ಕುಂದಾಪುರ (ಫೆ-22) ಶಿವಾಜಿ ಮಹಾರಾಜರು ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ನಿರಂತರವಾಗಿ ಶ್ರಮಿಸಿದವರು ಅವರನ್ನು ಕೇವಲ ಒಂದು ಪ್ರಾಂತ್ಯಕ್ಕೆ ಸೀಮಿತಗೊಳಿಸದೆ ಇಡೀ ಭಾರತದ ಸಮಗ್ರ ಹಿಂದುಗಳ ಐಕ್ಯತೆಯ ಪ್ರತೀಕ ಎನ್ನುವ ವಿಚಾರವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಬಸ್ರೂರಿನಲ್ಲಿ ಸದ್ದಿಲ್ಲದೆ ಪೋರ್ಚುಗೀಸರ ನೌಕಾನೆಲೆ ಧ್ವಂಸಮಾಡಿ ಮೊಟ್ಟಮೊದಲ ಸರ್ಜಿಕಲ್ ಸ್ಟ್ರೈ ಕ್ ಮಾಡಿದವರು ಶಿವಾಜಿ ಮಹಾರಾಜರು ಎನ್ನುವ ಹೆಮ್ಮೆ ನಮಗಿರಬೇಕು ಎಂದು ಯುವಾ ಬಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಫೆಬ್ರವರಿ 21ರಂದು ಯುವ ಬ್ರಿಗೇಡ್ ಕರ್ನಾಟಕ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನ ಇವರು ಬಸ್ರೂರಿನ ಶಾರದ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ನೆಲದಲ್ಲಿ ಶಿವಾಜಿ ಎನ್ನುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾದವರಲ್ಲ ಇಡೀ ಹಿಂದೂ ಸಮಾಜದ ಒಗ್ಗೂಡಿಸಿದ ಮಹಾನ್ ನಾಯಕ ಅವರು ಇಡೀ ದೇಶದ ಆಸ್ತಿ, ಶಿವಾಜಿಯ ಹೋರಾಟ, ತ್ಯಾಗ, ಹಿಂದೂ ಸಾಮ್ರಾಜ್ಯ ಕಟ್ಟಬೇಕು ಎನ್ನುವ ಛಲ ನಮ್ಮೆಲ್ಲರಿಗೂ ಆದರ್ಶ. ಹಿಂದೂ ಸಮಾಜದ ಬಗ್ಗೆ ಯಾರೇ ಕೀಳಾಗಿ ಮಾತನಾಡಿದರೂ ಅವರ ವಿರುದ್ದ ಸೆಟೆದು ನಿಂತು ಹೋರಾಡಲು ನಮಗೆ ಶಿವಾಜಿಯ ಪ್ರೇರಣೆಯಾಗಬೇಕಿದೆ ಎಂದು ಹಡಗಲಿಯ ಹಲ ಸಂಸ್ಥಾನದ ಹಲವೀರಪ್ಪಸ್ವಾಮೀಜಿ ಹೇಳಿದರು. ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಶಿವಾಜಿ ಕುರಿತಾದ ಮೆಚ್ಚುಗೆಯ ಮಾತುಗಳನ್ನಾಡಿದರು. ಕಲಾವಿದ ಮಹೇಂದ್ರ ವಕ್ವಾಡಿ ವೇದಿಕೆಯಲ್ಲಿ ಶಿವಾಜಿ ಭಾವಚಿತ್ರ ರಚಿಸಿದರು. ಬೃಹತ್ ಶೋಭಾಯಾತ್ರೆಗೆ ಪೇಜಾವರ ಮಠ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಯುವಾ ಬ್ರಿಗೇಡ್ ದಕ್ಷಿಣ ಪ್ರಾಂತ ಸಂಚಾಲಕ ಚಂದ್ರಶೇಖರ ನಂಜನಗೂಡು ಉಪಸ್ಥಿತರಿದ್ದರು. ಧಾರವಾಡ ಯುವಾ ಬ್ರಿಗೇಡ್ ಸಂಚಾಲಕ ವರ್ಧಮಾನ ತ್ಯಾಗಿ ಸ್ವಾಗತಿಸಿದರು, ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಯುವಾ ಬ್ರಿಗೇಡ್ ದಕ್ಷಿಣ ಪ್ರಾಂತ ಸಂಚಾಲಕ ನಿರಂಜನ್ ತಲ್ಲೂರು ವಂದಿಸಿದರು.