ಗಂಗೊಳ್ಳಿ(ಡಿ.22): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ “ಮೃಡ” – ಒಂದು ಸತ್ಯದ ಕಥೆ ನಾಟಕ ತನ್ನ ಭಿನ್ನವೆನಿಸುವ ಕಥಾ ವಸ್ತು ಮತ್ತು ವಿಶೇಷ ಪ್ರಸ್ತುತಿಯಿಂದ ಗಮನ ಸೆಳೆಯಿತು.
ಮರಣ ಹೊಂದುವ ಮೊದಲು ಶಿವನನ್ನು ನೋಡಬೇಕು ಆ ಮೂಲಕ ಜನರ ಕಣ್ಣಲ್ಲಿ ಆರಾಧಿಸಲ್ಪಡಬೇಕು ಎನ್ನುವ ಬಯಕೆಯೊಂದಿಗೆ ಶಿವನನ್ನು ನೋಡ ಹೊರಟ ಚಾರುಕೀರ್ತಿ ಎನ್ನುವ ಧನಿಕ ಅಂತಿಮವಾಗಿ ತನ್ನ ತಪ್ಪುಗಳಿಗೆ ಅಹಂಕಾರಕ್ಕೆ ಬಲಿಯಾಗುವ ಕಥೆಯನ್ನು ಹೊಂದಿರುವ ಈ ನಾಟಕದಲ್ಲಿ ಕ್ಷಮಾ ಆಚಾರ್ಯ, ವೆಲಿಟಾ ಲೋಬೊ, ಸನ್ನಿಧಿ ಕರ್ಣಿಕ್, ಭೂಮಿಕಾ ಪೂಜಾರಿ, ದಾಕ್ಷಾಯಿಣಿ ಖಾರ್ವಿ, ಶ್ರೀಲಕ್ಷ್ಮಿ, ಖುಷಿ ಸೇರಿದಂತೆ ಒಟ್ಟು 36 ವಿದ್ಯಾರ್ಥಿಗಳು ಅಭಿನಯಿಸಿದ್ದರು. ಹಿಮ್ಮೇಳದಲ್ಲಿ ವಿದ್ಯಾರ್ಥಿಗಳಾದ ವೀರೇಶ್, ಸುಜನ್ ಮತ್ತು ಕಾರ್ತಿಕ್ ಸಹಕರಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದರು.