ಗಂಗೊಳ್ಳಿ(ಡಿ.18): ಸಾಹಿತ್ಯ ಸೇರಿದಂತೆ ಎಲ್ಲ ರಂಗಗಳಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆಯೂ ಅಪಾರ ಪರಿಶ್ರಮ ಅಡಗಿರುತ್ತದೆ. ಅದನ್ನು ಮೆಚ್ಚಿ ಅಭಿನಂದಿಸುವ ಪರಸ್ಪರ ಸಹಕರಿಸುವ ಮನಸ್ಸುಗಳು ಸಮಾಜದಲ್ಲಿ ಹೆಚ್ಚಬೇಕು ಎಂದು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಗೋವಿಂದ ಬಾಬು ಪೂಜಾರಿ ಯವರು ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಸಂಜೀವ ಪಾರ್ವತಿ ಪ್ರಕಾಶನದ ಆಶ್ರಯದಲ್ಲಿ ಗಂಗೊಳ್ಳಿಯ ಬಿಲ್ಲವರ ಹಿತ ರಕ್ಷಣಾ ವೇದಿಕೆ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಸಹಕಾರದೊಂದಿಗೆ ನಡೆದ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅವರ ನಾಯಿ ನಾನು ಕಥಾ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಖಂಡಿತ ಸಾಧ್ಯವಾಗುತ್ತದೆ. ನರೇಂದ್ರರ ಬರಹಗಳಲ್ಲಿ ಅಂತಹ ಚಿಂತನೆಗಳು ಹೇರಳವಾಗಿ ಸಿಗುತ್ತವೆ ಎಂದು ಅವರು ಹೇಳಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಯಿ ನಾನು ಪುಸ್ತಕದ ಮುಖಪುಟ ಚಿತ್ರ ಕಲಾವಿದೆ ಕೀರ್ತಿ ಭಟ್ ಅವರನ್ನು ಕೂಡ ಗೌರವಿಸಲಾಯಿತು.
ಜಿ.ಎಸ್. ವಿ. ಎಸ್ ಅಸೋಸಿಯೇಷನ್ ಸದಸ್ಯರಾದ ಕೆ. ರಾಮನಾಥ ನಾಯಕ್ ಶುಭ ಹಾರೈಸಿದರು. ಹಿರಿಯ ಸಹಕಾರಿ ಲೇಖಕ ಕೆ ಪುಂಡಲೀಕ ನಾಯಕ್ ಪುಸ್ತಕವನ್ನು ಪರಿಚಯಿಸಿದರು. ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ ಉಪಸ್ಥಿತರಿದ್ದರು. ಲೇಖಕ ನರೇಂದ್ರ ಎಸ್ ಗಂಗೊಳ್ಳಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಸಿದರು. ಸನ್ನಿಧಿ ಹೊಳ್ಳ ಪ್ರಾರ್ಥಿಸಿದರು. ದೀಕ್ಷಾ ಮತ್ತು ರಕ್ಷಿತಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಮೀಕ್ಷಾ ಡಿ . ನಾಯ್ಕ್ ವಂದಿಸಿದರು.