವಿಷ್ಯದ ಮತದಾರರನ್ನು ಸಶಕ್ತಗೊಳಿಸುವುದು” (Empowering Young and Future Voters), 2018ರಲ್ಲಿ “ಮೌಲ್ಯಮಾಪನ ಚುನಾವಣೆಗಳು (Accessable Elections)2019ರಲ್ಲಿ ಯಾವುದೇ ಮತದಾರ ಮತದಾನದಿಂದ ಹೊರಗುಳಿಯ ಬಾರದು (No Voter to be Left Behind) 2020ರಲ್ಲಿ “ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ” (Electoral Literacy For Stronger Democracy) 2021ರಲ್ಲಿ ನಮ್ಮ ಮತದಾರರನ್ನು ಅಧಿಕಾರ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿ ನೀಡುವಂತೆ ಮಾಡುವುದು’ (Making Our Voters Empowered, Vigilant, Safe and Informed) ಈ ರೀತಿಯ ಘೋಷಣಾ ವಾಕ್ಯಗಳನ್ನು ನೀಡುವುದರ ಮೂಲಕ ಮತದಾರರಲ್ಲಿ ನವಚೈತನ್ಯವನ್ನು ತುಂಬಲಾಗುವುದು.
ಜಿ.ಆರ್.ಕೇಶವಮೂರ್ತಿ
ಉಪನ್ಯಾಸಕರು