ಕುಂದಾಪುರ (ಆ ,03): ವಿದ್ಯಾರ್ಥಿಗಳಿಗೆ ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಷಯಗಳ ಅವಶ್ಯಕತೆ ತುಂಬಾ ಇದೆ. ಆದರೆ ಇವೆಲ್ಲಾ ಕಬ್ಬಿಣದ ಕಡಲೆಯಂತೆ ತಪ್ಪು ಗ್ರಹಿಕೆ ಅವರಲ್ಲಿದೆ. ಭವಿಷ್ಯದ ಪೀಳಿಗೆಗೆ ಎಲ್ಲಾ ಸಂದರ್ಭಗಳಲ್ಲಿಯೂ, ಅನೇಕ ವ್ಯವಹಾರಗಳಲ್ಲಿ ಮತ್ತು ಸಂವಹನಗಳಲ್ಲಿ ಸಂಖ್ಯಾಶಾಸ್ತ್ರ ಅವಶ್ಯಕವಾಗಿದೆ. ನಮ್ಮ ರಾಜ್ಯದ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸಂಖ್ಯಾಶಾಸ್ತ್ರ ಸಂಯೋಜನೆ ತುಂಬಾ ಅವಶ್ಯಕತೆಯಿದೆ, ಇಡೀ ಜಗತ್ತಿನ ಆರ್ಥಿಕ ಬಲವರ್ಧನೆಯ ಅಧ್ಯಯನ ಕೂಡಾ ಇದರಿಂದಲೇ ಸಾಧ್ಯ, ಹಾಗಾಗಿ ಸಂಖ್ಯಾಶಾಸ್ತ್ರ ರಾಷ್ಟ್ರದ ಅಭ್ಯುದಯದ ಪ್ರತೀಕ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಇದರ ಉಪನಿರ್ದೇಶಕರಾದ ಶ್ರೀ ಮಾರುತಿ ಅಭಿಪ್ರಾಯಪಟ್ಟರು.
ಅವರು ಸರಕಾರಿ ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಸಂಖ್ಯಾಶಾಸ್ತ್ರ ಬೋಧಕರಿಗಾಗಿ “ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಸಂಖ್ಯಾಶಾಸ್ತ್ರ ಉಪನ್ಯಾಸಕರ ವೇದಿಕೆ” ಏರ್ಪಡಿಸಿದ್ದ ಒಂದು ದಿನದ ಬೋಧನಾ ಕೌಶಲ ಪುನಃಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪ್ರೊ. ರಾಜಮೋಹನ್ ಹಾಗೂ ಪ್ರೊ. ವಿಷ್ಣುಮೂರ್ತಿ ಉಪಾಧ್ಯಾಯ ಅವರು ಪಾಲ್ಗೊಂಡು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯರಾದ ರಾಮಕೃಷ್ಣ ಬಿ.ಜಿ. ಅವರು ಮಾತನಾಡಿ “ ಸಂಖ್ಯಾಶಾಸ್ತ್ರ ಬೋಧಕರಲ್ಲಿ ಅಪ್ರತಿಮ ಜಾಣ್ಮಯಿರುತ್ತದೆ. ಅವರು ವಿದ್ಯಾರ್ಥಿಯು ಇನ್ನಿತರ ವಿಷಯಗಳನ್ನೂ ಕೂಡ ತರ್ಕಬದ್ಧವಾಗಿ ಮತ್ತು ಆಲೋಚನಶೀಲವಾಗಿ ಕಲಿಯುವಂತೆ ಪ್ರೇರೇಪಿಸಬಹುದು. ಇಂತಹ ಕಾರ್ಯಾಗಾರಗಳಿಂದ ಬೋಧನೆಯು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ, ಇದರ ಸದುಪಯೋಗಪಡಿಸಿಕೊಳ್ಳಿರಿ” ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ.ಗಣೇಶ ಕೆ ಅವರು “ಆರ್-ಪ್ರೊಗ್ರಾಮಿಂಗ್” ವಿಷಯವಾಗಿ ಮತ್ತು ಪ್ರೊ.ಪ್ರಭಾಕರ ಶೆಟ್ಟಿಗಾರ ಅವರು “ಪ್ರಶ್ನೆ ಪತ್ರಿಕೆಯ ನೀಲನಕ್ಷೆಯ” ಕುರಿತು ಉತ್ತಮವಾಗಿ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಉಡುಪಿ ಜಲ್ಲೆಯ 45 ಜನ ಉಪನ್ಯಾಸಕರು ಭಾಗವಹಿಸಿದ್ದರು. ವೈಭವಿ ಮತ್ತು ತಂಡದವರು ಪ್ರಾರ್ಥಿಸಿದರು, ಪ್ರೊ.ಪ್ರಭಾಕರ ಶೆಟ್ಟಿಗಾರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ.ನೇತ್ರಾವತಿ ಬುಡ್ಡಿ ವಂದಿಸಿದರು ಮತ್ತು ಶ್ರೀಮತಿ.ಶಿಲ್ಪಾಕಾರ್ಯಕ್ರಮ ನಿರೂಪಿಸಿದರು.