ಉಡುಪಿ (ಏ, 7) : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳು “ಯಕ್ಷಸಿರಿ ಶಾಶ್ವತ ಬಳಗ” ಎಂಬ ಹೆಸರಿನಲ್ಲಿ ಸಂಘಟನೆಯನ್ನು ಹುಟ್ಟು ಹಾಕಿದ್ದು, ಇದರ ವತಿಯಿಂದ ಶ್ರೀ ಕೃಷ್ಣ ಲೀಲಾರ್ಣವ’ ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಎರ್ಮಾಳಿನ ಶ್ರೀ ಲಕ್ಷ್ಮೀ ಜನಾರ್ಧನ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ವಹಿಸಿದ್ದರು. ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಬಳಗದ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು. ಬಹುತೇಕ ಕಲಾವಿದರು ದೂರದ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳ ಉದ್ಯೋಗಿಗಳಾಗಿದ್ದರೂ, ತಮ್ಮ ಊರಿನ ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ರವರು ಈ ಸಂದರ್ಭದಲ್ಲಿ ಮಾತನಾಡಿ ಯುವಕರು ತಮ್ಮನ್ನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಖ್ಯಾತ ಯಕ್ಷಗಾನ ಕಲಾವಿದೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶೀಲಾ ಕೆ ಶೆಟ್ಟಿ, ದೇವಳದ ಆಡಳಿತ ಮುಕ್ತೇಸರರಾದ ಶ್ರೀ ಅಶೋಕ್ ರಾಜ್ ಎರ್ಮಾಳ್, ದೇವಳದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣಮೂರ್ತಿ ಭಟ್, ನಿವೃತ್ತ ಉಪನ್ಯಾಸಕರಾದ ವೈ .ರಾಮ ಕೃಷ್ಣರಾವ್ ಮತ್ತು ಬಳಗದ ಪ್ರಮುಖರಾದ ದೇವಿ ಪ್ರಸಾದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆರೆದಿದ್ದ ಎಲ್ಲಾ ಗಣ್ಯರು ಬಳಗದ ಮುಂದಿನ ಎಲ್ಲಾ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಬಂಟಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್ಗಳು, ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಹಳೆವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಳಗದ ಸದಸ್ಯರಾದ ಶ್ರೀನಾಥ್ ಪಾಟ್ಕರ್ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀ ಜಯಪ್ರಕಾಶ್ ನಿಡ್ವಣ್ಣಾಯ ಮತ್ತು ಶ್ರೀ ವಾಸುದೇವ ಭಟ್ ಎರ್ಮಾಳು ಯಕ್ಷಗಾನದ ಭಾಗವತರಾಗಿದ್ದರು.