ಉಡುಪಿ (ಫೆ.27): ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿಜ್ಞಾನ ವಿಭಾಗ ಹಾಗೂ ಕಾಲೇಜಿನ ಐಎಸ್ಟಿಇ ಘಟಕದ ಸಹಯೋಗದೊಂದಿಗೆ “ನ್ಯಾನೋ ತಂತ್ರಜ್ಞಾನ ಮತ್ತು ಅದರ ಅನ್ವಯಿಕೆಗಳು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಶ್ರೇಷ್ಠ ಭಾರತೀಯ ಭೌತವಿಜ್ಞಾನಿ ಸರ್. ಸಿ. ವಿ ರಾಮನ್ ಅವರ ನೆನಪಿಗಾಗಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯ ಅಂಗವಾಗಿ 26 ಫೆಬ್ರವರಿ 2021ರಂದು ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುರತ್ಕಲ್ನ ಎನ್ಐಟಿಕೆಯ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಡಿ. ಕೃಷ್ಣ ಭಟ್ ಭಾಗವಹಿಸಿ ನ್ಯಾನೋ ತಂತ್ರಜ್ಞಾನದ ಬಗ್ಗೆ ಉಪನ್ಯಾಸವನ್ನು ನೀಡಿದರು. ನ್ಯಾನೋ ತಂತ್ರಜ್ಞಾನ ಅಳವಡಿಕೆಯಿಂದ ದೇಶದ ಸಾಮಾಜಿಕ- ಆರ್ಥಿಕ ಸ್ಥಿತಿಯಲ್ಲಿ ಆಗಬಹುದಾದ ಬದಲಾವಣೆಯ ಬಗ್ಗೆ ವಿವರಿಸಿದರು. ನ್ಯಾನೋ ತಂತ್ರಜ್ಞಾನದಿಂದ ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಿರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸಿದರು. ನ್ಯಾನೋ ವಸ್ತುಗಳು ಕೃಷಿ, ಇಂಧನ ಸಂಗ್ರಹ ಇತ್ಯಾದಿ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ತರಬಹುದು ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಉಷಾ. ಎಚ್ ಕಾರ್ಯಕ್ರಮವನ್ನು ನಿರೂಪಿಸದರು.












