ಮದುವೆ …..
ಇದು ಜನುಮ ಜನುಮಗಳ ಅನುಬಂಧ, ಜೊತೆಗೆ ಎರಡು ಮನೆ- ಮನಸ್ಸುಗಳನ್ನು ಒಗ್ಗೂಡಿಸುವ ಪವಿತ್ರ ಕಾರ್ಯ.ವಿವಾಹವು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಒಂದು ಪ್ರಮುಖ ಘಟ್ಟ . ಎರಡು ಜೀವ-ಮನಸ್ಸುಗಳನ್ನು ಹತ್ತಿರ ತಂದು ಬದುಕಿನ ಕೊನೆತನಕ ಜೊತೆಯಾಗಿ ಬಾಳುವಂತೆ ಹರಸುವಂತಹ ಈ ಜವಾಬ್ದಾರಿಯುತ ಕಾರ್ಯಕ್ಕೆ ಸಮಾಜದಲ್ಲಿ ಪ್ರಮುಖ ಸ್ಥಾನವಿದೆ. ಆದರೆ ಈ ಆಧುನಿಕತೆಯ ಭರಾಟೆಯಲ್ಲಿ ಮದುವೆ ಸಾಂಪ್ರದಾಯಿಕತೆಯಿಂದ ದೂರ ಸಾಗುತ್ತಾ ವಿಭಿನ್ನ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.
ಮದುವೆ ಸಂದರ್ಭದಲ್ಲಿ ಉಳ್ಳವರು ಮಾಡುವ ಖರ್ಚು, ದುಂದುವೆಚ್ಚ, ಆಡಂಬರ ಒಂದುಕಡೆಯಾದರೆ, ಮದುವೆಯಾಗಲು ಆರ್ಥಿಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿರುವವರು ಇನ್ನೊಂದು ಕಡೆ. ಬಡ ಕುಟುಂಬಗಳಲ್ಲಿ ಮದುವೆ ಕಾರ್ಯ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರೋನೊತ್ತರ ದಿನಗಳಲ್ಲಂತೂ ಬಡಕುಟುಂಬಗಳಿಗೆ ವಿವಾಹ ಕಾರ್ಯ ನಡೆಸಲು ತುಂಬಾ ಕಷ್ಟ.
ಈ ಎಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡ ಕರ್ನಾಟಕ ರಾಜ್ಯ ಸರ್ಕಾರ ಸಪ್ತಪದಿ ಎನ್ನುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಆ ಮೂಲಕ ಬಡಕುಟುಂಬಗಳ ಯುವಕ-ಯುವತಿಯರಿಗೆ ಮದುವೆ ಭಾಗ್ಯ ಕಲ್ಪಿಸುತ್ತಿದೆ. ಹಾಗಾದರೆ ರಾಜ್ಯ ಸರಕಾರದ ಸಪ್ತಪದಿ ಯೋಜನೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ತಿಳಿದುಕೊಳ್ಳೋಣ ಬನ್ನಿ.
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವತಿಯಿಂದ ಸಪ್ತಪದಿ ಯೋಜನೆಯ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜನರಿಗೆ ಅನುಕೂಲವಾಗುವಂತೆ ಪ್ರಾರಂಭಿಸಿದ್ದು, ಬಡಜನರ ಮಕ್ಕಳು ಹಣಕಾಸಿನ ಒತ್ತಡಕ್ಕೆ ಸಿಲುಕದೆ ಮದುವೆಯನ್ನು ಮಾಡಿಕೊಳ್ಳಬೇಕು ಎನ್ನುವುದು ಈ ಯೋಜನೆಯ ಉದ್ದೇಶ. ಈ ಯೋಜನೆಯ ಅಡಿಯಲ್ಲಿ ಪ್ರತಿ ದಂಪತಿಗಳಿಗೆ 55 ಸಾವಿರ ರೂಪಾಯಿಯನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದ್ದು ಮದುವೆಯ ಖರ್ಚನ್ನ ಸರ್ಕಾರವೇ ನೋಡಿಕೊಳ್ಳುತ್ತದೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಲು ನೋಂದಣಿ ಮಾಡಿಸಿಕೊಂಡ ವರನಿಗೆ ಪಂಚೆ-ಶಲ್ಯ ಖರೀದಿಗೆ 5000 ರೂಪಾಯಿ ನೀಡಲಾಗುತ್ತದೆ. ಮದುಮಗಳಿಗೆ ಧಾರೆ ಸೀರೆಯೆಯ ಖರ್ಚಿಗೆ ಮತ್ತು ಇತರೆ ಖರ್ಚಿಗೆ 10 ಸಾವಿರ ರೂಪಾಯಿ ಸರ್ಕಾರದಿಂದ ನೀಡಲಾಗುತ್ತದೆ.
ಇದರ ಜೊತೆಗೆ ಚಿನ್ನದ ತಾಳಿ ಖರೀದಿಗೆ 40 ಸಾವಿರ ರೂಪಾಯಿಯನ್ನ ನೀಡಲಾಗುತ್ತದೆ ಮತ್ತು ಈ ಹಣವನ್ನ ಮದುವೆಯ ಮುನ್ನ ದಿನದಂದು ವಧು ವರರ ಖಾತೆಗೆ ಜಮಾವಣೆ ಮಾಡಲಾಗುತ್ತದೆ. ಆಗಮಶಾಸ್ತ್ರದ ಪ್ರಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಕೆಲವು ಆಯ್ದ ದೇವಾಲಯಗಳಲ್ಲಿ ಪ್ರತಿ ತಿಂಗಳು ಎರಡು ದಿನದಂದು ಮದುವೆ ನಿಗದಿಪಡಿಸಲಾಗುತ್ತದೆ. ದೇವಾಲಯಗಳ ಆಡಳಿತ ಮಂಡಳಿ ಮತ್ತು ಜನರಿಗೆ ಒಪ್ಪಿಗೆಯಾಗದಿದ್ದರೆ ಬೇರೆ ಅನುಕೂಲವಾದ ದಿನಾಂಕವನ್ನು ಗೊತ್ತುಪಡಿಸಿ ಮದುವೆ ಕಾರ್ಯ ನೇರವೇರಿಸಲಾಗುತ್ತದೆ. ರಾಜ್ಯ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ಹಲವು ಬಡಕುಟುಂಬಗಳು ಈಗಾಗಲೇ ಈ ಯೋಜನೆಯ ಫಲಾನುಭವಿಗಳಾಗಿ ಕೌಟುಂಬಿಕ ಬದುಕಿನ ಪಯಣದಲ್ಲಿದ್ದಾರೆ .