ಕುಂದಾಪುರ (ಕುಂದಗನ್ನಡ) ಕನ್ನಡ ನಾಡಿನ ವಿಭಿನ್ನ ಹಾಗೂ ವಿಶಿಷ್ಟ ಭಾಷಾ ಸೊಗಡಿನ ಪ್ರದೇಶ. ಸುತ್ತ ಮುತ್ತ ಹಸಿರಿನಿಂದ ಮೈದುಂಬಿ ಕಂಗೊಳಿಸುತ್ತ ,ಹಕ್ಕಿಗಳ ಚಿಲಿಪಿಲಿ ಕಲರವ ಕೇಳುತ್ತ, ಪಶ್ಚಿಮ ದಿಕ್ಕಿನಗಲಕ್ಕೂ ಸಮುದ್ರದ ಬೋರ್ಗರೆಯುವ ಅಲೆಗಳನ್ನು ನೋಡುತ್ತಾ ಖುಷಿ ನೀಡುವ ತಾಣ ನಮ್ಮ ಕುಂದಾಪುರ. ಕುಂದಾಪುರ ಬರೀ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶದಲ್ಲಿ ಅಲ್ಲದೆ ಅನೇಕ ಕಾರಣಗಳಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ.
ರಾಜ್ಯದ ಇತರೆ ಭಾಗಗಳಿಗಿಂತ ವಿಶಿಷ್ಟ ಶೈಲಿಯ ಅಸ್ಮೀತೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿರುವ ಪ್ರದೇಶ ನಮ್ಮ ಕುಂದಾಪುರ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರ ತೀರವು ಕುಂದಾಪುರದ ಪ್ರಮುಖ ಆಕರ್ಷಣೆಗಳಲ್ಲೊಂದು. ಕರಾವಳಿ ಎಂದ ತಕ್ಷಣ ಮೊದಲಿಗೆ ನೆನಪಾಗುವುದು ಮೀನ್ ಸಾರ್. ಮೀನುಗಾರಿಕೆಯಲ್ಲಿ ಕುಂದಾಪುರದ ಭಾಗದ ಜನರು ತೊಡಗಿಕೊಂಡಿದ್ದಾರೆ.ಕರಾವಳಿ ಭಾಗದಲ್ಲಿ ಭೂತಾಯಿ ಮೀನಿಗೆ ಬೇಡಿಕೆ ಜಾಸ್ತಿ, ಇದಕ್ಕೆ ಬೈಗೆ ಎಂದು ಕರಾವಳಿ ಭಾಗದಲ್ಲಿ ಕರೆಯುತ್ತಾರೆ. ಬೈಗೆ, ಬಂಗ್ಡಿ, ಎಸಿಡಿ, ಶಾಡಿ, ಚಾಟಿ ,ಕೊಡುವಾಯ್, ನಂಗ್, ಬೆಣ್ಣೆ ಕುರ್ಕ, ಚಟ್ಲಿ ಮುಂತಾದ ಮೀನುಗಳು ಕರಾವಳಿಯಲ್ಲಿ ಪ್ರಸಿದ್ಧ.
ಹಿನ್ನಲೆ :
ಕುಂದಾಪುರವು ಹಿಂದೆ ಕುಂದಾವರ್ಮನೆಂಬ ತುಂಡಾರಸನ ಅಧಿಪತ್ಯಕ್ಕೆ ಒಳಪಟ್ಟಿದ್ದು, ಕುಂದೇಶ್ವರ ದೇವರು ಕುಂದವರ್ಮನ ಮನೆ ದೇವರು ಹಾಗೂ ಈತ ನಿರ್ಮಿಸಿದ ಕುಂದೇಶ್ವರ ದೇವಾಲಯದಿಂದ ಈ ಊರಿಗೆ ಕುಂದಾಪುರ ಎಂಬ ಹೆಸರು ಬಂದಿದೆ ಎಂದು, ಕೆಲವರು ಮಲ್ಲಿಗೆ (ಕುಂದ) ಹೂವು ಹೆಚ್ಚಾಗಿ ಇಲ್ಲಿನ ಜನ ಬೆಳೆಯುತ್ತಿದ್ದ ಕಾರಣ ಈ ಹೆಸರು ಬಂದಿದೆ ಎಂದು ಹೇಳುತ್ತಾರೆ. ಪೋರ್ಚುಗೀಸರು ಕುಂದಾಪುರದಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದಾರೆ ಎಂದು ಐತಿಹಾಸಿಕವಾಗಿ ತಿಳಿದುಬಂದಿದೆ.
ಶಿಕ್ಷಣ,ಕಲೆ,ಸಾಹಿತ್ಯ, ಕ್ರೀಡೆ,ಸಾಂಸ್ಕೃತಿಕ,ಧಾರ್ಮಿಕ ಹಾಗೂ ರಾಜಕೀಯ ರಂಗಕ್ಕೆ ಹಲವಾರು ಧೀಮಂತರನ್ನು ಹುಟ್ಟುಹಾಕಿದ ಕೀರ್ತಿ ಕುಂದಾಪುರಕ್ಕೆ ಸಲ್ಲುತ್ತದೆ. ಹಲವಾರು ಶ್ರೇಷ್ಠ ವ್ಯಕ್ತಿಗಳಿಗೆ ಜನ್ಮ ನೀಡಿದ ತವರೂರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತ್ , ಕವಿ ಬರಹಗಾರ ಮೊಗೇರಿ ಗೋಪಾಲಕೃಷ್ಣ ಅಡಿಗ, ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ , ಹಿಂದಿ ಚಲನಚಿತ್ರ ನಟ ಗುರುದತ್ ಪಡುಕೋಣೆ , ಹೆಸರಾಂತ ನಟ ಹಾಗೂ ನಿರ್ದೇಶಕ ಕಾಶಿನಾಥ್ ,ಉಪೇಂದ್ರ , ಐಸಿಐಸಿಐ ಬ್ಯಾಂಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ಕುಂದಾಪುರ ವಾಮನ ಕಾಮತ್ ,ಕೋಕಿಲ ಮೋಹನ್ ದಕ್ಷಿಣ ಭಾರತ ಚಲನಚಿತ್ರ ನಟ ನಂದಳಿಕೆ ಲಕ್ಷ್ಮೀನಾರಾಯಣಯ್ಯ (ಮುದ್ದಣ್ಣ ಕವಿ ),ಬಿ.ಸಿ ಗೌರೀಶ್ ಕನ್ನಡ ಛಾಯಾಚಿತ್ರಗ್ರಾಹಕ ಯೋಗರಾಜ್ ಭಟ್ ಚಿತ್ರನಿರ್ದೇಶಕ ,ದೀಪಿಕಾ ಪಡುಕೋಣೆ ಹಿಂದಿ ಚಲನಚಿತ್ರ ನಟಿ, ರಿಷಬ್ ಶೆಟ್ಟಿ ನಿರ್ದೇಶಕ ರವಿ ಬಸ್ರೂರ್ ಸಂಗೀತ ನಿರ್ದೇಶಕ ಹಾಗೂ ಕುಂದಾಪುರ ವಾಟ್ಸಪ್ಪ್ ಹೀರೋ ಮನು ಹಂದಾಡಿ. ಇನ್ನು ಹಲವಾರು ವ್ಯಕ್ತಿಗಳು ಇದ್ದಾರೆ.. ಕುಂದಾಪುರದ ಎಷ್ಟೋ ವ್ಯಕ್ತಿಗಳು ಯಶಸ್ವಿ ಉದ್ಯಮಿಗಳಾಗಿದ್ದಾರೆ
ಕೃಷಿ ಮತ್ತು ಆಚರಣೆಗಳು:
ಕುಂದಾಪುರದಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆಗಳೆಂದರೆ ಭತ್ತ, ಅಡಿಕೆ, ತೆಂಗು.ರೈತಾಪಿ ಕುಟುಂಬದವರು ನಂಬಿಕೊಂಡು ಬಂದಿರುವಂತಹ ಬೆಳೆಗಳು ಈ ಬೆಳೆಗಳನ್ನು ಬೆಳೆದು ರೈತರು ತಮ್ಮ ಜೀವನವೆಂಬ ಬವಣೆಯನ್ನು ತುಂಬಿಕೊಳ್ಳುತ್ತಾರೆ.
ಆಚರಣೆ ಗಳೆಂದರೆ ಹೊಸತನದ ಸಂಭ್ರಮದಲ್ಲಿ ಹಸಿರಿನಿಂದ ಮೈತುಂಬಿಕೊಂಡು ಪ್ರಕೃತಿಯ ಸೊಬಗು ಸೂರೆಗೊಳ್ಳುತ್ತದೆ ಈ ಸಮಯದಲ್ಲಿ ರೈತಾಪಿ ಕುಟುಂಬದವರು ಕುಂದಾಪುರ ಭಾಗದಲ್ಲಿ “ಹೊಸ್ತ್ ” ಹೊಸತನದ ಆಗಮನ (ಭತ್ತ ) ಹಲವಾರು ವಿಧದ ಅಡುಗೆಗಳನ್ನು ಮಾಡಿ ಒಟ್ಟಾಗಿ ಎಲ್ಲರೂ ಊಟ ಮಾಡುತ್ತಾರೆ. ಕುಂದಾಪುರದಲ್ಲಿ ಜಕಣಿ,ಅಜ್ಜಿ, ಕ್ಯಾನಿಗೆಂಡಿ,ಕಂಬಳ, ಶಿವರಾತ್ರಿ ಹಬ್ಬ,ಕೊಡಿ ಹಬ್ಬ,ದೀಪಾವಳಿ ಹಬ್ಬ, ನವರಾತ್ರಿ ಚೌತಿ, ಕಮಲಶಿಲೆ ಹಬ್ಬ ,ಮಾರಣಕಟ್ಟೆ ಹಬ್ಬ ,ಕುಂದೇಶ್ವರ ಹಬ್ಬ, ಹಲವಾರು ಹಬ್ಬಗಳು ಪ್ರತಿವರ್ಷ ನಡೆಯುತ್ತದೆ. ದೈವಾರಾಧನೆ ಕೋಲ,ಪಾಣರಾಟ, ನಾಗಮಂಡಲ ಹಾಗೂ ಕರಾವಳಿಯ ಗಂಡು ಕಲೆ ಯಕ್ಷಗಾನ ಬಡಗುತಿಟ್ಟಿನ ಯಕ್ಷಗಾನವನ್ನು ಪರಿಚಯಿಸುವಲ್ಲಿ ಕುಂದಾಪುರದ ಪಾತ್ರ ಮಹತ್ತರವಾದುದು. ಹಳ್ಳಿಗಳಲ್ಲಿ ಪುರಾಣಗಳ ಕಥೆಗಳನ್ನು ಸಾರುವ ಯಕ್ಷಗಾನ ಇಂದು ವಿಶ್ವ ಮಟ್ಟದಲ್ಲಿ ತನ್ನ ಚಾಪನ್ನ ಮೂಡಿಸಿದೆ ಎಂದರೆ ಹೆಮ್ಮೆಯ ವಿಷಯ.
ಕುಂದಾಪುರದಲ್ಲಿ ಹರಕೆಯ ರೂಪದಲ್ಲಿ ಯಕ್ಷಗಾನವನ್ನು ಬೆಳಕಿನ ಸೇವೆಯಾಗಿ ಆಟ ಆಡಿಸುತ್ತಾರೆ. ಸುಪ್ರಸಿದ್ದ ಭಾಗವತರು ಕಾಳಿಂಗ ನಾವುಡರು, ರಾಘವೇಂದ್ರ ಆಚಾರ್ಯ, ರವೀಂದ್ರ ಶೆಟ್ಟಿ ಹೊಸಂಗಡಿ,ಕಲಾವಿದರು ಆಜ್ರಿ ಗೋಪಾಲ ಗಾಣಿಗ, ಹಳ್ಳಾಡಿ ಜಯರಾಮ್ ಶೆಟ್ಟಿ ಇನ್ನು ಬಹಳಸ್ಟು ಜನ ಯಕ್ಷಗಾನದಲ್ಲಿ ತನ್ನ ಚಾಪನ್ನೂ ಮೂಡಿಸಿದ್ದಾರೆ.
ಕುಂದಾಪುರ ಕನ್ನಡದ ಹಳೆಯ ಭತ್ತ ಕುಟ್ಟುವ ಹಾಡು
1) ಕುಕಣಿ ನೆಂಟರೆ ಕುಳಿಗೆ ಅಕ್ಕಿ ಇಲ್ಲೇ
ನಾ ತೊಳು ಬತ್ತು ನಮ್ದಲ್ಲ..
ನಾ ತೊಳು ಬತ್ತು ನಮ್ದಲ್ಲ ನೆಂಟರೆ….
ಹೊತ್ತಿದಲ್ ಹೊಳಿ ದಾಟ್ಕಣಿ
2) ಸೋಸಿಬಂದ ಗಳಿಗೆಗೆ ದೆಸಿ ಬಂದೆ ಕೂಡಿತ್
ಸಸಿ ತೋಟ ಎಲ್ಲಾ ಫಲು ಬಂದು
ಸಸಿ ತೋಟ ಎಲ್ಲಾ ಫಲ ಬಂದ್ ನಮ್ ಮನೆಯಲ್
ಸೋಸಿ ಬಂದಳ್ ಒಳ್ಳೆ ಗಳಿಗೆಲ್
3)ಕಂಬ್ರಶಲಿ ಮಾದೇವಿ ತೇರ್ಹಬ್ಬಕ್ ದಿನವಿಟ್ ಗಂಡಂಗ್ ಒಂದ್ ಒಲಿ ಬರಿದಾಳ್
ಗಂಡಂಗ್ ಒಂದ್ ಒಲಿ ಏನ್ ಅಂದ್ ಬರ್ದಳ್
ತೇರ್ ಹಬ್ಬ ಸ್ವಾಮಿ ಬರ್ಬೆಕ್
ಹಬ್ಬಕ್ ನಾ ಬರ್ಲಾರಿ ಆ ಗುಲ್ ನಾ ಕೇನ್ಲಾರಿ
ಹಬ್ಬದ್ ಮರ್ದಿನ ಹಸ್ರಕೆ ನದಿಯಲ್ ಹೊಳಿಯಾಣ ಆಡುವಲ್ಲೇ ಬರ್ವೇನ್..
ನಮ್ಮ ಬಾಲ್ಯದ ನೆನಪು
ನಾವ್ ಶಾಲಿಗ್ ಹೋಪತಿಗ್ ,ನಾಲ್ಕೈದ್ ಜನ ಒಟ್ ಮಾಡಿ ಮಳ್ಗಲಕ್ ತೊಡ್ ದಾಟಿ ಶಾಲಿಗ್ ಹೊಪ್ದ್ ಗಾಳಿಮಳೆ ಬಪ್ಪತಿಗ್ ಕ್ವಡಿ ಹಾರಿ ಹೊಪ್ದ್ ಬೈಕ್ ಅಡ್ಡಯಿಕಂಡ್ ಮನೆಗ್ ಹೊಪ್ದ್ ಸ್ವಾತಂತ್ರ್ಯ ಹಬ್ಬದಿನ ಕೂಗ್ಕಂತ ಶಾಲಿಗ್ ಹೊಪ್ದ್ ಮಳೆ ಬಂದ್ರ್ ಶಾಲೆ ಇಲ್ಲ ಅಂದಳಿ ಮಳೆ ಬರ್ಲಿ ಅಂದಳಿ ಬೇಡ್ಕಬದ್ ಇಂತಹ ಒಂದ್ ಖುಷಿ ಎಲ್ಲೂ ಸಿಗುದಿಲ್ಲ ಮರ್ರೆ. ಇದ್ ಕುಂದಾಪುರದಲ್ ಮಾತ್ರ…. ನಾವ್ ಕುಂದಾಪುರದಲ್ ಹುಟ್ಟುಕ್ ಪುಣ್ಯ ಮಾಡಿತ್… ಪ್ಯಾಟಿ ಬದಿ ಮಕ್ಕಳ್ ಕಂಡೆಗ್ ಗಾಡಿ ಅಲ್ ಅಲಾ ಹೊಯ್ ಬಿಟ್ಟಿಕಿ ಬತ್ತಿರ್ಲಾ ನಮ್ ಕುಂದಾಪುರ ಮಕ್ಕಳನ್ನ… ಎಲ್ಲಾ ನೆಡ್ಕಂಡೆ ಹೋತಿತ್… ಅದ್ಕೆ ಕುಂದಾಪುರದರಿಗ್ ಜೀವನದ್ ಅನುಭವ ಜಾಸ್ತಿ….
ಕುಂದಾಪುರ ಕನ್ನಡ ಅಂದ್ರೆ ಯಾರಿಗೆ ಗೊತ್ತಿಲ ಹೇಳಿ ಇದರ ಹಿರಿಮೆಗೆ ಅದರದ್ದೇ ಆದ ಒಂದು ಮೌಲ್ಯವಿದೆ. ಕುಂದಾಪುರ ಕನ್ನಡ ಅಳಿಯದೆ ಉಳಿಸುವಲ್ಲಿ ಪ್ರಯತ್ನ ಮಾಡಬೇಕು… ಕುಂದಾಪುರ ಬಿಟ್ಟು ಹೊರಗೆ ಹೋದಾಗ ನಮ್ಮ ಊರು ನಮ್ಮ ಭಾಷೆಯನ್ನ ಮರೆಯಬಾರದು.. ಮನೆಯಲ್ಲಿಯಾದರು ಕುಂದಾಪುರ ಕನ್ನಡವನ್ನ ಮಾತಾಡೋಣ…. ನಮ್ಮ ಭಾಷೆ ನಮ್ಮ ಹೆಮ್ಮೆ… ಭಾಷಭಿಮಾನ ಬೆಳೆಸೋಣ… ಕುಂದಾಗನ್ನಡವನ್ನ ಎತ್ತಿ ಹಿಡಿಯೋಣ…. ಬರೀ ಸಾಮಾಜಿಕ ಜಾಲತಾಣದಲ್ಲಿ ನಮ್ ಭಾಷಿ ನಮ್ ಉಸ್ರ್ ಅನ್ನದೆ ಹೋತ ಬತ್ತ ಹೊಯಿಕ್ ಬರ್ಕ್ ಉಣ್ಕ್ ತಿನ್ಕ ಪಣ್ಕ್ ಅಂದಳಿ ನಮ್ ಭಾಷಿ ಮಾತಾಡುವ ಹೊಯ್….ಪ್ರತಿವರ್ಷ ಆಸಾಡಿ ಅಮಾಸಿಗೆ ವಿಶ್ವ ಕುಂದಾಪುರ ಕನ್ನಡ ಆಚಾರಿಸ್ತ್ರ್…. ನಾವು ಅವ್ರ್ ಒಟ್ಟಿಗೆ ಒಗ್ಗೂಡ್ಕಂಡ್ ಸಾಪ್ ಮಾಡಿ ಆಚರ್ಸುವ…
ಕುಂದಾಪುರ ತಾಲೂಕು ಹಲವು ದೈವ ದೇವರ ಬೀಡು
ಬಾವೈಕ್ಯದ ಗೂಡು
ಸುಂದರ ಮುಗ್ದ ಜನರ ಬಾಂದವ್ಯದ ಬೀಡು……..
🙏ಜೈ ಕುಂದಾಪುರ🙏
ವಿಘ್ನೇಶ್ ಕುಮಾರ್ ಶೆಟ್ಟಿ, ಹೊಳಂದೂರು ಆಜ್ರಿ