ಉಡುಪಿ (ಜು, 13) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗದ ಆಶ್ರಯದಲ್ಲಿ ಕೋಡ್ ಟ್ರೂಪರ್ ಕ್ಲಬ್ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಭಾಗಿತ್ವದಲ್ಲಿ ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ಅಂತರ್ಜಾಲ ಹ್ಯಾಕಥಾನಿನ ಸಮಾರೋಪ ಸಮಾರಂಭವು ಜುಲೈ 11ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಟ್ಟಗೆಯನ್ನು ಮಥನ ಮಾಡಿದರೆ ಬೆಂಕಿಯ ಉತ್ಪನ್ನವಾಗುವಂತೆ, ಭೂಮಿಯ ಸತತ ಉತ್ಖನನ ದಿಂದ ನೀರಿನ ಸೆಲೆ ಸಿಗುವಂತೆ ಉತ್ಸಾಹಭರಿತ ಜನರಿಗೆ ಯಾವುದು ಅಸಾಧ್ಯವಲ್ಲ. ಇದನ್ನು ಎಲ್ಲಾ ಮಕ್ಕಳು ತಿಳಿದುಕೊಳ್ಳುವುದು ಅವಶ್ಯಕ ಎಂದು ತಿಳಿಸಿದರು. ಸ್ಪರ್ಧೆ ಎಂದರೆ ಒಬ್ಬರಿಗೋ ಇಬ್ಬರಿಗೋ ಪ್ರಶಸ್ತಿ ಬರಬಹುದು. ಆದರೆ ಉಳಿದವರೆಲ್ಲರ ಪ್ರಯತ್ನವೂ ಕೂಡ ಅಭಿನಂದನೀಯವೇ ಸರಿ, ಸ್ಪರ್ಧಾಳುಗಳು ತಾವು ಕಂಡುಕೊಂಡ ಸಮಸ್ಯೆಗೆ ಪೂರ್ತಿಯಾಗಿ ಪರಿಹಾರ ಕಂಡುಹಿಡಿಯದೇ ಇರಬಹುದು ಅಥವಾ ಸ್ಪರ್ಧೆಯ ಬಳಿಕ ಇನ್ನೂ ಉತ್ತಮ ಆಲೋಚನೆಗಳು ಹೊಳೆದಿರಬಹುದು. ನಿಮ್ಮ ಆಲೋಚನಾ ಶಕ್ತಿಗೆ ತಡೆ ನೀಡದೆ, ಇನ್ನೂ ಉತ್ತಮ ಪರಿಹಾರಗಳು ನಿಮ್ಮಿಂದ ಮೂಡಿಬರಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಕೋಡ್ಟ್ರೂಪರ್ಸ ಕ್ಲಬ್ನ ಸಂಯೋಜಕರಾದ ಶ್ರೀ ಸಿಜು ವಿ ಸೋಮನ್ ಅವರು ಹ್ಯಾಕೋತ್ಸವ ವರದಿಯನ್ನು ಮಂಡಿಸಿದರು. ಕೋಡ್ ಟ್ರೂಪರ್ಸ ಕ್ಲಬ್ನ ಖಜಾಂಚಿಯಾದ ಕೀರ್ತಿ ನಾಯಕ್ ವಂದಿಸಿದರು. ಆನಂದಿತಾ ಮತ್ತು ಅವಂತಿ ನಿರೂಪಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಡೀನ್ಗಳು ವಿವಿಧ ವಿಭಾಗಗಳ ಮುಖ್ಯಸ್ಥರು ,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಮೌಲ್ಯ ಮಾಪಕರು ಉಪಸ್ಥಿತರಿದ್ದರು.
ಸಮಾರಂಭದ ನೇರ ಪ್ರಸಾರವು ಯೂಟ್ಯೂಬ್ ಮುಖಾಂತರ ನಡೆಯಿತು. ಸಮಾರಂಭದಲ್ಲಿ ಹಾಕೋತ್ಸವ ಪ್ರಾಯೋಜಕ ಕಂಪೆನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ರೋಬೋಸಾಫ್ಟ್ ಸಂಸ್ಥೆಯ ಶ್ರೀ ಕಾರ್ತಿಕ್ .ಕೆ., ಟೆತರ್ಫಿ ಸಂಸ್ಥೆಯ ಶ್ರಿ ನಿಶ್ಚಿತ್ ಶೆಟ್ಟಿ, ಐಇಇಇ ಮಂಗಳೂರು ಉಪಘಟಕದ ಅಧ್ಯಕ್ಷರಾದ ಡಾ ಪುಷ್ಪರಾಜ್ ಶೆಟ್ಟಿ, ಪ್ರೂಬಾ ಇಂಡಿಯಾ ಸಾಫ್ಟ್ವೇರ್ ಪ್ರೈ: ಅಮಿಟೆಡ್ನ ನಿರ್ದೇಶಕರಾದ ಶ್ರೀ ದಿನೇಶ್ ಕಾರ್ಣಿಕ್ ಹಾಗೂ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ್ ಭಟ್ ವಿವಿಧ ವಿಭಾಗಗಳ ವಿಜೇತರನ್ನು ಘೋಷಿಸಿದರು.
ವ್ಯಾಪಾರಾಧಾರಿತ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕೆನರಾ ತಾಂತ್ರಿಕ ಮಹಾವಿದ್ಯಾಲಯ, ಮಂಗಳೂರು ಮತ್ತು ದ್ವಿತೀಯ ಬಹುಮಾನವನ್ನು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಸಾಮಾಜಿಕ ಪರಿಣಾಮ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅಮೈಟಿ ವಿಶ್ವವಿದ್ಯಾಲಯ, ನೋಯ್ಡಾ ಮತ್ತು ದ್ವಿತೀಯ ಬಹುಮಾನವನ್ನು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಳಿಸಿದರು. ಸಮಾಧಾನಕರ ಬಹುಮಾನವನ್ನು ಆರ್.ವಿ ಇನ್ನಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜೆಂಟ್, ಬೆಂಗಳೂರು, ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರು, ಅಮ್ರತ ವಿಶ್ವ ವಿದ್ಯಾಪೀಠಂ, ಮೈಸೂರು ಹಾಗೂ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನ ತಂಡಗಳಿಗೆ ನೀಡಲಾಯಿತು.