ಕುಂದಾಪುರ (ಜ,04): ಉದ್ಯಮಿ ಹಾಗೂ ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿಯವರು ಅಶಕ್ತರಿಗೆ ಸಹಾಯ ಹಸ್ತ ಚಾಚುವ ಹಿನ್ನೆಲೆಯಲ್ಲಿ ಸ್ಥಾಪಿಸಿದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ ಇದರ ವತಿಯಿಂದ ಈಗಾಗಲೇ ಹಲವಾರು ಬಡಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದು ,ಇದರ ಮುಂದುವರಿದ ಭಾಗವಾಗಿ ಅಪಘಾತವಾಗಿ ಕಾಲು ಮುರಿದುಕೊಂಡು ಮನೆ ನಿರ್ಮಿಸುವ ಆಸೆಯಿಂದ ವಂಚಿತರಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ರಾಜು ಮರವಂತೆ ಇವರಿಗೆ ಮನೆ ನಿರ್ಮಿಸಿ ಹಸ್ತತರಿಸುವ ಕಾರ್ಯಕ್ರಮ ವರಲಕ್ಷ್ಮೀ ನಿಲಯದ ಪ್ರವೇಶೋತ್ಸವ ಇದೇ ಜನವರಿ 5 ರ ಮಧ್ಯಾಹ್ನ 2.30ಕ್ಕೆ ರಾಜು ಮರವಂತೆ ಗಾಂಧಿನಗರ ಇವರ ಮನೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ,ವಿಶ್ವ ಹಿಂದೂ ಪರಿಷತ್ ಪ್ರಾಂತ್ಯದ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಗೌರಿಗದ್ದೆ ಮಠದ ಶ್ರೀ ವಿನಯ್ ಗುರುಜಿ ,ಅಭಿನವ್ ಹಾಲಾಶ್ರೀ,ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಪ್ರಕಾಶ ಕುಕ್ಕೆಹಳ್ಳಿ ಹಾಗೂ ಚೈತ್ರಾ ಕುಂದಾಪುರ ಉಪಸ್ಥಿತರಿರಲಿದ್ದಾರೆ.
ಡಾ.ಗೋವಿಂದ ಬಾಬು ಪೂಜಾರಿಯವರು ನಿರ್ಮಿಸಿ ಕೊಡುತ್ತಿರುವ 11ನೇ ಮನೆ ಇದಾಗಿದ್ದು , ಇವರ ಮಾನವೀಯ ನೆಲೆಯ ಸಮಾಜ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತ ವಾಗಿದೆ.