ಮಲ್ಪೆ (ನ, 18) : ರಾಜ್ಯದ ಬೃಹತ್ ಮೀನುಗಾರಿಕಾ ಬಂದರಾದ ಮಲ್ಪೆ ಬಂದರಿನಲ್ಲಿ ದಿನನಿತ್ಯ ಕೋಟ್ಯಂತರ ರೂಪಾಯಿ ಮೀನಿನ ವ್ಯವಹಾರ ನಡೆಯುತ್ತದೆ. ನೂರಾರು ಬೋಟುಗಳಲ್ಲಿ ಆಂದ್ರಪ್ರದೇಶ ,ತಮಿಳು ನಾಡು, ಒರಿಸ್ಸಾ ಹೀಗೆ ವಿವಿಧ ರಾಜ್ಯಗಳ ಮೀನುಗಾರರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಮೀನುಗಾರರ ಉದ್ಯೋಗ ನಿಮಿತ್ತ ಮಲ್ಪೆ ಬಂದರನ್ನು ಅವಲಂಬಿದ್ದಾರೆ. ರಾತ್ರಿ ಹಗಲೆನ್ನದೇ ಮೀನುಗಾರಿಕಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವ ಈ ಬಂದರಿನ ನದಿಯಲ್ಲಿ ಆತಿಯಾದ ಹೂಳು ತುಂಬಿದ್ದು ಮೀನುಗಾರರಲ್ಲಿ ಆತಂಕ ಸ್ರಷ್ಠಿಸಿದೆ.
ಬಂದರಿನ ಬೋಟುಗಳ ತಂಗುದಾಣದಲ್ಲಿ ತುಂಬಾ ಹೂಳು ತುಂಬಿದ್ದು, ಮೀನುಗಾರರ ಅಪ್ಪಿತಪ್ಪಿ ನೀರಿಗೆ ಬಿದ್ದರೆ ಮೇಲೆ ಬರಲಾಗದೆ ಒದ್ದಾಡಿಕೊಂಡು ಪ್ರಾಣ ಬಿಡುವ ಸಾಧ್ಯತೆಗಳು ಹೆಚ್ಚಿದ್ದು, ಹೂಳು ತೆರವು ಗೊಳಿಸಿದರೆ ನೀರಿಗೆ ಬಿದ್ದ ವ್ರಕ್ತಿ ತನ್ನ ಕೈಕಾಲುಗಳ ಸಹಾಯದಿಂದ ಕನಿಷ್ಠ 2 ಅಥವಾ 3 ಬಾರಿ ಮೇಲೆ ಬರುತ್ತಾನೆ. ಇದರಿಂದ ಪ್ರಾಣವನ್ನು ಉಳಿಸಬಹುದು. ಆದರೆ ದಟ್ಟ ಹೂಳು ತುಂಬಿಕೊಂಡಿರುವ ಮಲ್ಪೆ ಬಂದರಿನ ನದಿಯಲ್ಲಿ ಮೀನುಗಾರರ ಕಾಲು ಜಾರಿ ನದಿಗೆ ಬಿದ್ದರೆ ಕಾಲುಗಳು ಹೂಳಿನಲ್ಲಿ ಸಿಕ್ಕಿಹಾಕಿಕೊಂಡು ಮೇಲೆ ಬರಲಾಗದೆ ಪ್ರಾಣ ಬೀಡಬೇಕಾದ ಸಂದರ್ಭಗಳು ಹೆಚ್ಚಾಗುತ್ತಿದೆ. ಈ ಕುರಿತು ಆತಂಕ ವ್ಯಕ್ತ ಪಡಿಸಿದ ಮಲ್ಪೆ ಯ ಆಪತ್ಭಾಂದವ,ಜೀವರಕ್ಷಕ ಹಾಗೂ ಈಜುಪಟು ಈಶ್ವರ ಮಲ್ಪೆ ಮೀನುಗಾರಿಕಾ ಮತ್ತು ಬಂದರು ಇಲಾಖೆಗೆ ಕಳಕಳಿಯ ವಿನಂತಿ ಮಾಡಿದ್ದಾರೆ.
ಬಂದರಿನ ನದಿಯಲ್ಲಿ ನೀರು ಕಡಿಮೆ ಇದ್ದರೆ ಬೋಟಿನ ಫ್ಯಾನಿಗೆ ಬಲೆ ,ರೋಪ್, ಟಯರ್. ಇತ್ಯಾದಿ ಸಿಕ್ಕಿ ಬೀಳುವ ಸಂಭವವಿದೆ. ಇದನ್ನು ತಪ್ಪಿಸಲು ಸರ್ಕಾರ ಐದರಿಂದ ಏಳುಅಡಿ ಹೂಳು ತೆಗೆಯಬೇಕೆಂದು ಸಾರ್ವಜನಿಕ ಹಿತದ್ರಷ್ಠಿಯಿಂದ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮೀನುಗಾರಿಕಾ ಸಚಿವರು, ಸ್ಥಳೀಯ ಶಾಸಕರು ಹಾಗೂ ಸ್ಥಳೀಯಾಡಳಿತ ಆದಷ್ಟು ಬೇಗ ಗಮನ ಹರಿಸಿ ಮಲ್ಪೆ ಬಂದರಿನ ನದಿ ಭಾಗದಲ್ಲಿ ಹೂಳೆತ್ತಲು ಕ್ರಮ ಕೈಗೊಳ್ಳಬೇಕಿದೆ.