ಉಡುಪಿ (ಮಾ. 9): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಸ್ಥೆಯ ಆವರಣದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಉಡುಪಿಯ ನೀವಿಯಸ್ ಸೊಲ್ಯುಶನ್ನ ಸ್ಕ್ರಿಮ್ ಮಾಸ್ಟರ್ ಅನ್ನಪೂರ್ಣ ಅಲ್ಸೆರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು ವೃತ್ತಿ ಜೀವನದೊಂದಿಗೆ ವೈಯಕ್ತಿಕ ಜೀವನವನ್ನು ಸಮತೋಲನ ಕಾಪಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಕೊವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದುಡಿಯುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೆಲುಕು ಹಾಕಿದರು. ಜೀವನದಲ್ಲಿ ಏನಾದರೂ ಸಾಧಿಸುವ ಗುರಿ ಹೊಂದಿರುವುದರ ಜೊತೆಗೆ ಗುರಿ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಿಳಿಸಿಕೊಟ್ಟರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡುತ್ತಾ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆಲ ಮಹಿಳೆಯರ ಉದಾಹರಣೆಗಳನ್ನು ಹಂಚಿಕೊಂಡರು. ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಶ್ರೀಮತಿ ಧನ್ಯಶ್ರೀ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸಹನಾ ಸ್ವಾಗತಿಸಿದರು, ಗಣಕಯಂತ್ರ ವಿಭಾಗದ ವಿದ್ಯಾರ್ಥಿ ಕುಮಾರಿ ಜಾನ್ವಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಗಣಕಯಂತ್ರ ವಿಭಾಗದ ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.