ಕುಂದಾಪುರ(ಫೆ.28): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ ಯೋಗ ತರಬೇತಿ ಕಾರ್ಯಾಗಾರದಲ್ಲಿ ಆಯುಷ್ಧಾಮ ಆಸ್ಪತ್ರೆಯ ವೈದ್ಯಾಧಿಕಾರಿ ಡಾI ಸೋನಿ ಡಿಕೋಸ್ಟರವರು ಆಗಮಿಸಿ, ಮನಸ್ಸು ಮತ್ತು ದೇಹವನ್ನು ಸರಿಯಾಗಿ ಒಂದೆಡೆ ಕೇಂದ್ರೀಕರಿಸಲು ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಬಹಳ ಸಹಕಾರಿ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಇಂದಿನ ಒತ್ತಡದ ಬದುಕಿನ ನಡುವೆ ಒಂದಿಷ್ಟು ಹೊತ್ತು ಈ ಚಟುವಟಿಕೆಗಳಿಗೆ ಮೀಸಲಾಗಿರಿಸಿದಾಗ ಮಾನಸಿಕ ಸ್ಥಿರತೆ, ಜೊತೆಗೆ ತಮ್ಮ ಜ್ಞಾಪಕ ಶಕ್ತಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ವಿವಿಧ ಆಸನಗಳು ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ವಹಿಸಿಕೊಂಡಿದ್ದರು. ಉಪಪ್ರಾಂಶುಪಾಲೆ ಮತ್ತು ಮುಖ್ಯ ಶಿಕ್ಷಕಿ ಶುಭಾ ಕೆ. ಎನ್. ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಆಶಾಲತಾ ಎಸ್. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.