ಕುಂದಾಪುರ: ತಾಲೂಕಿನ ಪ್ರಸಿದ್ಧ ನೈಸರ್ಗಿಕ ಬೆಲ್ಲ ತಯಾರಿಕಾ ಕೇಂದ್ರವಾಗಿರುವ ಕೆದೂರು- ಶಾನಾಡಿ ಆಲೆಮನೆ ಬೆಲ್ಲ ತಯಾರಿಕಾ ಘಟಕಕ್ಕೆ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ. ಪ್ರೊಫೆಷನಲ್ (ಸಿಎ, ಸಿಎಸ್, ಸಿ.ಎಮ್.ಎ.) ಬ್ಯಾಚಿನ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆಯ ಹಿನ್ನೆಲೆಯಲ್ಲಿ ಭೇಟಿ ನೀಡಿದರು.
ಶಾನಾಡಿ ಆಲೆಮನೆಯ ಸ್ಥಾಪಕರಾದ ಶ್ರೀ ಉಮಾನಾಥ ಶೆಟ್ಟಿ ಹಾಗೂ ಶ್ರೀ ರಾಮಚಂದ್ರ ಭಟ್ ಕೆದೂರು -ಶಾನಾಡಿ ಯವರು ನೈಸರ್ಗಿಕ ಬೆಲ್ಲ ತಯಾರಿಕಾ ವಿಧಾನಗಳು ಹಾಗೂ ಆಲೆಮನೆ ಬೆಲ್ಲದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯಲ್ಲಿ ಸಿಹಿ ನಾಡು ಶಾನಾಡಿ ಯ ಕುರಿತಾದ ಉಲ್ಲೇಖವಿದ್ದು, ಬಹಳ ಹಿಂದಿನಿಂದಲೂ ಕಬ್ಬು ಬೆಳೆಗಾರಿಕೆ ಹಾಗೂ ಆಲೆಮನೆ ಬೆಲ್ಲ ತಯಾರಿಕೆಗೆ ಈ ಭಾಗದಲ್ಲಿ ಪ್ರಾಶಸ್ತ್ಯವನ್ನು ನೀಡಲಾಗುತ್ತಿದ್ದು, ಕಾಲಕ್ರಮೇಣ ಈ ಭಾಗದಲ್ಲಿ ಆಲೆಮನೆ ಬೆಲ್ಲ ತಯಾರಿಕೆ ಮರೆಯಾಗುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ನಡೆಯಬೇಕಿದೆ ಎಂದು ಆಲೆಮನೆ ಘಟಕದ ರಾಮಚಂದ್ರ ಭಟ್ ಕೆದೂರು -ಶಾನಾಡಿಯವರು ವಿದ್ಯಾರ್ಥಿಗಳೊಂದಿಗೆ ಅನುಭವವನ್ನು ಹಂಚಿಕೊಂಡರು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ಭಟ್, ಉಪನ್ಯಾಸಕ ರಾಜೇಶ್ ಶೆಟ್ಟಿ , ಸಂತೋಷ್ ಶೆಟ್ಟಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರವೀಣ್ ಮೊಗವೀರ ಗಂಗೊಳ್ಳಿ ಉಪಸ್ಥಿತರಿದ್ದರು.