ಕುಂದಾಪುರ (ಅ.30): ಮನುಷ್ಯನ ಮನಸ್ಸಿನಲ್ಲಿ ಅಹಂಕಾರವು ತುಂಬಿರಬಾರದು. ಅಹಂಕಾರ ತುಂಬಿದ ಮನುಷ್ಯನ ಜೀವನವು ಅವನನ್ನು ಅಧೋಗತಿಯತ್ತ ಕೊಂಡೊಯ್ಯುವುದು. ಹಿರಿಯರು ಹಾಕಿಕೊಟ್ಟಂತಹ ನೀತಿ-ನಿಯಮಗಳನ್ನು ಗೌರವಿಸಿ ಪಾಲಿಸಿಕೊಂಡು ಬಂದಲ್ಲಿ ಮನುಷ್ಯ ಜೀವನ ಸಾಫಲ್ಯತೆಯನ್ನು ಸಾಧಿಸುತ್ತದೆ ಎಂದು ಸರಕಾರಿ ಪ್ರೌಢಶಾಲೆ ಸುಣ್ಣಾರಿಯ ನಿವೃತ್ತ ದೈಹಿಕ ಶಿಕ್ಷಕ ಶ್ರೀ ಕಿರಣ್ ಕುಮಾರ್ ಬಿ. ಹೇಳಿದರು.
ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಾನವೀಯ ಮೌಲ್ಯಗಳು ಮತ್ತು ವೃತ್ತಿಪರ ನೀತಿ ಸಂಘ ಆಯೋಜಿಸಿದ ಮಾಹಿತಿ ಕಾರ್ಯಾಗಾರದಲ್ಲಿ ‘ಮಾನವ ಜೀವನದಲ್ಲಿ ನೈತಿಕತೆ’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸುವುದು, ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದರು.
ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಕೆ. ಸ್ವಾಗತಿಸಿ, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮೇಘಾ ಎಸ್. ಭಟ್ ವಂದಿಸಿದರು. ವಿದ್ಯಾರ್ಥಿಗಳಾದ ವೈಷ್ಣವಿ ಎಮ್.ಎಸ್. ಅತಿಥಿಗಳನ್ನು ಪರಿಚಯಿಸಿ, ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.