ಕುಂದಾಪುರ(ಜು,03): ಸ್ವಚ್ಚತೆಯೆ ಸರ್ವೋಚ್ಛತೆ ಕಾರ್ಯಕ್ರಮದಡಿಯಲ್ಲಿ ಸೇವಾ ಚೇತನ ಟ್ರಸ್ಟ್ ಮೂಡುಬಗೆ ವತಿಯಿಂದ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಮೂಡುಬಗೆಯ ಸಣ್ಣ ಊರಿನಲ್ಲಿ ದೊಡ್ಡ ಉದ್ಧೇಶ ಇರಿಸಿಕೊಂಡು ಆರಂಭವಾದ ಸಮಾನ ಮನಸ್ಕರ ತಂಡವೊಂದು ಜನಸ್ನೇಹಿ ಹಾಗೂ ಜನಪರ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದುಕೊಂಡಿದೆ.
ನಮ್ಮೂರ ಸಂಭ್ರಮ ಎಂಬ ಸಾಮಾಜಿಕ- ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಊರಿನ ಹೆಸರನ್ನು ರಾಜ್ಯಾದ್ಯಂತ ಪಸರಿಸಿದ ಹೆಮ್ಮ ಸೇವಾ ಚೇತನ ಟ್ರಸ್ಟ್. ಎರಡು ವರ್ಷಗಳಿಂದ ನಿರಂತರ ಸಮಾಜಮುಖಿ ಕೆಲಸಗಳನ್ನು ಮಾಡಿ ಊರ ಜನರ ಮನೆ ಮಾತಾಗಿ ಉಳಿದಿದೆ. ಅದರಲ್ಲೂ ವನಜ ಪೂಜಾರ್ತಿ ಯವರ ಕನಸಿನ ಮನೆ ಅಯೋಧ್ಯ ನಮ್ಮ ಟ್ರಸ್ಟ್ ನ ಹೆಸರನ್ನು ಚಿರಸ್ಥಾಯಿಗೊಳಿಸಿದ ಸಾಧನೆ.
ಈ ವರ್ಷವೂ ಕೂಡ ಅದೇ ಘನ ಉದ್ದೇಶ ಇಟ್ಟುಕೊಂಡು, ಈ ವರ್ಷದ ಪ್ರಥಮ ಕಾರ್ಯಕ್ರಮದ ಶುಭಾರಂಭ ಮಾಡಿದೆ . ಮೂಡುಬಗೆಯಲ್ಲಿರುವ ಎಲ್ಲಾ ಬಸ್ ಸ್ಟಾಂಡ್ ಗಳು ಸರಿಯಾದ ನಿರ್ವಹಣೆ ಯಿಲ್ಲದೆ, ಪ್ರಯಾಣಿಕರ ನಿಲುಗಡೆಗೆ ಯೋಗ್ಯವಲ್ಲದ ರೀತಿಯಲ್ಲಿ ಕೆಸರು ಮಣ್ಣುಗಳಿಂದ ತುಂಬಿಕೊಂಡು ರಸ್ತೆಯ ಮೇಲಿನ ನೀರು ನೇರವಾಗಿ ಬಸ್ ಸ್ಟಾಂಡ್ ಗೆ ನುಗ್ಗುತ್ತಿದ್ದು, ಪ್ರಯಾಣಿಕರು ನಿಲ್ಲಲು ಅಸಹ್ಯ ಪಡುವ ರೀತಿಯಲ್ಲಿತ್ತು, ಜೊತೆಗೆ ಗುಟ್ಕಾ ಸಿಗರೇಟ್ ಹಾಗೂ ಮಧ್ಯಪಾನ ಮಾಡಿದ ಪ್ಯಾಕ್ ಅದರ ಅವಶೇಷಗಳು ತುಂಬಿ ಬಸ್ ಸ್ಟಾಂಡ್ ಒಳಗೆ ಹೋಗಲು ಹಿಂಜರಿಕೆ ಬರುವಂತಿತ್ತು. ಕೆಲವು ಹಂಚು ಒಡೆದು ಮಳೆ ನೀರು ಒಳಗಿನ ಆಸನದ ಮೇಲೆ ಬಿದ್ದು ಕುಳಿತು ಕೊಳ್ಳಲಾಗದ ರೀತಿಯಲ್ಲಿತ್ತು. ಒಟ್ಟಾರೆ ಬಸ್ ನಿಲ್ದಾಣ ಎಂದರೆ ಅಸಹ್ಯಕರವಾಗಿತ್ತು. ಜನ ಮಳೆ ಬಂದಾಗ ಬಸ್ ನಿಲ್ದಾಣದ ಒಳಗೆ ನಿಲ್ಲುವುದಕ್ಕಿಂತ ಕೊಡೆ ಹಿಡಿದು ಹೊರಗೆ ನಿಲ್ಲುವಂತಿತ್ತು. ಇದನ್ನು ಗಮನಿಸಿ ,ಮಳೆ ಬರುವ ಈ ಸಮಯದಲ್ಲಿ ಬಸ್ ಸ್ಟಾಂಡ್ ನ ಅಗತ್ಯತೆ ಮತ್ತು ಅದರ ಅವ್ಯವಸ್ಥೆ ಯನ್ನು ನೋಡಿ ಮೊದಲ ಕಾರ್ಯಕ್ರಮವಾಗಿ —ನಮ್ಮೂರ ಬಸ್ ಸ್ಟಾಂಡ್ ಸ್ವಚ್ಚತೆ ಮಾಡಿ—– ಸ್ವಚ್ಛ ಬಸ್ ಸ್ಟಾಂಡ್ ಶ್ರೇಷ್ಠ ಬಸ್ ಸ್ಟಾಂಡ್—- ಎನ್ನುವ ಧ್ಯೇಯ ವಾಕ್ಯದೊಂದಿಗೆ ಸ್ವಚ್ವತೆಯೇ ಸರ್ವೋಚ್ಛತೆ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುಲಾಯಿತು.
ಇದರ ಪ್ರಕಾರ ಮೂಡುಬಗೆ ಊರಿನ ಎಲ್ಲಾ ಬಸ್ ಸ್ಟಾಂಡ್ ಅನ್ನು ಸ್ವಚ್ಚ ನೀರು ಹಾಕಿ ತೊಳೆದು , ಹಾಳಾಗಿರುವುದನ್ನು ಸರಿಮಾಡಿ,ಇರುವ ಅಸಹ್ಯಕಾರಿ ಕಸಗಳನ್ನು ವಿಲೇವಾರಿ ಮಾಡಿ, ಯಾತ್ರಿಕರಿಗೆ ಬಸ್ಸಿಗೆ ಕಾಯಲು ಯೋಗ್ಯಕರ ಎನಿಸುವಂತೆ ಸ್ವಚ್ಚ ಗೊಳಿಸಿದ್ದು ಅನೇಕ ಜನರ ಪ್ರಶಂಸೆಗೆ ಪಾತ್ರವಾಯಿತು.
ಇನ್ನು ಮುಂದಿನ ಗುರಿಯಾಗಿ ಈ ಬಸ್ ಸ್ಟಾಂಡ್ ಗೆ ಹೊಸ ಮೆರುಗನ್ನು ನೀಡುವುದು , ಇದರನ್ವಯ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಿದ್ದು, ಇನ್ನೂ ಈ ಊರಲ್ಲಿ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆಯುವ ಪ್ರಯತ್ನದಲ್ಲಿ ಸೇವಾ ಚೇತನ ಟ್ರಸ್ಟ್ ಸದಾ ಇರಲಿದೆ ಎಂದು ಟ್ರಸ್ಟ್ ನ ಸದಸ್ಯರು ತಿಳಿಸಿದ್ದಾರೆ.