ಉಡುಪಿ( ಫೆ:19) ತೆಂಕುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ಡಾ.ಶ್ರೀಧರ್ ಭಂಡಾರಿ(73 ) ಯವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಇವರು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ಗಣಮಣಿ ಪಾತ್ರಕ್ಕೆ ಹೊಸ ಆಯಾಮ ನೀಡಿರುತ್ತಾರೆ.ಅಭಿಮನ್ಯು,ಸುಧನ್ವ ,ಕ್ರಷ್ಣ ಮುಂತಾದ ಪುಂಡುವೇಷಗಳಿಗೆ ಹೆಸರುವಾಸಿಯಾಗಿದ್ದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬನ್ನೂರು ನಿವಾಸಿಯಾಗಿದ್ದು, 2019ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಇವರು ಧಿಗಿಣ ವೀರ ಎಂದೇ ಪ್ರಸಿದ್ಧಿಗಳಿಸಿದ್ದರು.
ಸುಮಾರು ಒಂದು ವರ್ಷದ ಹಿಂದೆ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಇವರು ಇದೀಗ ನಿಧನ ರಾಗಿದ್ದಾರೆ. ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲಾ, ಶಾಂತನಾ, ಪುತ್ರರಾದ ಡಾ.ಅನಿಲ, ದೇವಿ ಪ್ರಕಾಶ್ ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ತೆಂಕು ತೆಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿರುವುದು ವಿಷಾದನೀಯ.