ಗರ್ಭಪೀಠದಿಂದ ಮರಣಪೀಠದೆಡೆಗೆ ಸಾಗುವ ಮಾನವನ ಬದುಕನ್ನು ಕೆದುಕಿದಾಗ ನಡುಕ ಹುಟ್ಟಿಸುವ ನಿಗೂಢತೆ ಅಡಕವಾಗಿರುವುದು ಗೋಚರಿಸದಿರದು. ಸೃಷ್ಠಿಯ ಪ್ರೇಮಾಂಕುರದ ಪರಾಕಾಷ್ಠೆಯಲ್ಲಿ ಹೊರಬರುತ್ತಲೇ ಗರ್ಭಕೋಶದಲ್ಲಿ ತನ್ನ ಆಸ್ತಿತ್ವಕ್ಕಾಗಿ ಜೀವಾಣುರೂಪದಲ್ಲೇ ಕಾದಾಡುವ ಪರಿ ಕೌತುಕವಾದುದು. ಸಾವಿರ ಸಂಖ್ಯೆಯ ಸಹವರ್ತಿಗಳೊಡನೆ ಅಂಜದೆ ಅಳುಕದೆ ಕಾದಾಡಿ ಜಯಸಿದ ಶುಕ್ಲವೊಂದು ಶೋಣಿತದೊಂದಿಗೆ ಒಂದಾಗಿ ಗರ್ಭ ಪೀಠದಲ್ಲಿ ಸ್ಥಿತವಾಗಿ ಬೆಳೆದು ಹೊರ ಬರುವ ಮಾನವನ ಜನನವೇ ಚಿತ್ರ-ವಿಚಿತ್ರವಾದುದು.
ಗರ್ಭಲೋಕದಲ್ಲಿ ಅಂತರ್ಮುಖಿಯಾಗಿ ಸೃಷ್ಟಿಯ ಪರಿಪೂರ್ಣತೆಯನ್ನು ಸಿದ್ದಿಸಿಕೊಂಡು ಹೊರಜಗತ್ತಿಗೆ ದೃಷ್ಟಿ ಹಾಯಿಸುವ ಮನವ ಶಿಶುವಿನಲ್ಲಿ ಎಷ್ಟೊಂದು ಅದ್ಭುತ ಶಕ್ತಿ ಆಡಗಿದೆಯಲ್ಲವೆ? ಜನನವೆಂಬ ದಡದಿಂದ ಜಿಗಿದು ಬದುಕೆಂಬ ಸಾಗರದಲ್ಲಿ ಈಜಿ ಮರಣವೆಂಬ ಮತ್ತೊಂದು ದಡ ಸೇರುವ ಮನುಜನ ಇಹಲೋಕದ ಜೀವನಯಾತ್ರೆಗೆ ಸರಿಸಾಟಿಯಾಗುವ ಯಾತ್ರೆ ಬೇರೊಂದಿದೆಯೆ?
ಎರಡು ಜೀವಿಯ ಜೀವಶಕ್ತಿಯನ್ನು ಒಂದೆಡೆ ಸೇರಿಸಿ ಆತ್ಮಶಕ್ತಿಯನ್ನು ನೀಡಿ ಸೃಷ್ಟಿಯ ಕಲೆಯನ್ನು ಅನಾವರಣಗೊಳಿಸುವ ಪರಮಾತ್ಮ ಒಂದಡೆ…..ಇರಲು ಆಶ್ರಯ ನೀಡಿ ಬದುಕಿ ಬೆಳೆಯಲು ಆಹಾರ ಶಕ್ತಿ ನೀಡಿ, ಪ್ರಾಣವನ್ನೇ ಪಣವಾಗಿ ಭದ್ರತೆ ನೀಡಿದ ಮಮತೆಯ ತೊಟ್ಟಿಲೆಂಬ ತಾಯಿ ಒಡಲನ್ನೇ ತುಳಿದು ಹೊರಬರುವ ಮಾನವ ಆತ್ಮ ಇನ್ನೊಂದೆಡೆ. ಒಡಲಾಳದಲ್ಲಿ ನೋವುಂಡು ಬೆಳೆಸಿದ ಮಾತೃಹೃದಯ ತುಳಿದು ಹೊರಬಂದು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಅಳುವ ಮುದ್ದು ಕಂದನ ಅಪ್ಪಿ ಮುತ್ತಿಕ್ಕಿ ತನ್ನೊಳಗಿನ ಅಮೃತ ಉಣಬಡಿಸುವ ತಾಯ್ತನ ಮತ್ತೊಂದೆಡೆ…..
ತಾಯಿಯ ಒಡಲಿನಿಂದ ಭೂ ತಾಯಿಯ ಮಡಿಲಿಗೆ ಕಣ್ಮುಚ್ಚಿ ಜಿಗಿದು, ಕ್ಷಣಕ್ಷಣದಲ್ಲಿ ಅಬ್ಬರಿಸಿ ಸಿಡಿದೆಳುವ ನಿಗೂಢ ಶಕ್ತಿಯ ಪ್ರತ್ಯಕ್ಷ ರೂಪವೆಂದೆನಿಸಿದ ಪಂಚಭೂತಗಳ ನಡುವೆ ತನ್ನ ಬದುಕನ್ನೇ ಸವಾಲಾಗಿ ಒಡ್ಡುವ ಮಾನವನಿಗೆ ಸಾಹಸಿ ಎನ್ನಬೇಕೋ ದುಸ್ಸಾಹಸಿ ಎನ್ನಬೇಕೋ ತಿಳಿಯದು.
ಗರ್ಭದಲ್ಲಿ ತನ್ನ ಅಸ್ತಿತ್ವಕ್ಕಾಗಿ ಕಾದಾಡಿ ಅಳುತ್ತಲೇ ಹೊರಬಂದು ಜೀವಜಗತ್ತಿನಲ್ಲೇ ತಾನೇ ಪರಮ ಶ್ರೇಷ್ಟವೆಂದು ಸ್ವಯಂ ಘೋಷಿಸಿಕೊಂಡು ಜಗತ್ತನ್ನೇ ಆಳುವ ಕನಸು ಕಾಣುವ ಮಾನವನನ್ನು ಹುಟ್ಟು ಹೋರಾಟಗಾರನೆನ್ನಬೇಕೋ ಇಲ್ಲಾ ಜೀವಜಗತ್ತಿನ ಪರಮ ಸ್ವಾರ್ಥಿ ಎನ್ನಬೇಕೋ ತಿಳಿಯದು.
ಬದುಕಿಗಾಗಿ ತುತ್ತಿನ ಬೆನ್ನಟ್ಟಿ ಹೊರಟ ಜೀವಜಗತ್ತಿನಲ್ಲಿ ಒಂದು ಜೀವಿ ಮತ್ತೊಂದು ಜೀವಿಯನ್ನು ತಿಂದು ಜೀವಿಸುವುದು ಪ್ರಕೃತಿಯ ನಿಯಮದಂತಿದೆ.ಆದರೆ ಇದಕ್ಕೆ ವ್ಯತಿರಕ್ತವಾಗಿ ತುತ್ತಿನ ಜೊತೆಗೆ ಬೇರೆ ಬದುಕಿನ ಕತ್ತು ಹಿಸುಕಿ ಸ್ವಾರ್ಥ ಸಾಮ್ರಾಜ್ಯ ಕಟ್ಟುವ ಮಾನವ ಸಾಧಿಸುವುದಾದರೂ ಏನು ಎಂಬುದೇ ಯಕ್ಷ ಪ್ರಶ್ನೆ.
ಲೇಖನ :ಶ್ರೀ ಉದಯಕುಮಾರ್
ಹಟ್ಟಿಯಂಗಡಿ