ಕುಂದಾಪುರ(ಆ ,23): ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರಿನಲ್ಲಿ ನಡೆಸಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ, ಮುಲ್ಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ ಮೂರು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕ ಪಡೆದು ಸತತ ಆರನೆಯ ಬಾರಿ ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಕ್ರೀಡಾಕೂಟದ ಈಜು ಸ್ಪರ್ಧೆಯ 50 ಮೀ., 100 ಮೀ. 200 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ತ್ರಿವಳಿ ಚಿನ್ನದ ಪದಕ ಮೆಡ್ಲೆ ರಿಲೇಯಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಈ ಹಿಂದೆ ತಣ್ಣೀರುಬಾವಿ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಜಡಿದು ಒಂದು ಕಿ.ಮೀ. ಈಜಿ ದಾಖಲೆ ಮಾಡಿರುತ್ತಾರೆ. ಇವರಿಗೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಬಿ.ಕೆ.ನಾಯ್ಕ್ ಈಜು ತರಬೇತಿ ನೀಡುತ್ತಾರೆ.