ಕುಂದಾಪುರ : ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರನ್ನಾಗಿ ರೂಪಿಸಲು ಶ್ರಮಿಸುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೆ.ಸಿ.ಐ ಕುಂದಾಪುರ ಜೊತೆಗೂಡಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರಾಮಾಣಿಕತಾ ಮಳಿಗೆ” (HONESTY SHOP) ಪ್ರಾರಂಭಿಸಿದೆ.
ವಿಭಿನ್ನ ಪರಿಕಲ್ಪನೆಯ ಈ ಪ್ರಾಮಾಣಿಕತಾ ಮಳಿಗೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಮಕ್ಕಳು ಬಳಸುವ ಪೆನ್ನು, ಪೆನ್ಸಿಲ್, ನೋಟ್ ಪುಸ್ತಕಗಳು, ಡ್ರಾಯಿಂಗ್ ಶೀಟ್ಸ್, ಚಾಕೋಲೇಟ್ಸ್, ಕಂಪಾಸ್ ಬಾಕ್ಸ್, ರಬ್ಬರ್ ಮತ್ತಿತರ ವಸ್ತುಗಳನ್ನು ತೆರೆದ ಮಳಿಗೆಯಲ್ಲಿ ಜೋಡಿಸಿಡಲಾಗುತ್ತದೆ. ಪ್ರತಿ ವಸ್ತುವಿನ ದರಪಟ್ಟಿಯನ್ನು ಕೂಡಾ ಹಾಕಲಾಗಿರುತ್ತದೆ. ಹಣ ಹಾಕಿಡುವ ತೆರೆದ ಡಬ್ಬಿ ಕೂಡ ಇಟ್ಟಿರಲಾಗುತ್ತದೆ. ಈ ಮಳಿಗೆಗೆ ಯಾರೂ ಮಾಲಿಕರಿಲ್ಲ, ನಿರ್ವಹಿಸುವವರಿಲ್ಲ. ಮಕ್ಕಳಿಗೆ ಏನಾದರೂ ವಸ್ತು ಬೇಕಿದ್ದಲ್ಲಿ ದರಪಟ್ಟಿಯನ್ನು ಗಮನಿಸಿ ಆ ವಸ್ತುವಿನ ಬೆಲೆಯ ಹಣವನ್ನು ಹಣದ ಡಬ್ಬಿಗೆ ತಾವೇ ಹಾಕಿ ವಸ್ತುವನ್ನು ಅವರೇ ಪಡೆದುಕೊಳ್ಳುತ್ತಾರೆ. ಯಾರೂ ಕೊಡುವವರು ಇರುವುದಿಲ್ಲ. ಹಣ ಸರಿಯಾಗಿ ಹಾಕಿದ್ದಾರೋ, ತೆಗೆದುಕೊಳ್ಳಬೇಕಾದಷ್ಟೇ ವಸ್ತುಗಳನ್ನು ತೆಗೆದಿದಿದ್ದಾರೋ ಎಂಬುದನ್ನು ಗಮನಿಸುವವರು ಯಾರೂ ಇರುವುದಿಲ್ಲ.
ಯಾರೂ ನಮ್ಮನ್ನು ಗಮನಿಸುವವರು ಇಲ್ಲದಿದ್ದಾಗ, ತಪ್ಪು ಮಾಡಲು ಪೂರ್ಣ ಅವಕಾಶವಿದ್ದಾಗಲೂ ತಾವು ಸಹಜ ಪ್ರಾಮಾಣಿಕತೆಯಿಂದ ನಡೆದುಕೊಳ್ಳಬಲ್ಲೆವು ಎಂಬ ಅರಿವು, ವಿಶ್ವಾಸವನ್ನು ಮಕ್ಕಳು ಹೊಂದಲು ಇದೊಂದು ಮುಕ್ತವಾದ ಅವಕಾಶ. (ಇದರ ಉದ್ದೇಶ ಮಕ್ಕಳ ಪ್ರಾಮಾಣಿಕತೆಯನ್ನು ಪರೀಕ್ಷಿಸುವುದು ಅಲ್ಲ)
ಈ ರೀತಿಯ ವಿನೂತನ ಪ್ರಯೋಗಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಶ್ರಮಿಸುತ್ತಿರುವ ಶಾಲೆಯ ಭೋಧಕವ್ರಂದ, ಆಡಳಿತ ಮಂಡಳಿ ಹಾಗೂ ಜೆ.ಸಿ.ಐ. ಕುಂದಾಪುರದ ಕಾರ್ಯ ಶ್ಲಾಘನೀಯ.