ಆಗದು ಎಂದು… ಕೈಲಾಗದು ಎಂದು … ಕೈಕಟ್ಟಿ ಕುಳಿತರೇ… ಸಾಗದು ಕೆಲಸವು ಮುಂದೆ…. ಮನಸೊಂದಿದ್ದರೆ ಮಾರ್ಗವು ಉಂಟು… ಕೆಚ್ಚೆದೆ ಇರಬೇಕೆಂದು …ಕೆಚ್ಚೆದೆ ಇರಬೇಕೆಂದು…
ಈ ಮಾತನ್ನು ಅಕ್ಷರಶಃ ಪಾಲಿಸಿ ಶಾರೀರಿಕ ನ್ಯೂನತೆಗೆ ಸವಾಲೆಸೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ದಿಟ್ಟ ಮಹಿಳೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರವಾಡಿ ಗ್ರಾಮದ ಲಲಿತಾ ಕೊರವಾಡಿ.
ಚಿಕ್ಕವರಿರುವಾಗ ಅನಿರೀಕ್ಷಿತ ಜ್ವರದಿಂದ ಬಳಲುತ್ತಿದ್ದ ಇವರು ಕ್ರಮೇಣ ಕೈ- ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಯಲ್ಲೇ ಇರುವಂತಾಯಿತು. ದುರದ್ರಷ್ಟಷಾತ್ ಬಾಲ್ಯದಲ್ಲಿಯೇ ಪೋಲಿಯೋ ಪೀಡಿತರಾದರು. ಆದರೆ ಜೀವನೋತ್ಸಾಹ ಕಳೆದುಕೊಳ್ಳದೆ ಬದುಕಿನಲ್ಲಿ ಏನಾದರೂ ಸಾಧನೆ ಮಾಡಿ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕೆಂದು ನಿರಂತರ ದ್ರಢ ಸಂಕಲ್ಪದೊಂದಿಗೆ ಶ್ರಮಿಸಿದ ಇವರು ಇಂದು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.
ಶಾರೀರಿಕ ನ್ಯೂನ್ಯತೆಗೆ ಸವಾಲೆಸೆದು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಇವರು ಆಯ್ಕೆಮಾಡಿಕೊಂಡಿದ್ದು ಕರಕುಶಲ ವಸ್ತುಗಳ ತಯಾರಿಕೆ ಮತ್ತು ತರಕಾರಿ ಬೆಳೆಯುವುದು . ಕರಕುಶಲ ವಸ್ತುಗಳ ತಯಾರಿಕೆಯ ಜೊತೆಗೆ ತರಕಾರಿ ಬೆಳೆಯನ್ನು ನಡೆಸುತ್ತಿರುವ ಇವರು ಇಂದು ಅದೆಷ್ಟು ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗಿದ್ದಾರೆ.
ಕೈ ಮತ್ತು ಕಾಲುಗಳ ನ್ಯೂನ್ಯತೆ ಇದ್ದರೂ ಸತತ ಪರಿಶ್ರಮದಿಂದ ಕರಕುಶಲ ವಸ್ತುಗಳ ತಯಾರಿಕೆಯನ್ನು ವಿವಿಧ ಮೂಲಗಳಿಂದ ಅಧ್ಯಯನ ಮಾಡಿ ದೇವರಚಿತ್ರ ರಚನೆ, ಕಿವಿಯೋಲೆ, ಜುಮ್ಮಿ, ಬಳೆ, ಮನೆಯ ಅಲಂಕಾರಿಕ ವಸ್ತುಗಳು, ಹೂವಿನ ಮಾಲೆ,ವ್ಯಾನಿಟಿ ಬ್ಯಾಗ್, ಬಟ್ಟೆ ತೋರಣ, ಟೆರಾಕೋಟ್ ಆಭರಣ, ಗೂಡು ದೀಪ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಹಲವು ಬಗೆಯ ಕರಕುಶಲ ವಸ್ತುಗಳನ್ನು ಇಂದು ತಯಾರಿಸುತ್ತಿದ್ದಾರೆ.
ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಯವರು ಲಲಿತಾ ಕೊರವಾಡಿ ಯವರ ಕರಕುಶಲ ವಸ್ತುಗಳಿಗೆ ಮಾರಾಟದ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಕೈಗಳು ಸರಿಯಾಗಿ ಸ್ಪಂದಿಸದಿದ್ದರೂ ಛಲ ಬಿಡದೆ ನಿರಂತರವಾಗಿ ಶ್ರಮವಹಿಸಿ ತಮ್ಮಕೆಲಸ ನಿರ್ವಹಿಸುತ್ತಿದ್ದಾರೆ. ಸ್ವತಃ ತಾವೇ ತರಕಾರಿ ಗಿಡಗಳನ್ನು ನೆಟ್ಟು ನೀರುಣಿಸಿ ಬಂದಂತ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಮನೆಯಂಗಳದ ಸಮೀಪ ಪುಟ್ಟ ಕೈತೋಟವನ್ನು ನಿರ್ಮಿಸಿದ್ದಾರೆ. ನಡೆಯಲು ಸಾಧ್ಯ ಆಗದಿದ್ದರೂ ತೆವಳಿಕೊಂಡು ಹೋಗಿ ತರಕಾರಿ ಗಿಡಗಳಿಗೆ ನೀರೆರೆಯುತ್ತಾರೆ. ಗಾರೆ ಕೆಲಸದ ತಾಪೆಯನ್ನು ಹಾರೆಯಂತೆ ಬಳಸುತ್ತಾ ಗಿಡಗಳನ್ನು ನೆಟ್ಟು ತರಕಾರಿ, ಸೊಪ್ಪು ಗಿಡಗಳನ್ನು ಬೆಳೆಯುತ್ತಾರೆ. ದಿನದ ಎರಡು ಗಂಟೆ ಕೈತೋಟದಲ್ಲಿ ಸಮಯ ಕಳೆಯುತ್ತಾರೆ.
ಇವರ ನಿರಂತರ ಶ್ರಮ ಮತ್ತು ಸ್ವಾವಲಂಬನೆಯ ಅವಿಚ್ಛಿನ್ನ ಶಕ್ತಿ ಪ್ರತಿಯೋರ್ವ ವ್ಯಕ್ತಿಗೂ ಮಾದರಿಯಂತಿದೆ.
ಕೈಕಾಲುಗಳು ಎರಡೂ ಬಾಲ್ಯದಲ್ಲಿಯೇ ಸ್ವಾಧೀನತೆ ಕಳೆದುಕೊಂಡರೂ ಇವರ ಸ್ವಾವಲಂಬಿ ಬದುಕಿನ ಛಲ ಹಾಗೂ ಹೋರಾಟದ ಬದುಕನ್ನು ಗಮನಿಸಿ ಹಲವು ಸಂಘ-ಸಂಸ್ಥೆಗಳು ಇವರಿಗೆ ಸನ್ಮಾನಿಸಿ ಗೌರವಿಸಿದೆ.
ಕುಂಭಾಶಿ ಸಮೀಪದ ಕೊರವಾಡಿ ಗ್ರಾಮದ ಮಹಾಬಲ ಪೂಜಾರಿ ಹಾಗೂ ಗುಲಾಬಿ ದಂಪತಿಗಳ ಐವರು ಮಕ್ಕಳಲ್ಲಿ ಎರಡನೇಯವರಾದ ಇವರಿಗೆ ದೈಹಿಕ ಬಲಹೀನತೆಯಿಂದಾಗಿ ಶಾಲೆಗೆ ಹೋಗಿ ಶಿಕ್ಷಣವನ್ನು ಪಡೆಯ ಸಾಧ್ಯವಾಗದಿದ್ದರೂ ಬದುಕಿನ ಶಿಕ್ಷಣವನ್ನು ಪಡೆದಿರುವುದು ನಮಗೆಲ್ಲಾ ಮಾದರಿ.
ಮನೆಯವರು ನನ್ನನ್ನು ವಿಶೇಷ ಚೇತನ ಮಹಿಳೆ ಎಂದು ಕೀಳರಿಮೆ ಮಾಡಿಲ್ಲ, ಅತ್ತಿಗೆ ಸರಿತಾರವರು ನನ್ನ ಆಸಕ್ತಿಗೆ ಪೂರಕವಾಗಿ ಸ್ಪಂದಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಲಲಿತಾರವರು ಹೇಳುತ್ತಾರೆ. 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದೆ. ಆಕಾಶವಾಣಿ, ದಿನ ಪತ್ರಿಕೆಗಳುಇವರ ಸಂದರ್ಶನವನ್ನು ನಡೆಸಿದೆ. ಕುಂಭಾಶಿ ಗ್ರಾ.ಪಂ.ನವರು ಗಾಲಿ ಖುರ್ಚಿಯನ್ನು ಇವರಿಗೆ ನೀಡಿದ್ದಾರೆ.
ಪ್ರಾರಂಭದ ದಿನಗಳಲ್ಲಿ ಇವರ ಯೋಚನೆ ಯೋಜನೆಗಳು ಮನೆಯವರಿಗೆ ಹಾಗೂ ಸುತ್ತಮುತ್ತಲಿನ ಜನತೆಗೆ ಹಾಸ್ಯಾಸ್ಪದ ಎಂದು ಕಂಡು ಬಂದಿತ್ತು. ಆದರೆ ಇವರ ದೃಢ ಸಂಕಲ್ಪ ಭವಿಷ್ಯದ ಬದುಕಿನೆಡೆಗೆ ಇದ್ದ ಆಲೋಚನೆ ಇವತ್ತು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಲಲಿತ ಕೊರವಾಡಿ ಕೇವಲ ಈ ಭಾಗದ ಮಹಿಳೆಯರಿಗೆ ಮಾತ್ರ ಪ್ರೇರಣೆಯಾಗದೆ ಜಗತ್ತಿನ ಪ್ರತಿಯೊಬ್ಬ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ.
ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಲಲಿತಾ ಕೊರವಾಡಿಯವರ ಬದುಕಿನ ಸವಾಲುಗಳು ಮತ್ತು ಶಾರೀರಿಕ ನ್ಯೂನತೆಯ ನಡುವೆ ಸ್ವಾವಲಂಬಿ ಬದುಕಿಗಾಗಿ ನಡೆಸುತ್ತಿರುವ ನಿರಂತರ ಪ್ರಯತ್ನ ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದು ಆಶಿಸುತ್ತೇವೆ.
ಕುಂದ ವಾಹಿನಿ ಬಳಗ