ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯ ಪ್ರಶಸ್ತಿ ಪುರಸ್ಕ್ರತ ಶ್ರೀಮತಿ ಫಿಲೋಮಿನಾ ರವರು ಉಡುಪಿ ಜಿಲ್ಲೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ 2014 – 15 ನೇ ಸಾಲಿನಲ್ಲಿ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಿದ ಕರ್ನಾಟಕ ಸರ್ಕಾರ ಇವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿರುತ್ತದೆ. ಅಂಗನವಾಡಿ ಕಾರ್ಯಕರ್ತೆಯಾಗಿ 26 ವರ್ಷಗಳಿಂದ ಗಂಗೊಳ್ಳಿ ಗ್ರಾಮದ ದಾಕುಹಿತ್ಲು ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜ ಸೇವಕಿಯಾಗಿ, ಮಹಿಳಾ ಮಿತ್ರರಾಗಿರುವ ಇವರು ಮಾರಿಕಾಂಬಾ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿದ್ದಾರೆ.