ನವ ಮಾಸ ತುಂಬುವವರೆಗೆ
ತನ್ನ ಕರುಳ ಕುಡಿಯನ್ನು ರಕ್ಷಿಸಿ
ಜಗತ್ತಿನ ಯಾವ ಮೂಲೆಯಲ್ಲೂ
ಸಿಗಲಾರದಂತಹ ಬೆಚ್ಚನೆಯ
ತನ್ನ ಗರ್ಭ ದಲ್ಲಿರಿಸಿ,
ಜೀವ- ಜೀವನವನ್ನು ಲೆಕ್ಕಿಸದೆ
ತನ್ನ ಮಗುವಿಗೆ ಜನ್ಮ ನೀಡುವ ಮಾತೆಯೇ
ನಿನಗಿಂತ ದೊಡ್ಡ ದೇವರಿದ್ದಾರೆಯೇ ಈ ಜಗದಲಿ
ನನ್ನ ಬದುಕಿನ ಪ್ರತ್ಯಕ್ಷ ದೇವರೆಂದರೆ
ಅದು ನೀನೆ ನನ್ನ ಅಮ್ಮ
ನನ್ನ ಹಡೆದವ್ವ
ನನ್ನ ಎಲ್ಲ ತಪ್ಪುಗಳನ್ನು ತಿದ್ದಿ ತೀಡಿ
ಒಳ್ಳೆಯ ಸಂಸ್ಕಾರ ಕಲಿಸಿ
ಸುಸಂಸ್ಕ್ರತನನ್ನಾಗಿ ಮಾಡಿದೆ ನೀ
ವಿದ್ಯೆ ಕೊಟ್ಟು
ಬುದ್ದಿಯನ್ನು ಸದಾ ಒಳಿತಿನೆಡೆಗೆ
ಹರಿಸುವಂತೆ ದಾರಿ ತೋರಿದೆ ನೀ
ನಿನ್ನನ್ನು ಹೇಗೇ ಸಂಭೋದಿಸಿದರೂ
ನೀ ತಡೆಯಲಿಲ್ಲ
ಅಮ್ಮ ಅಂದೆ, ಅವ್ವ ಅಂದೆ
ಅಬ್ಬೆ ಅಂದೆ, ಮಾ ಅಂದೆ
ಜನನಿ ಅಂದೆ, ಮಾತೆ ಅಂದೆ
ಈಜಿಪ್ಟಿನಲ್ಲಿ ”ಶವದ ಪೆಟ್ಟಿಗೆ”
ಎಂದೇ ಸಂಭೋದಿಸಲ್ಪಡುವ
‘ಮಮ್ಮಿ’ ಎಂದರೂ
ನೀ ಆಕ್ಷೇಪಿಸಲಿಲ್ಲ, ದೂರಲಿಲ್ಲ
ನಾ ತೊದಲು ನುಡಿದಾಗ
ಬದಲಾಗಿ ನೀ ನಗಲಿಲ್ಲ
ನನ್ನ ಮಾತನ್ನು ತಿದ್ದಿ ತೀಡಿ
ನನಗೆ ಭಾಷೆ ಕಲಿಸಿದೆ
ಅತ್ತಾಗ ಸಂತೈಸಿದೆ
ನಕ್ಕಾಗ ನನ್ನೊಂದಿಗೆ ನಕ್ಕೆ
ಸೋತಾಗ , ಗೆಲುವಿನ ಪಾಠಗಳನ್ನು ಹೇಳಿ
ಹುರಿದಂಬಿಸಿದೆ
ಹೊಸ ಛಲವನ್ನು ಹುಟ್ಟುಹಾಕಿ
ಏನಾದರೊಂದು ಸಾಧಿಸಬೇಕೆಂಬ
ಚೈತನ್ಯ ಮೂಡಿಸಿದೆ
ನನ್ನಲ್ಲಿ ನಿನ್ನ ಕಾಣ ಬಯಸಿದೆ
ನಿನಗೊದಗದ ಅವಕಾಶಗಳನ್ನು
ನನ್ನ ಕಣ್ಣೆದುರಿಗಿಟ್ಟೆ
ನಿನ್ನ ನೋವನ್ನು ಬದಿಗಿರಿಸಿ
ನನ್ನ ಖುಷಿಯನ್ನು ಎದುರು ನೋಡಿದೆ
ನಿನ್ನ ಬದುಕನ್ನೇ
ನನಗಾಗಿ ಮುಡಿಪಾಗಿಸಿದ
ನಿನ್ನ ಋಣವನ್ನು
ನಾ ಹೇಗೆ ತೀರಿಸಲಿ ಅಮ್ಮ
‘ಋಣ ಸಂದಾಯ’ ಅದು ಅಸಾಧ್ಯದ ಮಾತು
ನನ್ನ ಉಸಿರಿನ ಕೊನೆವರೆಗೂ
ನಿನ್ನ ಬಯಸುವೆ, ಪ್ರೀತಿಸುವೆ, ಆರಾಧಿಸುವೆ
ನೀನಿರದ ನನ ಬಾಳು ನಶ್ವರ ಅಮ್ಮ
ನಿನ್ನ ಬಗ್ಗೆ ಎಷ್ಟು ಹೇಳಿದರೂ-ಹೊಗಳಿದರೂ
ಅದು ಕಡಿಮೆ ಅಮ್ಮ
ನಿನ್ನ ಬಗೆಗಿನ ಮಾತು ಅನಂತ ಅಮ್ಮ
ಸದಾ ನಗುತಿರು, ನನ್ನ ಮುದ್ದು ಅಮ್ಮ…………
ಸವಿತಾ ಶೆಟ್ಟಿ