ಅಮೆರಿಕದ ಮಾರ್ಕ್ ಜುಕರ್ಬರ್ಗ್ 2004 ರಲ್ಲಿ ಹುಟ್ಟುಹಾಕಿದ ಫೇಸ್ಬುಕ್ ಎನ್ನುವ ಸಾಮಾಜಿಕ ಜಾಲತಾಣ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಜಾಗತಿಕವಾಗಿ ಹರಡಿಕೊಂಡಿರುವ ಈ ಫೇಸ್ಬುಕ್ ಇಂದು ಕೋಟ್ಯಂತರ ಬಳಕೆದಾರರನ್ನು ಹೊಂದಿದೆ. ಫೇಸ್ಬುಕ್ ಬಳಕೆದಾರರು ಬೇರೆಬೇರೆ ಉದ್ದೇಶವನ್ನಿಟ್ಟುಕೊಂಡು ಫೇಸ್ಬುಕ್ ಖಾತೆಗಳನ್ನು , ಫೇಸ್ಬುಕ್ ಪೇಜ್ ಹಾಗೂ ಗ್ರೂಪ್ ಗಳನ್ನು ತೆರೆಯುತ್ತಾರೆ. ಆಮೂಲಕ ಇತರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ.
ನಮ್ಮ ದೇಶದಲ್ಲೂ ಕೋಟ್ಯಾಂತರ ಫೇಸ್ ಬುಕ್ ಬಳಕೆದಾರರಿದ್ದಾರೆ. ಅದೆಷ್ಟೋ ಫೇಸ್ಬುಕ್ ಖಾತೆಗಳು, ಗ್ರೂಪ್ ಹಾಗೂ ಪೇಜ್ ಗಳು ಹುಟ್ಟಿಕೊಂಡಿದೆ. ನಮ್ಮ ಕುಂದಾಪುರದ ಮಟ್ಟಿಗೆ ಹೇಳುದಾದರೆ ಈ ಭಾಗದ ಜನತೆ ಉದ್ಯೋಗನಿಮಿತ್ತ ಅಥವಾ ಹೊಟ್ಟೆಪಾಡಿಗಾಗಿ ಊರನ್ನು ಬಿಟ್ಟು ಪರವೂರು ಹಾಗೂ ವಿದೇಶಗಳಲ್ಲಿ ತಮ್ಮ ನೆಲೆಗಳನ್ನು ಕಂಡುಕೊಂಡಿದ್ದಾರೆ. ತಮ್ಮ ಊರುಗಳಲ್ಲಿ ನಡೆಯುವ ವಿವಿಧ ವಿದ್ಯಮಾನ ಜೊತೆಗೆ ಊರಿನ ಇನ್ನಿತರ ಬೆಳವಣಿಗಳನ್ನು ತಿಳಿದುಕೊಳ್ಳಲು ಅದೆಷ್ಟೋ ಮನಸ್ಸುಗಳು ಕಾದು ಕುಳಿತಿದ್ದವು. ಅದಕ್ಕೆ ಫೇಸ್ಬುಕ್ ಉತ್ತಮ ವೇದಿಕೆ ಎನ್ನುವುದು ಹಲವರ ಅಭಿಪ್ರಾಯ ವಾಗಿತ್ತು. ಈ ವಿಷಯವನ್ನು ಗಮನಿಸಿದ ಕುಂದಾಪುರ ಮೂಲದ ಶ್ರೀ ರಾಧಾಕೃಷ್ಣ ಶೆಟ್ಟಿಯವರು ಮೇ 05, 2010 ರಂದು “ನಮ್ಮ ಕುಂದಾಪುರ” ಎನ್ನುವ ಫೇಸ್ಬುಕ್ ಗ್ರೂಪನ್ನು ಪ್ರಾರಂಭಿಸಿದರು.
ಇದು ಕುಂದಾಪುರ ಮೂಲದ ಮೊದಲ ಫೇಸ್ಬುಕ್ ಗ್ರೂಪ್. ಸತತ 11 ವರ್ಷಗಳಿಂದ ನಿರಂತರವಾಗಿ ಕುಂದಾಪುರದ ಪ್ರಾದೇಶಿಕತೆಯ ಸಂಸ್ಕೃತಿ ಆಚಾರ-ವಿಚಾರ, ಭಾಷೆ, ಸಾಧಕರ ಪರಿಚಯ, ಶುಭ ಹಾರೈಕೆ, ಸಾಹಿತ್ಯ, ಸುದ್ದಿ ಸಮಾಚಾರ, ಇನ್ನಿತರ ಸಿಹಿ- ಕಹಿ ವಿದ್ಯಮಾನಗಳ ವಸ್ತುನಿಷ್ಠ ವಿಷಯಗಳನ್ನು ತಿಳಿಸುವ ಕಾರ್ಯ ನಮ್ಮ ಕುಂದಾಪುರ ಫೇಸ್ಬುಕ್ ಗ್ರೂಪ್ ಮಾಡುತ್ತಾ ಬಂದಿದೆ.
ಜಗತ್ತಿನಾದ್ಯಂತ ಹರಡಿರುವ ಕುಂದಗನ್ನಡಿಗರ ಭಾವನಾತ್ಮಕ ಕೊಂಡಿಯಾಗಿ ನಮ್ಮ ಕುಂದಾಪುರ ಗ್ರೂಪ್ ಗುರುತಿಸಿಕೊಂಡಿರುವುದು ನಿಜಕ್ಕೂ ಪ್ರಶಂಸನೀಯ. ನಮ್ಮ ಕುಂದಾಪುರ ಫೇಸ್ಬುಕ್ ಗ್ರೂಪ್ ಪ್ರಪಂಚದ ಎಲ್ಲ ಖಂಡಗಳ ವಿವಿಧ ದೇಶಗಳಲ್ಲಿ ಚದುರಿಕೊಂಡ ಕುಂದಾಪುರ ಭಾಗದ ಜನತೆಯನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಿ ಇದೀಗ 11 ವರ್ಷ ಪೂರೈಸಿ 12ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ. ಪ್ರಸ್ತುತ ನಮ್ಮ ಕುಂದಾಪುರ ಫೇಸ್ಬುಕ್ ಗ್ರೂಪಿನಲ್ಲಿ 2 ಲಕ್ಷ 13 ಸಾವಿರಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಇದು ಈ ಗ್ರೂಪಿನ ಕುರಿತಾಗಿರುವ ಅಭಿಮಾನವನ್ನು ವ್ಯಕ್ತಪಡಿಸುತ್ತದೆ.
ಈಗಾಗಲೇ ಈ ಗ್ರೂಪಿನ ಸದಸ್ಯರು ಗಳು ಗಳು ವಿವಿಧ ಕಡೆಗಳಲ್ಲಿ ಮಿತ್ರಕೂಟ ಗಳನ್ನು ಆಯೋಜಿಸಿ ಕುಂದಗನ್ನಡಿಗರ ಮನಗೆದ್ದಿರುವುದು ಪ್ರಶಂಸನೀಯ. ಈ ಗುಂಪಿನ ಮುಖ್ಯಸ್ಥರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಮತ್ತು ಅವರ ತಂಡ ನಿರಂತರವಾಗಿ ಈ ಗುಂಪನ್ನು ಜೀವಂತವಾಗಿರಿಸುವ ಕೆಲಸ ಮಾಡುತ್ತಿದ್ದಾರೆ. ಈ ಗ್ರೂಪಿನ ಹುಟ್ಟು ಹಾಗೂ ಉದ್ದೇಶ ಗಳನ್ನು ಕೇಳಿದಾಗ ಶ್ರೀ ರಾಧಾಕೃಷ್ಣ ಶೆಟ್ಟಿ ಅವರು ಹೇಳಿದ ಮಾತು ಈ ಕೆಳಗಿನಂತಿದೆ. ಗುಂಪಿನ ಇತಿಹಾಸ ಕಂಡ್ರೆ ನಾವು ಹೇಂಗೆ ಇಷ್ಟೊಂದ್ ಜನಪ್ರಿಯ ಗುಂಪಾಯ್ತ್ ಅಂದೇಳಿ ಗೊತ್ತ್ ಆತ್ತ್ .
ಮೊದಮೊದಲು ಗುಂಪಿಗೆ ಸೇರ್ದರೆಲ್ಲ, ಅದ್ರಂಗೂ ಪರದೇಶಕ್ಕೆ ಕಾರಣಾಂತರದಿಂದ ಹೋದರೆಲ್ಲರೂ ಊರಿನ್ ಪರಂಪರೆ, ಆಚಾರ ವಿಚಾರ, ಸಂಸ್ಕ್ರತಿ, ಊರಿನ ಅನುಕರಣೀಯ ಹಿರಿಯರು, ಸ್ಥಳ ಪುರಾಣ, ಕಣ್ಮನ ಸೆಳೆಯುವ ಆಕರ್ಷಣೀಯ ಸ್ಥಳಗಳು ಇತ್ಯಾದಿ ಗುಂಪಿನ ಪುಟದಲ್ಲಿ ಹಾಕುತ್ತ ಇರಿ, ನಮ್ಮ ಮಕ್ಕಳಿಗೆ ನಾವು ಬಿಟ್ಟು ಬಂದಿರುವ ಸಂತೋಷದ ದಿನಗಳನ್ನು ವಿವರಿಸುದಕ್ಕೆ ಸಹಾಯ ಅತ್ತ್, ಮುಂದಿನ ಜನಾಂಗಕ್ಕೂ ನಮ್ಮ ಗುಂಪು ಒಂದು ಕೈಪಿಡಿ ಅಯಿರ್ಲಿ ಅಂದೆಲ್ಲ ಹೇಳ್ತಿದ್ರ್, ಗುಂಪಂಗ್ ಇದ್ದದ್ದ್ ಕಂಡ್ಕಂಡ್. ಇದೇ ನಮ್ಮ ಗುಂಪಿನ ಯಶಸ್ಸಿನ ಗುಟ್ಟು.
ಇದನ್ನೇ ಮುಂದರ್ಸ್ಕಂಡ್ ಹೋಪ್ಕೆ ನಿಮ್ಮ ಸಹಕಾರ ಬೇಕ್.
ಈ ನಿಮ್ಮ “ನಮ್ಮ ಕುಂದಾಪುರ” ಗುಂಪು ಒಂದು ಸೌಹಾರ್ದಯುತ ಚಿಕ್ಕ ಚೊಕ್ಕ ಕುಟುಂಬದಂತೆ ಇರುವುದು ಸಂತೋಷದ ಮಾತು. ಇಲ್ಲಿ ಯಾರೂ ದೊಡ್ಡವರೂ ಅಲ್ಲ ಚಿಕ್ಕವರೂ ಅಲ್ಲ. ಎಲ್ಲರನ್ನೂ ಒಂದೇ, ಸಮಾನತೆಯಿಂದ ಒಬ್ಬರನ್ನೊಬ್ಬರು ಅನ್ಯೋನ್ಯತೆಯಿಂದ ಅಭಿನಂದಿಸುತ್ತಿರುವುದು ಅಭಿನಂದನಾರ್ಹ. ಆದಷ್ಟು ನಾನೇ ಬರೀತೇ. ಬಿಟ್ಟು ಹೋದದ್ದು ನೀವೆಲ್ಲ ನೆನಪು ಮಾಡಿ ಕಾಮೆಂಟ್ಸ್ ನಲ್ಲಿ ಬರೀನಿ, ಮುಂದೆ ಅದನ್ನೆಲ್ಲ ಸೇರ್ಸುವ . ಇದು ರಾಧಾಕೃಷ್ಣ ಶೆಟ್ಟಿ ಅವರ ಅವರ ಮನದಾಳದ ಮಾತು.
ಯಾವುದೇ ಜಾತಿ,ಮತ ,ಧರ್ಮ ತಾರತಮ್ಯವಿಲ್ಲದೆ ಯಾವುದೇ ರೀತಿಯ ವಿವಾದಾಸ್ಪದ, ಅಹಿತಕರ ಹಾಗೂ ಪ್ರಚೋದನಕಾರಿ ವಿಷಯಗಳಿಗೆ ಕಿಂಚಿತ್ತು ಅವಕಾಶ ಮಾಡಿಕೊಡದೆ ತನ್ನ ಮೂಲ ಉದ್ದೇಶವನ್ನು ಕಾಪಾಡಿಕೊಂಡು ಬಂದಿರುವ ನಮ್ಮಕುಂದಾಪುರ ಗ್ರೂಪ್ ಯಶಸ್ವಿ 12 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಈ ಸುಸಂದರ್ಭದಲ್ಲಿ ನಮ್ಮ ಮನದಾಳದ ಅಭಿನಂದನೆಗಳು.
– ಕುಂದವಾಹಿನಿ ಬಳಗ
www.kundavahini.com
Kannada online news portal