ಮಧುವನ (ಮಾ.14) : ವರ್ಷದಲ್ಲಿ ಒಂದು ದಿನ ಸಾಂಕೇತಿಕವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸದೇ ಪ್ರತಿ ದಿನವೂ ಮಹಿಳೆಯರ ದಿನ ಆಚರಿಸುವಂತಾಗ ಬೇಕು.ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ, ಹೆಂಡತಿಯಾಗಿ ಹೀಗೆ ಮುಂತಾದ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರಿಗೆ ಅದಕ್ಕೆ ಪೂರಕವಾದ ಸಮಾಜದ ನಿರ್ಮಾಣವಾಗಬೇಕು ಎಂದು ಸೌಖ್ಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಪ್ರೊ, ಲಿಸಾ ಲಿಯೋ ಹೇಳಿದರು. ಅವರು ಇ ಸಿ ಆರ್ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕ ಯೋಜಿಸಿದ್ದ “ವಿಶ್ವ ಮಹಿಳಾ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ್ ಸಾವಳಸಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ,ಮಹಿಳೆಯರ ಕುರಿತು “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ” ಅರ್ಥಾತ್ ಎಲ್ಲಿ ನಾರಿಯರು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎಂದು ಹೇಳಿದರು. ಏವಿಯೇಷನ್ ವಿಭಾಗ ಮುಖ್ಯಸ್ಥರಾದ ಶ್ರೀ ಮಿರ್ ತಾಜ್ದಾರ್ ಹುಸೇನ್ ಮಾತನಾಡಿ ಮಹಿಳೆಯರು ದೇಶದ ಬೆನ್ನುಲುಬು ಹಾಗೂ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿರುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳಾ ಸಿಬ್ಬಂದಿಗಳಿಗೆ ಮನೋರಂಜನಾ ಚಟುವಟಿಕೆಗಳನ್ನು ಹಾಗೂ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರೊ. ಲಿಸಾ ಲಿಯೋ ಬಹುಮಾನ ವಿತರಿಸಿದರು. ಶ್ರೀ ಆದಿತ್ಯ, ಶ್ರೀ ಶಾಸ್ತ್ರ ಮೊಬೈಲ್ ಶಾಪ್ ಕೋಟ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹಿಳಾ ದೌರ್ಜನ್ಯ ತಡೆ ಘಟಕದ ಸಂಯೋಜಕರಾದ ಕುಮಾರಿ ಪಲ್ಲವಿ ಮತ್ತು ಕುಮಾರಿ ಸಮಿತಾ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಎನ್.ಎಸ್.ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ರಾಕೇಶ್ ಸ್ವಾಗತಿಸಿದರು,ಶ್ರೀ ಸಂದೀಪ ವಂದಿಸಿದರು. ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀ ಅಶೋಕ್ ಜೋಗಿ ಕಾರ್ಯಕ್ರಮದ ನಿರೂಪಿಸಿದರು..