ಕುಂದಾಪುರ (ಎ.4) : ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ – ತಿರ್ಗ್ತ ಕಲುದ್ ಎನ್ನುವುದು ಒಂದು ವಿಶೇಷ, ವಿಭಿನ್ನ ಕಾರ್ಯಕ್ರಮ. ನಾವು ಎಲ್ಲಿಯೇ ಹೋದರೂ ನಮ್ಮ ಮಣ್ಣಿನ ಸೊಗಡನ್ನು ಮತ್ತು ಸಂಸ್ಕೃತಿಯನ್ನು ಬಿಡದೇ ಬೆಳೆಸಬೇಕು ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ, ಸಾಹಿತಿ ಡಾ. ಎ. ಎಸ್. ಎನ್. ಹೆಬ್ಬಾರ್ ಹೇಳಿದರು.
ಅವರು ಕುಂದಾಪುರದ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಗಳು ಹಮ್ಮಿಕೊಂಡ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್– ತಿರ್ಗ್ತ ಕಲುದ್ ಎನ್ನುವ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ಹಳ್ಳಿ ಶೈಲಿಯ ‘ಹೊಲಿರಾಶಿ’ ಪೂಜೆಯೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ತಮ್ಮ ಬಾಲ್ಯದ ಜೀವನಾನುಭವವನ್ನು ಹಂಚಿಕೊಂಡರು.
ಸಂಸ್ಥೆಯ ಸಂಚಾಲಕರೂ, ಅಧ್ಯಕ್ಷರೂ ಆಗಿರುವ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಮಾತನಾಡುತ್ತಾ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳು ಪ್ರತಿಯೊಬ್ಬ ಮಕ್ಕಳಿಗೂ ಈ ಶಿಬಿರದ ಮೂಲಕ ಸಿಗುವಂತಾಗಲು ಎಂದರು. ಇನ್ನೋರ್ವ ಅತಿಥಿ, ಬಾಲ ಕಲಾವಿದೆ ಎಚ್. ಎಮ್. ಎಮ್. ಶಾಲೆಯ ವಿದ್ಯಾರ್ಥಿನಿ ಧ್ವನಿ ಕಿರಣ್ ತಮ್ಮ ಕಳೆದ ವರ್ಷದ ಶಿಬಿರದ ಸವಿನೆನಪುಗಳನ್ನು ಮೆಲುಕು ಹಾಕಿದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ. ಸೀತಾರಾಮ ನಕ್ಕತ್ತಾಯ ಇವರು ಮಾತನಾಡುತ್ತಾ ಹಳ್ಳಿಯ ಸೊಗಡು ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಪೂರ್ಣ ಸಿಗುವಂತಾಗಲಿ ಎಂದು ಆಶಿಸಿದರು.
ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ರವರು ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಕಾರ್ಯಕ್ರಮದ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ಸವಿಸ್ತಾರವಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಕ್ಷಕ ಶ್ರೀನಿವಾಸರವರು ಶಿಬಿರದ 12 ದಿನಗಳ ಕಾರ್ಯಚಟುವಟಿಕೆಗಳ ಪಕ್ಷಿನೋಟ ನೀಡಿದರು. ಪ್ರೌಢ ಶಾಲೆಯ ಸಹಾಯಕ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕೇತರ ವರ್ಗದವರು, ಪೋಷಕರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.