ಸೈಬರ್ ಕ್ರೈಮ್ ಎನ್ನುವಂತಹ ಕಂಪ್ಯೂಟರ್ ಮತ್ತು ನೆಟ್ವರ್ಕ್ ಆಧಾರಿತ ಕಾನೂನುಬಾಹಿರ ಚಟುವಟಿಕೆ ಇಂದು ಆಧುನಿಕ ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ನೆಟ್ ಗಳ ವಿವಿಧ ಮೂಲಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ದುಷ್ಕರ್ಮಿಗಳು ಸಾರ್ವಜನಿಕರನ್ನು ಮೋಸಗೊಳಿಸುವುದು, ವೈಯಕ್ತಿಕ ಬ್ಯಾಂಕ್ ಖಾತೆಗೆ ಕನ್ನ ಹಾಕುವಂಥದ್ದು, ಸುಳ್ಳು ಮಾಹಿತಿ ಮೂಲಕ ದಾರಿ ತಪ್ಪಿಸುವಂತದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದರಿಂದಾಗಿ ಜನತೆ ತಂತ್ರಜ್ಞಾನದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಕ್ರೈಂ ಇಡೀ ದೇಶದ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಗಳಿಸುವಷ್ಟು ತನ್ನ ದುಷ್ಟ ಪ್ರಭಾವವನ್ನು ಬೀರಿದೆ.
ಸೈಬರ್ ಕ್ರೈಂ ಇದೊಂದು ಕಾನೂನುಬಾಹಿರ ಕೃತ್ಯವಾಗಿದ್ದು ಇದನ್ನು ನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಬೇರೆ ಬೇರೆ ರೀತಿಯ ನಿಯಂತ್ರಣ ಕ್ರಮಗಳನ್ನು ಸರಕಾರ ತಂದಿದೆ. ಆದರೆ ಸರಕಾರದ ಕಣ್ಣು ತಪ್ಪಿಸಿ ಕೆಲವು ದುಷ್ಕರ್ಮಿಗಳು ಸೈಬರ್ ಕ್ರೈಮ್ ನಡೆಸುತ್ತಿದ್ದು, ಇಂದು ಸೈಬರ್ ಕ್ರೈಮ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕದ ವಿಷಯ.
ಆ ನಿಟ್ಟಿನಲ್ಲಿ ಸರ್ಕಾರ ಇಂದು ಸೈಬರ್ ಕ್ರೈಮ್ ತಡೆಗಟ್ಟಲು ಸೈಬರ್ ಸೆಕ್ಯೂರಿಟಿ ಎನ್ನುವ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕ ನೆಲೆಯಲ್ಲಿ ಹಾಕಿಕೊಂಡಿದ್ದು, ಸಾರ್ವಜನಿಕರು ಇದರಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಸೂಚಿಸಿದೆ. ಸೈಬರ್ ಸೆಕ್ಯೂರಿಟಿ ಇಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದ್ದು, ಕರ್ನಾಟಕ ಸರ್ಕಾರ ಈಗಾಗಲೇ K-Tech CoE for Cyber Security ಎನ್ನುವ ಕೇಂದ್ರವನ್ನು ಪ್ರಾರಂಭಿಸಿ ತಂತ್ರಜ್ಞಾನದ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಅವಿಷ್ಕಾರ ತಂತ್ರ, ಸೃಜನಶೀಲತೆ, ತಂತ್ರಜ್ಞಾನದ ಸದ್ಬಳಕೆ, ಸೈಬರ್ ಸೆಕ್ಯೂರಿಟಿ ಕುರಿತಾದ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ.
ಆ ನಿಟ್ಟಿನಲ್ಲಿ ನಿಮ್ಮ ಕುಂದ ವಾಹಿನಿ ಅಂತರ್ಜಾಲ ಸುದ್ದಿತಾಣ ಕರ್ನಾಟಕ ಸರ್ಕಾರ ಸೈಬರ್ ಸೆಕ್ಯೂರಿಟಿಯ ಮೂಲಕ ತೆಗೆದುಕೊಂಡ ಮುಂಜಾಗೃತಾ ಅರಿವು ಕಾರ್ಯಕ್ರಮಗಳನ್ನು ಕಿರು ಅಂಕಣಗಳ ರೂಪದಲ್ಲಿ ಪ್ರಕಟಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ತಿಳಿಯಪಡಿಸಲು ಇಚ್ಚಿಸುತ್ತಿದ್ದೇವೆ.
ಸೈಬರ್ ಸೆಕ್ಯೂರಿಟಿ : ಒಂದಿಷ್ಟು ಮಾಹಿತಿ – ಜಾಗ್ರತಿ