ಭಾರತೀಯ ಪ್ರೊ ಕಬ್ಬಡ್ಡಿ ತಂಡದ ಬಾಗಿಲು ಬಡಿದು ಬಂದಿದ್ದ ಸುಷ್ಮಂತ್ ಎನ್ನುವ ಮಲೆನಾಡಿನ ಪ್ರತಿಭೆ ಇನ್ನೇನು ಮುಂಬೈ ತಂಡ ಸೇರಿಯೇ ಬಿಟ್ಟ ಅನ್ನೋವಷ್ಟರಲ್ಲಿ ಆತನ ಜೀವನದಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು.
ಮೂರು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಉತ್ತುಂಗಕ್ಕೆ ಏರಿದಾಗ ಕಬಡ್ಡಿ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ಮಾತೇ.ಮಲೆನಾಡಿನ ಹೊಸನಗರದ ಹೆದ್ದಾರಿಪುರದ ತೊರೆಗದ್ದೆಯ ಮಧ್ಯಮ ಕುಟುಂಬದ ಹುಡುಗ ಬಾಲ್ಯದಿಂದಲೂ ಕಬ್ಬಡ್ಡಿ ಅಂಕಣದಲ್ಲಿ ಕಳೆದದ್ದೇ ಹೆಚ್ಚು. ತನ್ನ ಪ್ರತಿಭೆಗೆ ಇನ್ನಷ್ಟು ಅವಕಾಶಕ್ಕಾಗಿ ಕಾದಿದ್ದ ಸುಷ್ಮಂತ್ ಗೆ ಮುಂಬೈ ಪ್ರೊ ಕಬಡ್ಡಿ ತಂಡ ಸೇರುವ ಅವಕಾಶ ಲಭಿಸಿದ್ದು ತನ್ನೂರಿಗರ ಆಶೀರ್ವಾದ ಪಡೆದು ಮುಂಬೈ ಸೇರಲು ಬಯಸಿ ಊರಿಗೆ ಬಂದಾಗ ಅಲ್ಲಿನ ಸ್ಥಳೀಯ ಕಬಡ್ಡಿ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದಾರೆ. ಆಡುವ ವೇಳೆ ಬಿದ್ದು ಕಾಲು ನೋವು ಮಾಡಿಕೊಂಡಿದ್ದು ಮುಂದೆ ಅದೇ ಜೀವನಕ್ಕೆ ಮಾರಕವಾಗುವುದು ಎಂದು ಸ್ವತ: ಸುಷ್ಮಂತ್ ಕೂಡ ಎನಿಸಿರಲಿಲ್ಲ. ಆದರೆ ಆಟದ ಸಣ್ಣ ಅವಘಡ ಹುಡುಗನ ಬಾಳನ್ನೇ ಮುಕ್ಕಿತ್ತು…
ಅಂದಿನ ಆಟದ ಸಣ್ಣ ಎಡವಟ್ಟು ಸುಷ್ಮಂತ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ವೈದ್ಯರು ಮಾಡಿದ ಏಡವಟ್ಟು ಗಾಯದ ತೀವ್ರತೆಗೆ ಐದು ಆಸ್ಪತ್ರೆ ಸುತ್ತಿದ ಸುಷ್ಮಂತ್ 9 ಶಸ್ತ್ರಚಿಕಿತ್ಸೆಗೆ ತನ್ನ ಕಾಲನ್ನು ಬಲಿ ಕೊಟ್ಟಿದ್ದು ನಂತರ ತನ್ನ ಎಡ ಕಾಲನ್ನೇ ಕತ್ತರಿಸ ಬೇಕಾಯಿತು. ಕನ್ನಡದ ಖ್ಯಾತ ನಟ ಸುದೀಪ್ ಅವರ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ನವರು ಸುಷ್ಮಂತ್ ಕಾಲಿನ ಶಸ್ತ್ರ ಚಿಕಿತ್ಸೆ ನಡೆಸಲು ಸಹಾಯ ಹಸ್ತ ನೀಡಿದ್ದು, ಹೊಸ ಅತ್ಯುತ್ತಮ ಗುಣಮಟ್ಟದ ಕೃತಕ ಕಾಲು ಹಾಕಿಸುವ ಭರವಸೆ ಕೂಡ ನೀಡಿದ್ದರು.
ಕಳೆದೊಂದು ವರ್ಷದಿಂದ ಕೃತಕ ಕಾಲಿನ ನೆರವನ್ನು ಸುಷ್ಮಂತ್ ಎದುರು ನೋಡುತ್ತಿದ್ದಾರೆ. ಆದರ್ಶ್ ಹುಂಚದಕಟ್ಟೆ ಸೇರಿದಂತೆ ಹಲವು ಮಂದಿ ಸಂಕಷ್ಟದ ಕಾಲದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಕೃತಕ ಕಾಲಿನ ನಿರೀಕ್ಷೆಯಲ್ಲಿರುವ ಸುಷ್ಮಂತ್ ತನ್ನ ಬಾಳ ದೋಣಿ ತಾನೇ ನಡೆಸುವ ಕನಸು ಕಾಣುತ್ತಿದ್ದಾರೆ.ಈಗಾಗಲೇ ಸಾಕಷ್ಟು ದಾನಿಗಳ ರಾಜಕಾರಣಿಗಳ ಭರವಸೆ ಹುಸಿಯಾಗಿದ್ದು ತನ್ನ ಕ್ರತಕ ಕಾಲಿನ ನೆರವಿಗೆ ವರ್ಷದಿಂದ ತಿರುಗದ ಜಾಗವೇ ಇಲ್ಲ.
ಒಂದು ಕಡೆ ಹೆಚ್ಚೇನು ಸ್ಥಿತಿವಂತರಲ್ಲದ ಆತನ ಕುಟುಂಬ, ಬೆಳೆದುನಿಂತ ಮಗನ ಈ ದುಸ್ಥಿತಿಗೆ ಪೋಷಕರು ಈಗಲೂ ಕಣ್ಣೀರಾಡುತ್ತಿದ್ದಾರೆ. ಸಾಲ ಮಾಡಿ ಮಗನ ಕಾಲಿಗೆ ಸುಮಾರು ಹದಿನೈದು ಲಕ್ಷ ಖರ್ಚು ಮಾಡಿ ಕೈ ಚೆಲ್ಲಿದ್ದಾರೆ.ದುಡಿದು ತಂದೆ-ತಾಯಿಗಳಿಗೆ ನೆರವಾಗಬೇಕಾದ ವಯಸ್ಸಿನಲ್ಲಿ ಕುಟುಂಬದವರ ಮೇಲೆ ಅವಲಂಬನೆಯಾಗಿದ್ದೇನೆ ಎನ್ನುವ ಕೊರಗು ಆತನನ್ನು ಕಾಡುತ್ತಲೇ ಇದೆ.
ತನ್ನದೇ ಸಾವಿರ ಸಮಸ್ಯೆಗಳಿದ್ದರೂ, ಎಲೆಮರೆಯ ಕಾಯಿಗಳನ್ನು ಗುರುತಿಸುವ ಸವಾಲಿನ ಕೆಲಸಕ್ಕೆ ಕೈ ಹಾಕಿ ಸುಷ್ಮಂತ್ ಈಗ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಗ್ರಾಮೀಣ ಮಟ್ಟದ ಪ್ರೀಮಿಯರ್ ಲೀಗ್ ಮಾದರಿಯ ಟೂರ್ನಿಯನ್ನು ತಾನು ಹುಟ್ಟಿ ಬೆಳೆದ ಊರಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿ ಹಲವರಿಗೆ ಮಾದರಿಯಾಗಿದ್ದಾರೆ.
ಕಾಲಿಲ್ಲದಿದ್ದರೂ ಸುಮ್ಮನೆ ಕುಳಿತುಕೊಳ್ಳದ ಸುಷ್ಮಂತ್:
ಕಳೆದ ತಿಂಗಳು ನಡೆದ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ನಡೆದಾಗ ಅದರ ಯಶಸ್ಸು ಸುಷ್ಮಂತ್ ಅನ್ನು ಬಡಿದೆಬ್ಬಿಸಿದೆ .ತನ್ನದೇ ಸಾರಥ್ಯದಲ್ಲಿ ಕಬಡ್ಡಿ ಟೂರ್ನಿ ನಡೆಸುವ ಬಗ್ಗೆ ಮುಂದಾದರು. ಯುವ ಪ್ರತಿಭೆಗಳ ಬೆಳಕಿಗೆ ತರುವ ಉದ್ದೇಶದಿಂದ ಹೆದ್ದಾರಿಪುರ ಕಬಡ್ಡಿ ಲೀಗ್ ಆಯೋಜಿಸಲು ಆಡಿಯಿಟ್ಟರು. ಮನೆಯಲ್ಲಿಯೇ ಕುಳಿತು ಅಂಕಗಳ ಆಧಾರದಲ್ಲಿ ಹರಾಜಿಗೆ ಆಟಗಾರರ ಪಟ್ಟಿ ತಯಾರಿಸಿ, ತಂಡಗಳಿಗೆ ಮಾಲೀಕರನ್ನು ಹುಡುಕಿ ಸ್ಥಳೀಯ ಪ್ರಾಯೋಜಕರನ್ನು ಸಂಪರ್ಕಿಸಿ ಅಚ್ಚುಕಟ್ಟಾಗಿ ಟೂರ್ನಿಯನ್ನು ನಡೆಸಿ ನೆರೆದ ಹಾಗೂ ಊರಿನ ಜನರ ಎದುರು ಸೈ ಎನಿಸಿಕೊಂಡರು. ಪ್ರೇಕ್ಷಕರು ಹಾಗೂ ಕಬಡ್ಡಿ ಅಭಿಮಾನಿಗಳ ಮನ ಗೆದ್ದರು.
ಸುಷ್ಮಂತ್ ಮಾರ್ಗದರ್ಶನದ ತಂಡ ಚಾಂಪಿಯನ್ :
ಮೊದಲ ಆವೃತ್ತಿಯ ಹೆದ್ದಾರಿಪುರ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಎಂಟು ತಂಡಗಳ ಹೋರಾಟದಲ್ಲಿ ಚಾಂಪಿಯನ್ ಆಗಿದ್ದು ಸುಷ್ಮಂತ್ ಮೆಂಟರ್ ಆಗಿದ್ದ ತಂಡ ಅನ್ನೋದು ವಿಶೇಷ. ಹೊನಲು-ಬೆಳಕಿನ ಈ ಕಬಡ್ಡಿ ಟೂರ್ನಿಯಲ್ಲಿ ಸಮನ್ವಯ ಸ್ಟಾರ್ಸ್ ಕೊಡಸೆ-ಗಿಣಿಸೆ ತಂಡಕ್ಕೆ ಚಾಂಪಿಯನ್ ಪಟ್ಟ ಕೊಡಿಸುವಲ್ಲಿ ಒಂಟಿ ಕಾಲ ಸರದಾರ ಯಶಸ್ವಿಯಾಗಿದ್ದು ತನ್ನಲ್ಲಿನ ಉತ್ಸಾಹ ಅನುಭವ ದಾರೆ ಎರೆದಿದ್ದಾರೆ , ಡ್ರೀಮ್ ಚೇಸರ್ಸ್ ಕಲ್ಲೂರು ರನ್ನರ್ ಅಪ್ ಸ್ಥಾನ ಪಡೆದಿದೆ. ಆದಿಶಕ್ತಿ ಬಾಯ್ಸ್ ಗಾಜಿನಗೋಡು ಹಾಗೂ ಎಸ್ಎಸ್ ಜಿ ತಂಡಗಳು ಮೂರು ಹಾಗೂ ನಾಲ್ಕನೇ ಸ್ಥಾನ ಅಲಂಕರಿಸಿದ್ದವು.
ಛಲಗಾರ ಸುಷ್ಮಂತ್ :
ಟೂರ್ನಿ ಜವಾಬ್ದಾರಿ ಹೊತ್ತು ಜೊತೆಗೆ ಒಂದು ತಂಡದ ಮೆಂಟರ್ ಆಗಿಯೂ ಯಶಸ್ವಿಯಾದ ಸುಷ್ಮಂತ್ ತನ್ನಲ್ಲಿ ಇನ್ನೂ ಸಾಕಷ್ಟು ಕಲೆ ಛಲ ಇದೆ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. ಛಲಗಾರ ಸುಷ್ಮಂತ್ ಗೆ ಆದಷ್ಟು ಬೇಗ ಕ್ರತಕ ಕಾಲು ಲಭಿಸಿ ಮತ್ತೆ ಅಂಕಣದತ್ತ ಮುಖ ಮಾಡಲಿ ಸಾಕಷ್ಟು ಪ್ರತಿಭೆಗೆ ಬೆಳಕಾಗಲಿ ತನ್ನ ಕಾಲ ಮೇಲೆ ತಾನೇ ನಿಲ್ಲುವಂತಾಗಲಿ ಅನ್ನೋದು ನಮ್ಮಾಸೆ ಕೂಡ….
ಹೊಸ ಅನುಭವ ನೀಡಿದ ಟೂರ್ನಿ :
ಕಳೆದ ಮೂರು ವರ್ಷದಿಂದ ಮನೆಯ ಮೂಲೆಯಾಗಿದ್ದ ಪ್ರತಿಭಾವಂತ ಇಂದು ಮತ್ತೆ ಅಂಕಣಕ್ಕೆ ಇಳಿದಿದ್ದಾನೆ.ಈ ಟ್ಯೂರ್ನಿ ಸುಷ್ಮಂತ್ ಬಾಳಿಗೆ ಹೊಸ ಬೆಳಕೊಂದನ್ನು ನೀಡಿದೆ. ಮತ್ತೆ ಗ್ರಾಮೀಣ ಮಟ್ಟದ ಕಬಡ್ಡಿ ಆಟಗಾರರು ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತಾಗಬೇಕು. ಸ್ಥಳೀಯ ಸರ್ಕಾರಗಳು ಕೂಡಾ ಆಟಗಾರರಿಗೆ ಬೇರುಮಟ್ಟದಿಂದಲೇ ಸೂಕ್ತ ಕೋಚಿಂಗ್ ನೀಡಬೇಕು. ಆಗ ಮತ್ತಷ್ಟು ಪ್ರತಿಭಾನ್ವಿತ ಕಬಡ್ಡಿ ಆಟಗಾರರು ಬೆಳಕಿಗೆ ಬರುತ್ತಾರೆ. ಕಬಡ್ಡಿ ನನ್ನ ಕನಸು, ನಾನು ಕಬಡ್ಡಿ ಆಡುವಾಗ ಹಾಗೂ ಕಾಲು ಕಳೆದುಕೊಂಡ ಬಳಿಕ ಸಾಕಷ್ಟು ಜೀವನ ಪಾಠ ಕಲಿತಿದ್ಧೇನೆ – ಸುಷ್ಮಂತ್ ತೊರೆಗದ್ದೆ, ಮಾಜಿ ಕಬಡ್ಡಿ ಆಟಗಾರ.
ಇನ್ನಾದರೂ ಒಂದಿಷ್ಟು ದಾನಿಗಳು ರಾಜಕಾರಣಿಗಳು ಸುಷ್ಮಂತ್ ಕಡೆ ತಿರುಗಿ ನೋಡಲಿ ಆತನ ಬಾಳು ಬೆಳಗಲಿಮತ್ತೆ ಅಂಕಣದಲ್ಲಿ ಸುಷ್ಮಂತ್ ಹೆಸರು ಕೇಳಿ ಬರಲಿ ಅನ್ನೋದು ನಮ್ಮೆಲ್ಲರ ಅಸೆ….
ಬನ್ನಿ ನಾವು ನೀವು ಸುಷ್ಮಂತ್ ಬೆನ್ನಿಗೆ ನಿಲ್ಲೋಣ ನಿಮ್ಮ ಸಣ್ಣ ಸಹಾಯ ಸುಷ್ಮಂತ್ ಬಾಳಿಗೆ ಮತ್ತೆ ಬೆಳಕಾಗಬಹುದು…
ಹೆಚ್ಚಿನ ಮಾಹಿತಿಗೆ…Sushmanth 7899559498 ನಂಬರ್ ಅನ್ನು ಸಂಪರ್ಕಿಸಬಹುದು
ಲೇಖನ :ಪ್ರಭಾಕರ್ ಶೆಟ್ಟಿ ಅಚ್ಲಾಡಿ ಬೆಂಗಳೂರು