ಕುಂದಾಪುರ (ಮಾ, 22): ಸಮಾಜದಲ್ಲಿ ಒಂದಷ್ಟು ಜನ ಬೇರೆ ಬೇರೆ ಕಾರಣಗಳಿಂದ ನೋವನ್ನು ಅನುಭವಿಸುತ್ತಿರುತ್ತಾರೆ. ಅಂತವರ ನೋವಿಗೆ ಕಾರಣವಾದ ಸಂಗತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಸ್ವಾಂತನದ ಹಿತ ಮಾತುಗಳನ್ನು ಹೇಳಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದೆ.
ನೊಂದವರ ನೋವುಗಳನ್ನು ಸಾಕ್ಷಿ ಇಲ್ಲದೆ ಅರ್ಥ ಮಾಡಿಕೊಳ್ಳುವುದು ಸಂಘ-ಸಂಸ್ಥೆಗಳ ಬಹುದೊಡ್ಡ ಜವಾಬ್ದಾರಿ ಕೂಡ ಆಗಿದೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಗ್ರಹ ಚೇತನ ಮತ್ತು ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯ್ದ ಫಲಾನುಭವಿಗಳಿಗೆ ಮಾರ್ಚ್ 22 ರ ಬುಧವಾರ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ಚೆಕ್ ವಿತರಿಸುವ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂಘದ ಮಾರ್ಗದರ್ಶಕರು, ಹಿರಿಯರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷರಾದ ಮೊಳಹಳ್ಳಿ ಜಯಶೀಲ ಶೆಟ್ಟಿಯವರು ವಿವಿಧ ಫಲಾನುಭವಿಗಳಿಗೆ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳ ಚೆಕ್ ವಿತರಿಸಿ ಕುಂದಾಪುರ ತಾಲೂಕು ಯುವ ಬಂಟರ ಸಂಘ ದಶಮ ಸಂಭ್ರಮದ ಸಂದರ್ಭದಲ್ಲಿ ಹಾಕಿಕೊಂಡ ಯೋಜನೆಗಳು ಅತ್ಯದ್ಭುತವಾದವುಗಳು. ಯುವ ಬಂಟರ ಸಂಘ ಜಾತೀಯತೆಯನ್ನೂ ಮೀರಿ ಇತರ ಸಮಾಜ ಬಾಂಧವರಿಗೂ ಆರ್ಥಿಕ ಸಹಕಾರ ನೀಡುತ್ತಿರುವುದು ಬಹಳ ಸಂತೋಷದ ವಿಚಾರ. ಇವರು ನಡೆಸಿಕೊಂಡು ಬರುತ್ತಿರುವ ಪ್ರತಿಯೊಂದು ಸಮಾಜ ಸೇವಾ ಚಟುವಟಿಕೆಗಳಿಗೆ ಆರ್ಥಿಕ ಸಹಕಾರವನ್ನು ನೀಡುದರೊಂದಿಗೆ ಅವರ ಸೇವಾ ಕಾರ್ಯದಲ್ಲಿ ನಾನು ಸಹ ಕೈ ಜೋಡಿಸುತ್ತೇನೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನಿತೀಶ್ ಶೆಟ್ಟಿ, ಬಸ್ರೂರು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ವಕ್ವಾಡಿ ಭಾಸ್ಕರ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಶ್ರೀ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಶ್ರೀ ಉದಯ್ ಕುಮಾರ್ ಶೆಟ್ಟಿ ಹೊಸಂಗಡಿ ಶ್ರೀ ಸುರೇಂದ್ರ ಶೆಟ್ಟಿ ಗುಲ್ವಾಡಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಶ್ರೀ ಚೇತನ್ ಕುಮಾರ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.