ಕುಂದಾಪುರ (ಫೆ.17) : ಕೋವಿಡ್ -19 ಮಹಾಮಾರಿಯಿಂದಾಗಿ ಯಕ್ಷಗಾನವೂ ಸೇರಿದಂತೆ ಅನೇಕ ಮಹತ್ತರದ ಕಲೆಗಳು ಮೌನವಾಗಿದ್ದವು. ಪುನಹ ಸಾಂಸ್ಕೃತಿಕ ಜಗತ್ತು ಮರುಜೀವ ಪಡೆಯುತ್ತಿರುವುದು ಸಂಭ್ರಮದ ಸಂಗತಿ. ಪಠ್ಯ ದೊಂದಿಗೆ ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸತ್ಪ್ರಜೆಗಳಾಗುವುದರ ಜೊತೆಗೆ ಭವಿಷ್ಯ ಬೆಳಗಿಸಿಕೊಳ್ಳಿ ಎಂದು ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಇಂದಿರಾ ಶೆಟ್ಟಿ ಹರ್ಕೂರು ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೂನಿಯರ್ ಕಾಲೇಜು ಕುಂದಾಪುರ ಆಶ್ರಯದಲ್ಲಿ ಫೆಬ್ರವರಿ 17ರಂದು ಕುಂದಾಪುರದ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪನ್ಯಾಸಕ ಉದಯಕುಮಾರ್ ಶೆಟ್ಟಿ ಕಾಳವರ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಯ ನಂತರ ಜಿಲ್ಲೆಯ ಬೇರೆ ಬೇರೆ ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.