ಕುಂದಾಪುರ (ಮಾ. 27): ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವತಿಯಿಂದ ಉಪನ್ಯಾಸಕರಿಗಾಗಿ ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ ನಲ್ಲಿ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಕುರಿತು ಐದು ದಿನಗಳ ಆನ್ ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಲಿಕೆ ಎನ್ನುವುದು ನಿರಂತರವಾದ ಪ್ರಕ್ರಿಯೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಕರು ತಮ್ಮ ಜ್ಞಾನ ಕೌಶಲ್ಯವನ್ನು ವೃದ್ದಿಗೊಳಿಸಿಕೊಳ್ಳುವುದು ಅವಶ್ಯಕ ಎಂದು ಕಾರ್ಯಾಗಾರದ ಉದ್ಘಾಟಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಣಿಪಾಲ್ ಡಾಟ್ ನೆಟ್ ಕಂಪೆನಿಯ ಸಂಶೋಧನೆ ಮತ್ತು ತರಬೇತಿ ವಿಭಾಗದ ನಿರ್ದೇಶಕರಾದ ಡಾ|ಯು.ಸಿ. ನಿರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎನ್.ಐ.ಟಿ.ಕೆ. ಸುರತ್ಕಲ್ ಇದರ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾದ್ಯಾಪಕರಾದ ಡಾ|ಲಕ್ಷಿನಿಧಿ, ಮೂಡ್ಲಕಟ್ಟೆ, ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಡಾ| ಅಬ್ದುಲ್ ಕರೀಮ್, ಎಂ.ಐ.ಟಿ. ಮಣಿಪಾಲ ಇದರ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ|ತನ್ವೀರ್ ಅಲಿ ಹಾಗೂ ಎನ್.ಎಂ.ಎ.ಎಂ.ಐ.ಟಿ. ನಿಟ್ಟೆ ಇದರ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ|ಶಿವಪ್ರಕಾಶ್ ಇವರು ವಿಷಯದ ಬಗ್ಗೆ ತರಬೇತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ’ಸೋಜಾ ರವರು ಕಾರ್ಯಾಗಾರಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಪ್ರೊ. ವರುಣ ಕುಮಾರ್ ಹಾಗೂ ಪ್ರೊ. ಸೂಕ್ಷ್ಮ ಅಡಿಗ ಇವರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಇಪ್ಪತ್ತಕ್ಕೂ ಹೆಚ್ಚು ಕಾಲೇಜಿನ ಪ್ರಾಧ್ಯಾಪಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು ಎಂದು ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಬಾಲನಾಗೇಶ್ವರ ತಿಳಿಸಿದ್ದಾರೆ.