ಕುಂದಾಪುರ ಪರಿಸರದಲ್ಲಿ ಸಾಕಷ್ಟು ಜನಪದ ಹಾಡುಗಳು ಮೌಖಿಕ ರೂಪದಲ್ಲಿ ಕಾಣಸಿಗುತ್ತದೆ. ಜನಪದ ಹಾಡುಗಳು ದೈವ-ದೇವರುಗಳ ಆರಾಧನೆ ಭಾಗವಾಗಿರುವುದರ ಜೊತೆಗೆ ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಆಧುನಿಕತೆಯ ಭರಾಟೆಯಲ್ಲಿ ಅದೆಷ್ಟೋ ಜನಪದ ಹಾಡುಗಳು ನಶಿಸಿ ಹೋಗುತ್ತಿದ್ದರೂ ಅವುಗಳನ್ನು ಆರಾಧನೆಯ ನೆಲೆಯಲ್ಲಿ ಕಾಪಾಡಿಕೊಂಡು ಬರುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಆ ನಿಟ್ಟಿನಲ್ಲಿ ಕುಂದಾಪುರ ತಾಲೂಕಿನಲ್ಲಿ ಶ್ರೀ ರಾಮ ಭಜನಾ ಮಂಡಳಿ -ಬೀಜಾಡಿ ಗೋಪಾಡಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು ಅತಿಶಯೋಕ್ತಿಯಲ್ಲ. ಸಾಂಪ್ರದಾಯಿಕ ಭಜನೆ, ಕುಣಿತ ಭಜನೆ, ಕೋಲಾಟ, ಹೌಂದರಾಯನ ವಾಲ್ಗ ಹೀಗೆ ವಿವಿಧ ಪ್ರಕಾರದ ಜನಪದ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಈ ಭಜನಾ ಮಂಡಳಿಯ ಸದಸ್ಯರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ದಿವಂಗತ ಭಜನೆ ರಾಮಣ್ಣನವರ ಪರಿಶ್ರಮ ಹಾಗೂ ಮಾರ್ಗದರ್ಶನ ಈ ಭಜನಾ ಮಂಡಳಿ ಮೇಲೆ ಅಪಾರ ಪ್ರಭಾವ ಬೀರಿದೆ. ಆ ನಿಟ್ಟಿನಲ್ಲಿ ಪ್ರಸ್ತುತ ಶ್ರೀ ರಾಮ ಭಜನಾ ಮಂಡಳಿ ಬೀಜಾಡಿ ಗೋಪಾಡಿ ಇದರ ಸದಸ್ಯರು ಜನಪದ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ.
ಹೌಂದರಾಯನ ವಾಲ್ಗ ಇದು ಕುಂದಾಪುರದ ಕರಾವಳಿ ಭಾಗದ ಜನಪದ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ಜನರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ. ತುಳಸಿ ಕಟ್ಟೆಯನ್ನೇ ಕೇಂದ್ರವನ್ನಾಗಿಸಿಕೊಂಡು ಜಾತ್ರೆಯ ಸಂಧರ್ಭದಲ್ಲಿ, ತಿರುಪತಿ ಯಾತ್ರೆಗೆ ಹೋಗಿ ಬಂದ ಸಂಧರ್ಭದಲ್ಲಿ, ಸಾವಿರ ಹಣ್ಣಿನ ವಸಂತ ಆಚರಿಸುವ ಸಂಧರ್ಭದಲ್ಲಿ ಸಮುದ್ರ ರಾಜ (ಕುಬೇರ)ರನ ಒಡ್ಡೋಲಗವನ್ನು ವರ್ಣಿಸುವ ಈ ಕುಣಿತ ನೋಡುಗರಿಗೆ ಬಲು ವಿಶೇಷ.
ಇತ್ತೀಚೆಗೆ ಕುಂದಾಪುರ ತಾಲೂಕಿನ ಗೋಪಾಡಿ ಶ್ರೀ ಚಿಕ್ಕು ಅಮ್ಮನವರ ಪರಿವಾರ ದೈವಸ್ಥಾನದ ಜಾತ್ರೆ ಪ್ರಯುಕ್ತ ಶ್ರೀ ರಾಮ ಭಜನಾ ಮಂಡಳಿ ಬೀಜಾಡಿ ಗೋಪಾಡಿ ಯವರು ಪ್ರಸ್ತುತಪಡಿಸಿದ ಹೌಂದರಾಯನ ವಾಲ್ಗ ವಿಡಿಯೋ ತುಣುಕು ನಿಮ್ಮ ಮುಂದೆ.