ಉಡುಪಿ (ಸೆ,28): 2006 ರ ಏಪ್ರಿಲ್ 01 ರ ಪೂರ್ವದಲ್ಲಿ ಹಾಗೂ ನಂತರ ಸೇವೆಗೆ ಸೇರಿ ಅನುದಾನಕ್ಕೆ ಒಳಪಟ್ಟ ನೌಕರರಿಗೆ ನೂತನ ಪಿಂಚಣಿ ಯೋಜನೆ ಅಥವಾ ನಿಶ್ಚಿತ ಪಿಂಚಣಿ ಯೋಜನೆ ಎನ್ನುವ ಯಾವುದೇ ಸೌಲಭ್ಯ ಇರುವುದಿಲ್ಲ. ಈ ವ್ಯವಸ್ಥೆಯಿಂದ ಈಗಾಗಲೇ 25 ರಿಂದ 30 ವರ್ಷಗಳವರೆಗೆ ಸೇವೆ ಸಲ್ಲಿಸಿದ ನೌಕರರು ವಯೋನಿವೃತ್ತಿ ಸಮಯದಲ್ಲಿ ಬರಿಗೈಯಲ್ಲಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೃತ್ತಿ ಹೊಂದಿದ ಅನೇಕ ನೌಕರರು ಮಾನಸಿಕ ತೊಂದರೆಗೆ ಒಳಗಾಗಿ ಸಾವಿಗೆ ಶರಣಾಗಿದ್ದಾರೆ.
ಆದುದರಿಂದ ಅನುದಾನರಹಿತ ಅವಧಿಯ ಸೇವೆಯನ್ನು ಪರಿಗಣಿಸಿ ಪಿಂಚಣಿ ವ್ಯವಸ್ಥೆ ದೊರಕಿಸಿಕೊಡುವಂತೆ ಮುಖ್ಯಮಂತ್ರಿಗಳ ಜೊತೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಉಡುಪಿ ಜಿಲ್ಲಾ ಅನುದಾನಿತ ಶಾಲಾ ಕಾಲೇಜುಗಳ ಸಂಘದ ವತಿಯಿಂದ ಉಡುಪಿ ಜಿಲ್ಲಾ ಅನುದಾನಿತ ಪಿಂಚಣಿ ವಂಚಿತ ಶಾಲಾ ಕಾಲೇಜುಗಳ ಸಂಘದ ಅಧ್ಯಕ್ಷರಾದ ಪ್ರದೀಪ್ ಕೆ ಶೆಟ್ಟಿಯವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಯಿತು.
ಇಡೀ ರಾಜ್ಯದಲ್ಲಿ ಇರುವ ಈ ಜ್ವಲಂತ ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆಯನ್ನು ಸಚಿವೆ ನೀಡಿದರು. ಮನವಿ ಸಲ್ಲಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾಕರ ಭಂಡಿ, ಕೋಶಾಧಿಕಾರಿಗಳಾದ ಸಂಜೀವ ಪೂಜಾರಿ, ಕಾರ್ಕಳ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ ಭಟ್, ಉಡುಪಿ ತಾಲೂಕು ಅಧ್ಯಕ್ಷರಾದ ಜಗದೀಶ್ ನಾಯ್ಕ್ ಉಪಸ್ಥಿತರಿದ್ದರು.