ಹೋಟೆಲ್ ಕೆಲಸ ಎಂದಾಕ್ಷಣ ಬೇರೆ-ಬೇರೆ ರೀತಿ ಆಲೋಚನೆ ಮಾಡುವ ಜನರಿದ್ದಾರೆ. ಅದೇನೋ ಗೊತ್ತಿಲ್ಲ ಕೆಲವರು ಹೋಟೆಲ್ ಕೆಲಸ ಎಂದರೆ ಸ್ವಲ್ಪ ತಾತ್ಸಾರದಿಂದ ಕಾಣುತ್ತಾರೆ. ಅಷ್ಟೇ ಅಲ್ಲ ಚುಚ್ಚುಮಾತುಗಳನ್ನಾಡಿ ಮನ ನೋಯಿಸುತ್ತಾರೆ. ಹೆಣ್ಣು ಗಂಡಿನ ವಿಚಾರದಲ್ಲೂ ಕಡೆಗಣಿಸುವ ಮನೋಭಾವನೆಯಿಂದ ಕಾಣುತ್ತಾರೆ. ಆದರೆ ಕಡೆಗಣಿಸುವವರಿಗೆ ಅರಿವಿಲ್ಲ ಕೋಟ್ಯಂತರ ಜನರ ಜೀವನ ಇದರಿಂದ ಸಾಗುತ್ತಿದೆಯೆಂದು.
ಹೌದು ಅದೆಷ್ಟೋ ಯುವಕರು ಕೆಲಸ ಹುಡುಕಿಕೊಂಡು ಊರುಗಳಿಂದ ಪಟ್ಟಣಕ್ಕೆ ವಲಸೆ ಬಂದಿರುತ್ತಾರೆ. ಆಗ ಅವರ ಕೈ ಹಿಡಿಯುವುದು ಈ ಹೋಟೆಲ್ಗಳೇ. ಪರವೂರಿನಿಂದ ಬಂದು ಬೇರೆ ಬೇರೆ ಕಡೆಯಲ್ಲಿ ತಂಗಿರುವ ಜನರ ಹೊಟ್ಟೆ ಹಸಿವು ನೀಗಿಸುವುದು ಈ ಹೋಟೆಲ್ಗಳೇ.
ಹಾಗೆ ಇನ್ನೊಂದು ವರ್ಗದ ಜನರಿದ್ದಾರೆ ಹೋಟೆಲ್ ಕೆಲಸ ಎಂದಾಕ್ಷಣ ಅಯ್ಯೋ ಅಲ್ಲೇನಪ್ಪ ಊಟ, ತಿಂಡಿ, ರೂಮು, ಎಲ್ಲ ಕೊಡ್ತಾರೆ, ಹಬ್ಬ ಬಂದಾಗ ಬೋನಸ್ ಬೇರೆ ಕೊಡ್ತಾರೆ, ಕೆಲಸ ಕೂಡ ಸುಲಭ ಇರತ್ತೆ. ನಿಮ್ ಲೈಫೆ ಸೂಪರ್ ಬಿಡಪ್ಪ ಅನ್ನೋ ಜನ.
ರೀ ಸ್ವಾಮಿ ನಿಮ್ಗೇನ್ರಿ ಗೊತ್ತು ಹೋಟೆಲ್ ಹುಡುಗ್ರು ಕಷ್ಟ. ಮನೆಲಿರೋ ಮುದಿ ಜೀವಕ್ಕೊಸ್ಕರ ಚಿಕ್ಕ್ ವಯ್ಸಲ್ಲೇ ಊರಬಿಟ್ಟು ಪರೂರಿಗೆ ದುಡಿಯೋಕ್ ಬಂದು, ಮುದ್ದು ತಂಗಿಯ ಓದಿಗೋಸ್ಕರ ತನ್ನ ಓದಿಗೆ ವಿರಾಮ ಹಾಕಿ, ಹೆಂಡತಿಯನ್ನು ಸಾಕುವ ಸಲುವಾಗಿ ಹಗಲು ಇರುಳೆನ್ನದೇ,ಮಗುವಿನ ಭವಿಷ್ಯಕ್ಕಾಗಿ ಏನೇ ಬಂದ್ರು ಎದುರಿಸಿ,ಅಕ್ಕಂದಿರ ಮದುವೆಗಾಗಿ ಅವಮಾನಗಳನ್ನ ಸಹಿಸಿಕೊಂಡು, ಮನೆ ಕಟ್ಟಿದ ಸಾಲಕ್ಕೋಸ್ಕರ, ಇಟ್ಟ ಚಿನ್ನ ಬಿಡಿಸೊಕೋಸ್ಕರ ಊಟ ನಿದ್ದೆ ಬಿಟ್ಟು ನಮ್ಮಿಂದ ದೊಡ್ಡ ಹುದ್ದೆಯಲ್ಲಿ ಇರೋರ್ ಹತ್ರ ತಪ್ ಮಾಡ್ದೇ ಇದ್ರು ಎರಡ್ ಮಾತ್ ಕೇಳಿ ಉಗಿಸ್ಕೊಂಡು ಏನೂ ಬೇಡ ಯಾರು ಬೇಡ, ಈ ಕೆಲ್ಸಾನು ಬೇಡ ಅಂತ ಮನ್ಸಲ್ಲಿ ಅನ್ಕೊಂಡು ಇನ್ನೇನು ಅವರು ಮಾಡುವ ಅವಮಾನಕ್ಕೆ ಪ್ರತ್ಯುತ್ತರ ನೀಡಬೇಕು ಎನ್ನುವ ಹೊತ್ತಿಗೆ ನಮ್ಮ ಪರಿಸ್ಥಿತಿ ಮನೆಯ ಪರಿಸ್ಥಿತಿ ನೆನೆದು ಅವರ ನಿಂದನೆ ಮಾತಿಗೆಲ್ಲ ತಲೆ ಅಡಿಸಿಕೊಂಡು ಇನ್ನೂ ಒಂದಷ್ಟು ವರ್ಷ ಅಲ್ಲೇ ದುಡಿಯುವ ಕಷ್ಟ ನಿಮಗೆಲ್ರಿ ಅರ್ಥ ಆಗ್ಬೇಕು.
ಯಾರು ಕೂಡ ಬರೀ ಕೆಲಸಕ್ಕೋಸ್ಕರ ಆಗಲಿ ದುಡ್ಡಿಗೋಸ್ಕರವಾಗಲಿ ಹೋಟೆಲ್ ಕೆಲಸವನ್ನ ಆಯ್ಕೆ ಮಾಡಿಕೊಳ್ಳಲ್ಲ. ನಿಜ ಇಲ್ಲಿ ಸಿಗುವ ಹಾಗೆ ಊಟ ವಸತಿ ಬೇರೆಲ್ಲೂ ಸಿಗದು.
ಇನ್ನೂ ಕೆಲವರನ್ನು ಗಮನಿಸಿದ್ದೇನೆ ತಿನ್ನುವ ವಿಷಯದಲ್ಲಿ ಹೋಟೆಲ್ ಹುಡುಗರ ಹೆಸರು ಬಂದರೆ ನೀವ್ ಹೇಳೋ ಮಾತುಗಳು “ಹೇ ಅವ್ನಿಗ್ ಯಾಕ್ ಮರಾಯ, ಅವ್ನ್ ಹೋಟೆಲ್ ಅಲ್ಲಿ ಇರೋದು ಕಣೋ ಅವ್ನ್ ಇಷ್ಟ ಬಂದಿದ್ ಅಲ್ಲಿ ತಿನ್ಬೊದು” ಅಂತ, ಹ್ಮ್….ಅದು ನಿಮ್ಮ ಭ್ರಮೆ ಸ್ವಾಮೀ…. ಏನೋ ಒಂದು ತಿನ್ಬೇಕು ಅಂದ್ರು ಕೂಡ ಎಲ್ಲಿ ಯಾರು ಬಂದು ಬೈತಾರೋ ಎನ್ನುವ ಭಯ ಒಂದು ಕಡೆಯಾದರೆ ಒಂದು ವೇಳೆ ತಿಂದರೂ ಅದನ್ನ ನೆಮ್ಮದಿಯಿಂದ ತಿನ್ಲಿಲ್ವಲ್ಲ ಅನ್ನೋ ಬೇಸರ ಇನ್ನೊಂದೆಡೆ.
ಇನ್ನು ಜೀವನ ಪೂರ್ತಿ ದುಡಿದು ಬರುವ ತಿಂಗಳ ಸಂಬಳವನ್ನು ಪೂರ್ತಿಯಾಗಿ ನಾವೇ ಅನುಭವಿಸುವವರ ಹಾಗೆ ಕಾದು ಕೊನೆಗೆ ಲೆಕ್ಕ ಹಾಕಿದಾಗ ಬರುವ ಸಂಬಳಕ್ಕಿಂತ ನಮ್ಮ ತಲೆ ಮೇಲಿರುವ ಸಾಲವೆ ಅಧಿಕವಾಗಿರುತ್ತದೆ.
ಹೋಟೆಲ್ ನ ಆಹಾರ ಬಿಟ್ಟು ಏನಾದರೂ ಹೊರಗಡೆಯ ಆಹಾರ ತಿನ್ನೋಣವೆಂದರು ಕೂಡ ಒಂದೊಂದು ರೂಪಾಯಿ ಖರ್ಚು ಮಾಡೋಕು ನೂರು ಬಾರಿ ಅಲೋಚಿಸಬೇಕಾಗುವ ಪರಿಸ್ಥಿತಿ ನಮ್ಮದ್ದಾಗಿರುತ್ತದೆ.ಈ ಹೋಟೆಲ್ ಎಂಬ ದಾರಿಯಲ್ಲಿ ನಡೆದು ಬರುವಾಗ ಸಿಗುವ ಜನರೇ ಈ ಅವಮಾನ ಅವಹೇಳನ, ಅಲ್ಲಿಂದ ಗುರಿ ತಲುಪುವವರೆಗೂ ಕೂಡ ಕಹಿ ವಿಚಾರಗಳು ತಪ್ಪಿದ್ದಲ್ಲ .ಹಾಗೆಂದ ಮಾತ್ರಕ್ಕೆ ನಾವು ನಮ್ಮ ಮುಗ್ಧ ನಗು ಬಿಡುವುದಿಲ್ಲ ನಮ್ಮ ನೋವುಗಳನ್ನ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲಾಗದೆ ಬರುವ ಗಿರಾಕಿಗಳನ್ನೂ ನಗಿಸಿಕೊಂಡು ಸದಾ ಹಸನ್ಮುಖಿಯಾಗಿ ಜೀವನ ನಡೆಸುತ್ತೇವೆ.
ಇದು ಹೋಟೆಲ್ ಕಾರ್ಮಿಕರ ಹೋರಾಟದ ಬದುಕಿನ ಕಥೆ-ವ್ಯಥೆ.
ಇದು ನಿಮ್ಮವರ ಮನ ಪರಿವರ್ತಿಸುವುದರ ಸಲುವಾಗಿ ವಿಷಯವೇನೆಂದು ತಿಳಿಸುವ ಪ್ರಯತ್ನ ಅಷ್ಟೇ. ಮನವಿದ್ದಲ್ಲಿ ಈ ಲೇಖನವನ್ನು ಇತರರಿಗೂ ಕಳುಹಿಸಿ -ತಿಳಿಸಿ
ಇಂತೀ ಅನುಭವ ಹಂಚಿಕೊಂಡವ
✍🏻ಕಿರಿಕ್ ಕಾರ್ತಿಕ್ ಶೆಟ್ಟಿ
ತುಂಬಾ ಅದ್ಭುತವಾಗಿದೆ…….
ಹಳೇ ನೆನಪುಗಳು ಕಣ್ಣಿನ ಪರದೆಯ ಮೇಲೆ ಹಾದು ಹೊದಂತಾಗಿದೆ.
ಈಗ ಈ ಕೊರೊನಾ ಹಾವಳಿಯಿಂದ ಅದೆಷ್ಟೋ ಹೊಟೇಲಿಗರಿಗೆ ಸಮಸ್ಯೆ ಆಗಿದೆ. ಸರಕಾರದ ನಿರ್ಬಂಧಗಳು ಹೋಟೆಲ್ ಗಳಿಗೆ ಮಾತ್ರ ಅನ್ವಯವಾಗುವಂತಿದೆ. ಈ ಸರಕಾರಕ್ಕೆ ಅತೀ ಹೆಚ್ಚು ತೆರಿಗೆ ನೀಡುತ್ತಿರುವ ಹೊಟೇಲ್ ಗಳನ್ನು 31 ಮಾರ್ಚ್ ನ ಒಳಗಡೆ ತಮಗೆ ಬೇಕಾದ ತೆರಿಗೆ , ಫುಡ್ ಲೈಸೆನ್ಸ್ ಫೀಸ್, ಹೀಗೆ ಇನ್ನಿತರ ಲೈಸೆನ್ಸ್ ಫೀಸ್ಗಳನ್ನು ಭರ್ತಿ ಮಾಡಿಸಿಕೊಂಡು ಮತ್ತೆ ಅದನ್ನು ಪೂರ್ತಿಯಾಗಿ ಬಂದ್ ಮಾಡಿದ್ದಾರೆ. ಮಾಡದಿದ್ದರೆ ನಿಮ್ಮ ಲೈಸೆನ್ಸ್ ರದ್ದಾಗುದೆಂದು ಬೆದರಿಸಿ ಮಾಡಿಸಿಕೊಂಡಿದ್ದಾರೆ. ಹೋಟೆಲ್ ಚಾಲ್ತಿಯಲ್ಲಿಲ್ಲದಿದ್ದರು ಅವರಿವರ ಹತ್ತಿರ ಬೇಡಿ ತಮ್ಮಲ್ಲಿರುವ ಚಿನ್ನ-ಬಣ್ಣ ಮಾರಿ ಈ ಎಲ್ಲಾ ಫೀಸ್ ಗಳನ್ನು ತುಂಬಿಸಿದರು. ಮುಂದಾದರು ಒಳ್ಳೆಯ ವ್ಯಾಪಾರಕ್ಕೆ ಅನುವು ಮಾಡಿಕೊಡುವರು ಎಂಬ ಮಹಾದಾಸೆಯಲ್ಲಿದ್ದರು. ಇದು ಪೂರ್ವ ಯೋಜಿತ ಸಂಚಿನ ರೀತಿ ಕಾಣುತ್ತಿದೆ. ಮೊದಲೇ ಹೇಳಿದ್ದರೆ ತಮಗೆ ಬರುವ ತೆರಿಗೆ ಬರುವುದಿಲ್ಲವೆಂದು ಮಾಡಿದ ರೀತಿ ಇದೆ.
ಕೊರೊನಾಕ್ಕಿಂತ ನಮ್ಮ ಈ ಸರಕಾರವೇ ನಮಗೆ ಮಹಾಮಾರಿಯಾಗಿದೆಯೋ ಎಂಬ ನಿಲುವನ್ನು ತಂದಿಟ್ಟಿದ್ದಾರೆ ನಮ್ಮ ಹೋಟೆಲಿಗರಿಗೆ……..