ಶಿರ್ವ(ಜ.23): ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಮಂಗಳೂರು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಸಂತ ಮೇರಿ ಕಾಲೇಜು ಶಿರ್ವ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದರ 159 ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ-2022 ವಿಶೇಷ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ. ಆರ್ ಪಾಟ್ಕರ್ರವರು ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಗ್ರಾಮ ನೈರ್ಮಲ್ಯಕ್ಕೆ ಮಹತ್ವ ನೀಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ನೆಹರು ಯುವ ಕೇಂದ್ರ, ಉಡುಪಿಯ ಜಿಲ್ಲಾ ಯುವ ಅಧಿಕಾರಿ ಶ್ರೀ ವಿಲ್ಫ್ರೆಡ್ ಡಿ’ಸೋಜ ಹಾಗೂ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್, ಕಟಪಾಡಿ, ಉಡುಪಿ ಇಲ್ಲಿನ ಕನ್ನಡ ಪ್ರಾಧ್ಯಾಪಕರಾದ ಶ್ರೀ ಧೀರಜ್ ಬೆಳ್ಳಾರೆ ಯವರು ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತು ಮಾಹಿತಿ ನೀಡುವುದರೊಂದಿಗೆ ನಾವು ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಅತೀ ಸಣ್ಣ ಸಣ್ಣ ಒಳ್ಳೆಯ ಕೆಲಸಗಳು ದೇಶದಲ್ಲಿ ಬದಲಾವಣೆಯನ್ನು ತರಲು ಪೂರಕವಾಗಬಲ್ಲದು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗ್ರೇಸಿ ಕರ್ಡೋಜ ಸಂದರ್ಭೋಚಿತವಾಗಿ ಮಾತನಾಡಿದರು. ರಾಷ್ಟ್ರೀಯ ಯುವ ಸಪ್ತಾಹ-2022 ವಿಶೇಷ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಫರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ವತಿಯಿಂದ ಬಹುಮಾನವನ್ನು ವಿತರಿಸಲಾಯಿತು.
ಕಾಲೇಜಿನ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಶ್ರೀ ಪ್ರೇಮನಾಥ್ ವಿಜೇತರ ಪಟ್ಟಿಯನ್ನು ವಾಚಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಮೋನಿಸ್ರವರು ಮಾತನಾಡಿ ಬಹುಪಾಲು ಯುವ ಸಮುದಾಯವನ್ನೇ ಹೊಂದಿರುವ ನಮ್ಮ ದೇಶದಲ್ಲಿ ಯುವಕರು ರಚನತ್ಮಾಕ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ವಿವೇಕಾನಂದರ ಆದರ್ಶಗಳು ಸಾರ್ವಕಾಲಿಕವಾಗಿ ಉಳಿಯಲು ಸಾಧ್ಯ ಎಂದರು.
ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಸಂಪರ್ಕಾಧಿಕಾರಿ ಶ್ರೀ ರೋಹಿತ್ ಜಿ. ಎಸ್ ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಕು. ರಕ್ಷಾ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕು. ಯಶೋಧ ವಂದಿಸಿದರು.ವಿದ್ಯಾರ್ಥಿನಿ ಕು. ನಿಶ್ಮಿತಾ ನಿರೂಪಿಸಿದರು.