ಕುಂದಾಪುರ (ಫೆ:18) : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಮಂಗಳೂರು ಇವರು ಫೆಬ್ರವರಿ 10ರಂದು ಆಯೋಜಿಸಿದ “ಸ್ವರ ಕುಡ್ಲ” ಸೀಸನ್ 3 ಅಂತರ್ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಧಾರಿಣಿ ಕೆ.ಎಸ್ ಕುಂದಾಪುರ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಜನವರಿ 31ರಂದು ನಡೆದ ಅಡಿಷನ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 103 ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ 26 ಸ್ಪರ್ಧಿಗಳು ಸೆಮಿಫೈನಲ್ ಹಂತವನ್ನು, ಅಂತಿಮ ಹಂತದಲ್ಲಿ 12 ಸ್ಪರ್ಧಿಗಳು ಆಯ್ಕೆಯಾಗಿದ್ದರು.
ಅಂತಿಮ ಸುತ್ತಿನಲ್ಲಿ ಧಾರಿಣಿ ಕೆ.ಎ.ಸ್. ಕುಂದಾಪುರ ಇವರು ಪ್ರಥಮ ಸ್ಥಾನಿಯಾಗಿ, ರಾಜೇಶ್ ಪ್ರಭು ದ್ವಿತೀಯ ಸ್ಥಾನಿಯಾಗಿ ಆಯ್ಕೆಯಾಗಿರುತ್ತಾರೆ. ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಶಂಕರನಾರಾಯಣ ಕೆ. ಮತ್ತು ವತ್ಸಲಾ ದಂಪತಿಯ ಪುತ್ರಿಯಾಗಿರುವ ಧಾರಿಣಿ ಕೆ.ಎಸ್. ರವರು ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ನಡೆದ 25 ಅಂತರ್ಜಾಲ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ 5 ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, 7 ಅಂತರ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, 4 ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ 3 ಅಂತರ್ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆಯನ್ನು ನಿರ್ಮಿಸಿರುತ್ತಾರೆ.













