ಹೆಣ್ಣನ್ನು ಪೂಜಿಸುವ ದೇಶ ನಮ್ಮದು. ಭಾರತಮಾತೆಯನ್ನು ತಾಯಿ ಎಂದು ಆರಾಧನೆ ಮಾಡುವ ನಾವು ಅನಾದಿ ಕಾಲದಿಂದಲೂ ಹೆಣ್ಣಿಗೆ ವಿಶೇಷ ಸ್ಥಾನಮಾನ ನೀಡುತ್ತಾ ಬಂದಿದ್ದೆವೆ.ಶೋಷಣೆ ,ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಟ ಮಾಡಿರುವ ಮಹಿಳೆಯರು,ಬ್ರಿಟಿಷರು ನಮ್ಮನ್ನು ಆಳುವ ಸಂದರ್ಭದಲ್ಲಿಯೂ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ದಾಖಲಾಗಿದೆ.
ಆದರೆ ಅಂತಹ ಹೆಮ್ಮೆಯ ಹೆಣ್ಣು ಮಕ್ಕಳ ಸ್ಥಿತಿ ಇವತ್ತಿನ ದಿನಗಳಲ್ಲಿ ಎನಾಗಿದೆ? ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯದ ನಂತರವೂ ಹೆಣ್ಣಿನ ಶೋಷಣೆ ನಡೆಯುತ್ತಿತ್ತು ,ಇಗಲೂ ನಡೆಯುತ್ತಿದೆ ! ಹೆಣ್ಣು ಮಕ್ಕಳನ್ನು ಗೌರವಪೂರ್ವಕವಾಗಿ ನೋಡುತ್ತಿದ್ದ ನಮ್ಮ ದೇಶ ಬದಲಾಗಿದೆ. ಮಾತು ಶುರು ಮಾಡುವ ಮುನ್ನ ನಮ್ಮಲ್ಲಿ ಅನೇಕ ಭಾಷಣಕಾರರು, ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ಹೆಣ್ಣು ಗಂಡು ಇಬ್ಬರು ಸಮಾನರು ಎಂದು ಹೇಳುತ್ತಾರೆ. ಅದರೆ ಎಷ್ಟರ ಮಟ್ಟಿಗೆ ಸಮಾನತೆ ಇದೆ ಎಂಬುದನ್ನು ನಾವು ಯೋಚಿಸಬೇಕು!
ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಅದೆಷ್ಟೋ ಬದಲಾವಣೆಯಾಗಿದೆ, ನಮ್ಮ ದೇಶದ ಪರಿಸ್ಥಿತಿ ಬದಲಾಗಿದೆ, ನಮ್ಮ ದೇಶದ ಜನತೆ ಬದಲಾಗಿದ್ದಾರೆ, ಅವರ ಮನಸ್ಥಿತಿ ಬದಲಾಗಿದೆ. ಬದಲಾವಣೆ ಜಗದ ನಿಯಮ ಆದರೆ ಬದಲಾವಣೆಯಿಂದ ಒಳ್ಳೆದಾಗುವುದಾದರೆ ಆ ಬದಲಾವಣೆ ಬೇಕು, ಅದರೆ ಅದರಿಂದ ತೊಂದರೆಗಳು ಆಗುವುದಾದರೆ ಆ ಬದಲಾವಣೆ ನಮಗೆ ಬೇಡವೇ ಬೇಡ.
ದಿನಾಲೂ ನಾವು ಬೆಳಿಗ್ಗೆಯಿಂದ ರಾತ್ರಿಯವರೆಗೆ ಅದೆಷ್ಟೋ ವಿಚಾರಗಳನ್ನು ಕೇಳುತ್ತೆವೆ, ನೋಡುತ್ತೆವೆ ಅದರಲ್ಲಿ ಒಳ್ಳೆಯದು, ಕೆಟ್ಟದು ಎರಡು ಇರುತ್ತದೆ. ಪ್ರತಿದಿನ ಹೆಣ್ಣು ಮಕ್ಕಳು ಕೆಲಸ, ಶಾಲೆ ಕಾಲೇಜು ಅಂತ ಹೊರಗೆ ಹೋಗುತ್ತಾರೆ ಅವರು ಹೋಗುವಾಗ ಎಷ್ಟು ಸುರಕ್ಷಿತವಾಗಿ ಹೊಗುತ್ತಾರೋ ಅಷ್ಟೇ ಸುರಕ್ಷಿತವಾಗಿ ಬರುತ್ತಾರೆ ಎನ್ನುವ ನಂಬಿಕೆ ಇಲ್ಲ. ಅವರು ಹಿಂತಿರುಗಿ ಬರುವವರೆಗೂ ಮನೆಯವರು ಭಯದಲ್ಲಿಯೇ ಕಾಯುತ್ತಿರುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಪ್ರತಿನಿತ್ಯ ಮಕ್ಕಳು, ಮಹಿಳೆಯರು ಅದೆಷ್ಟೋ ಸನ್ನಿವೇಶ ಎದುರಿಸುತ್ತಾರೆ. ಕೆಲವು ಖುಷಿ, ಸಂಭ್ರಮ, ಸಡಗರ ತುಂಬಿದ ಸನ್ನಿವೇಶ ಆದರೆ ಇನ್ನು ಕೆಲವು ಕಷ್ಟ, ನೋವು, ಭಯ, ದುಃಖ ತುಂಬಿದ ಸನ್ನಿವೇಶವಾಗಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ, ಹಿಂಸೆ, ಶೋಷಣೆ ನೋಡಿದರೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಎಲ್ಲಿಂದ ಎಲ್ಲಿಗೆ ಬಂದಿದೆ ಎನ್ನುವ ಭಯ ನಮ್ಮನ್ನು ಕಾಡುತ್ತದೆ.
ಪೂಜಾ ಭಾವನೆಯಿಂದ ನೋಡುತ್ತಿದ್ದವರು ಇಂದು ಕಾಮದ ದೃಷ್ಟಿಯಿಂದ ನೋಡುತ್ತಿದ್ದಾರೆ, ಪರಿಸ್ಥಿತಿ ಬದಲಾಗಿದೆ, ಜನರ ಮನಸ್ಥಿತಿ ಬದಲಾಗಿದೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಯಾರನ್ನು ನಂಬುವುದು ಅನ್ನುವುದೇ ದೊಡ್ಡ ಪ್ರಶ್ನೆ. ನಮ್ಮ ದೇಶದ ಸಂಸ್ಕೃತಿಯು ಜಗತ್ತಿಗೆ ಮಾದರಿಯಾಗಿದೆ, ಅಷ್ಟೇ ಅಲ್ಲ ನಮ್ಮ ದೇಶಕ್ಕೆ ಬಂದಂತ ವಿದೇಶಿಯರು ನಮ್ಮ ದೇಶದ ಕುರಿತು ಎಷ್ಟೋ ಒಳ್ಳೆಯ ಸಂಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಲವಾರು ಉದಾಹರಣೆಗಳು ಸಿಗುತ್ತವೆ. ಇಂತಹ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಶೋಷಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹೊರತು ಕಡಿಮೆ ಆಗುತ್ತಿಲ್ಲ.ಇದು ವಿಪರ್ಯಾಸವೆಂದರೆ ತಪ್ಪಲ್ಲ!
ನಮ್ಮ ದೇಶದ ರಾಜಧಾನಿಯಲ್ಲಾದ ಸಾಮೂಹಿಕ ಅತ್ಯಾಚಾರದ ಘಟನೆ ನಮಗೆಲ್ಲ ತಿಳಿದಿರುವ ವಿಷಯ, ಅದರ ಕುರಿತು ದೇಶದೆಲ್ಲೆಡೆ ಜನರು ವಿಷಾದ ವ್ಯಕ್ತಪಡಿಸಿದ್ದರು, ಇನ್ನು ಅಚ್ಚಾಗಿ ಉಳಿದಿರುವ ಈ ನಿರ್ಭಯ ಪ್ರಕರಣ ಕಣ್ಣಿಗೆ ಕಟ್ಟುವಂತೆ ಇದೆ. ಇಂತಹ ಅದೆಷ್ಟೋ ಮನಕುಲಕುವ ಘಟನೆಗಳು ನಮ್ಮ ದೇಶದಲ್ಲಿ ನಿರಂತರವಾಗಿ ನಡೆಯುತ್ತಾ ಇದೆ.
ಗಾಂಧೀಜಿ ಹೇಳಿದಂತೆ “ಭಾರತಕ್ಕೆ ಯಾವಾಗ ಸ್ವಾತಂತ್ರ್ಯ ಸಿಗುತ್ತದೆ ಅಂದರೆ ಒಂದು ಹೆಣ್ಣು ಮಧ್ಯರಾತ್ರಿ ನಿರ್ಭಿತಿಯಿಂದ ನಡೆದುಕೊಂಡು ಹೋಗುವಷ್ಟು ಸ್ವಾತಂತ್ರ್ಯ ಸಿಕ್ಕಾಗ …. ಈ ಮಾತು ಇಂದು ಹುಸಿಯಾಗಿದೆ. ಇಗೀನ ಪರಿಸ್ಥಿತಿಯಲ್ಲಿ ರಾತ್ರಿ ಬಿಟ್ಟು ಹಗಲಲ್ಲಿ ಮಹಿಳೆಯರು ಓಡಾಡುವುದೇ ಬಹಳ ಕಷ್ಟವಾಗಿದೆ.ಇದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳಬೇಕಾಗಿರುವುದು ಇಂದಿನ ತುರ್ತಾಗಿದೆ.
ನಮ್ಮ ದೇಶದಲ್ಲಿ ಮಕ್ಕಳಿಗೆ ಪಠ್ಯ ಶಿಕ್ಷಣ- ನೈತಿಕ ಶಿಕ್ಷಣ ನೀಡುವುದರ ಜೊತೆಗೆ ಪಠ್ಯೇತರ ವಿಷಯವನ್ನು ಕಲಿಸಬೇಕಾಗಿದೆ. ಸಾಮಾಜಿಕ ಜಾಲಾತಾಣ ಹಾಗೂ ನಾವು ಬಳಸುವ ಮೊಬೈಲ್ ಫೋನ್ ಇದನ್ನು ಮಕ್ಕಳು ಒಳ್ಳೆಯದಕ್ಕೆ ಬಳಸುತ್ತಾರಾ, ಅಥವಾ ಕೆಟ್ಟ ರೀತಿಯಲ್ಲಿ ಬಳಸುತ್ತಿದ್ದಾರಾ ಎಂದು ಪೋಷಕರು ನೋಡುವುದು ಉತ್ತಮ.
ಅದೆಷ್ಟೋ ಸಂಗತಿಗಳು ನಡೆದಿರುವುದು ಮೊಬೈಲ್ ನಿಂದ. ಮಕ್ಕಳಿಗೆ ಚಿಕ್ಕಂದಿನಿಂದಲೂ ಯಾರ ಜೊತೆ ಬೆರೆಯಬೇಕು, ಯಾರ ಜೊತೆ ಬೆರೆಯಬಾರದೆಂಬ ಸೂಕ್ಷ್ಮ ವಿಷಯಗಳನ್ನ ಮನವರಿಕೆ ಮಾಡಬೇಕು, ಅದರಿಂದ ಮಕ್ಕಳಲ್ಲಿ ಜಾಗೃತಿ ಭಾವನೆ ಬೆಳೆಯುತ್ತದೆ. ಹೆಣ್ಣಿನ ಮೇಲೆ ನಡೆಯುತ್ತಿರುವ ಭ್ರಷ್ಟಾಚಾರ, ಅತ್ಯಾಚಾರ ಪ್ರಕರಣಗಳು, ಶೋಷಣೆಗಳು ನಿರ್ಮೂಲನೆ ಆಗಬೇಕಾಗಿದೆ, ಹೆಣ್ಣು ಮಕ್ಕಳು ಸ್ವಾತಂತ್ರ್ಯವಾಗಿ ಧೈರ್ಯದಿಂದ ಎಲ್ಲ ಸನ್ನಿವೇಶವನ್ನ ಎದುರಿಸುವ ಸಾಮರ್ಥ್ಯ ಹೊಂದಬೇಕಿದೆ.
ಒಂದು ಒಳ್ಳೆಯ ಸಮಾಜ ನಿರ್ಮಾಣ ಆಗಬೇಕಿದೆ.
ಭಯವೆಂಬ ಕತ್ತಲಲ್ಲಿ ಕುಳಿತಿರುವ ನಾವು ಧೈರ್ಯವೆಂಬ ಬೆಳಕಿನೆಡೆಗೆ ಸಾಗಬೇಕಿದೆ.
ಲೇಖನ – ಸುಷ್ಮಾ ಶೆಟ್ಟಿ