ಕುಂದಾಪುರ (ಮೇ, 8) : ಕುಂದಾಪುರ ಭಾಗದ ಜನತೆಯ ದಶಕಗಳ ಕನಸಾಗಿದ್ದ ಫ್ಲೈ ಓವರ್ ನಲ್ಲಿ ಹಲವು ದಿನಗಳಿಂದ ವಾಹನಗಳು ಓಡಾಟ ಪ್ರಾರಂಭಿಸಿದೆ.ಆದರೆ ಕುಂದಾಪುರ ಸಿಟಿಯನ್ನು ನೀವು ಪ್ರವೇಶಿಸಬೇಕಾದರೆ ಮೊದಲೇ ಜಾಗ್ರತೆ ವಹಿಸಬೇಕಾಗುತ್ತದೆ.ಕುಂದಾಪುರ ಸಿಟಿ ಪ್ರವೇಶಿಸಬೇಕಾದರೆ ಉಡುಪಿ ಕಡೆಯಿಂದ ಬರುವವರು ಹಂಗಳೂರಿನಲ್ಲಿಯೇ ಅಂದರೆ ದುರ್ಗಾಂಬಾ ಆಫೀಸ್ ಪಕ್ಕದ ಸರ್ವಿಸ್ ರಸ್ತೆಯನ್ನೇ ಹಿಡಿಯಬೇಕಾಗುತ್ತದೆ. ಏಕೆಂದರೆ ಹಂಗಳೂರಿನಲ್ಲಿ ಪ್ರಾರಂಭವಾಗುವ ಫ್ಲೈಓವರ್ ರಸ್ತೆಯನ್ನು ನೀವು ಏರಿದರೆ ಮತ್ತೆ ಇಳಿಯುವುದು ಕುಂದಾಪುರದ ಸಂತೆ ಮಾರುಕಟ್ಟೆ ಬಳಿ.

ಕುಂದಾಪುರ ಸಿಟಿಯನ್ನು ಪ್ರವೇಶಿಸಲು ರಸ್ತೆ ಮಾರ್ಗಸೂಚಿ ಸರಿಯಾಗಿ ಅಳವಡಿಸದೇ ಇರುವುದರಿಂದ ಫ್ಲೈಓವರ್ ಏರಿದವರು ಕುಂದಾಪುರ ಸಿಟಿ ಪ್ರವೇಶಿಸಲು ಹರಸಾಹಸ ಪಡಬೇಕಾಗುತ್ತದೆ. ಹಂಗಳೂರಿನ ಬಳಿ ಹಾಕಿರುವ ಸೂಚನಾ ಫಲಕದಲ್ಲಿ ಎಕ್ಸ್-ಪ್ರೆಸ್ ಮತ್ತು ಲೋಕಲ್ ಬಸ್ಸುಗಳಿಗೆ ಮಾತ್ರ ಪ್ರವೇಶ ಎಂದು ಹಾಕಿದ್ದಾರೆ ಹೊರತು ಕುಂದಾಪುರ ಸಿಟಿ ಪ್ರವೇಶಿಸುವ ಕುರಿತು ಅಲ್ಲಿ ಸರಿಯಾದ ಮಾರ್ಗಸೂಚಿ ಅಳವಡಿಸಿಲ್ಲ. ಇದರಿಂದ ಇತರೆ ವಾಹನಗಳಿಗೆ ಅನಾನುಕೂಲವಾಗುತ್ತಿದೆ.
ಈ ಕುರಿತು ಸಂಬಂಧಪಟ್ಟ ಇಲಾಖೆಯವರು ಕುಂದಾಪುರ ಸಿಟಿ ಪ್ರವೇಶಿಸಲು ಸೂಕ್ತವಾದ ರಸ್ತೆ ಮಾರ್ಗಸೂಚಿಯನ್ನು ಅಳವಡಿಸಿದರೆ ಉತ್ತಮ ಎಂದು ಹಲವು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.










